ಬೆಂಗಳೂರು: ಇನ್ನು ಮುಂದೆ ಕರ್ನಾಟಕದ ಉರ್ದು ಶಾಲೆಗಳಲ್ಲಿ ಶುಕ್ರವಾರದಂದು ಮಕ್ಕಳಿಗೆ ಚೀಲದ ಹೊರೆ ಇರುವುದಿಲ್ಲ. ಆ ದಿನದಂದು ಮಕ್ಕಳಿಗೆ ಪಾಠದ ಬದಲಿಗೆ ಇತರ ಚಟುವಟಿಕೆಗಳನ್ನು ಕಲಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.
“ಶಾಲಾ ಮಕ್ಕಳಿಗೆ ಸಂತಸದಾಯಕ ಕಲಿಕೆ ನೀಡುವ ನಿಟ್ಟಿನಲ್ಲಿ ಎಲ್ಲ ಶಾಲೆಗಳಲ್ಲಿ ಪ್ರತಿ ತಿಂಗಳ 3ನೇ ಶನಿವಾರ ಮಕ್ಕಳ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸುವಂತೆ ಸೂಚನೆ ನೀಡಲಾಗಿದೆ. ಉರ್ದು ಶಾಲೆಗಳು ಶುಕ್ರವಾರ ಅರ್ಧ ದಿನ ಮತ್ತು ಶನಿವಾರ ಪೂರ್ಣ ದಿನ ಶಾಲೆ ನಡೆಯುತ್ತಿರುವ ಕಾರಣ ʼಸಂಭ್ರಮ ಶನಿವಾರʼ ಆಚರಣೆಯನ್ನು ಶುಕ್ರವಾರ ಅಥವಾ ಶನಿವಾರ ಆಚರಿಸುವ ಕುರಿತು ಹಲವು ಶಾಲೆಗಳು ಮಾರ್ಗದರ್ಶನ ನೀಡುವಂತೆ ಕೋರಿದ್ದವು.” ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಉರ್ದು ಶಾಲೆಗಳಲ್ಲಿ ಶನಿವಾರ ಪೂರ್ಣ ದಿನವಾಗಿದ್ದು, ಶುಕ್ರವಾರ ಅರ್ಧ ದಿನ ಶಾಲೆ ನಡೆಯುವುದರಿಂದ ʼಶುಕ್ರವಾರ ಬ್ಯಾಗ್ ರಹಿತʼ ದಿನವನ್ನಾಗಿ ಆಚರಿಸಲು ಕ್ರಮವಹಿಸುವಂತೆ ಡಿಎಸ್‌ಇಆರ್‌ಟಿ ನಿರ್ದೇಶಕಿ ವಿ.ಸುಮಂಗಲಾ ನಿರ್ದೇಶನ ನೀಡಿದ್ದಾರೆ.
ಶುಕ್ರವಾರದ ದಿನ ಮಕ್ಕಳಿಗೆ ಘನತ್ಯಾಜ್ಯ ನಿರ್ವಹಣೆ, ಸುರಕ್ಷಿತ ತಂತ್ರಜ್ಞಾನ ಬಳಕೆ, ಸುರಕ್ಷತೆ ಮತ್ತು ಭದ್ರತೆ, ಸಾರ್ವಜನಿಕ ಸೌಕರ್ಯ, ರಸ್ತೆ ಸುರಕ್ಷತೆ, ಸ್ವಾಸ್ಥ್ಯ ಮತ್ತು ಶುಚಿತ್ವ, ಮಾದಕ ವಸ್ತು ಬಗೆಗಿನಜಾಗೃತಿ, ಮತ್ತು ಲಿಂಗ ಸಮಾನತೆಯಂತಹ ವಿಷಯಗಳ ಕುರಿತು ಕಲಿಸಲಾಗುವುದು ಡಿಎಸ್‌ಇಆರ್‌ಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.