ನಿರಾಲ ಅವರ ಶಕ್ತಿಯಿಂದ ಬುಲ್ಡೋಜರ್‌ವರೆಗೆ: ಇಂದಿನ ಭಾರತದಲ್ಲಿ ಅಧಿಕಾರ ಕಲಿಸುವ ಬಗೆ

“ನಿಜದಲ್ಲಿ ಬುಲ್ಟೋಜರ್‌ ಎಂಬುದು ಶಕ್ತಿಯ ಒಂದು ಬೃಹತ್‌ ರೂಪ, ಆದರೆ ಅದಕ್ಕೆ ಒಂದು ನಿರ್ದಿಷ್ಟ ಗುರಿಯಿದೆ. ಹಿಂದುತ್ವದ ದೃಷ್ಟಿಕೋನದಲ್ಲಿ ಮಾತ್ರ ಅದು ಕಾನೂನಿನ ನಿಯಮಗಳನ್ನು ಗಾಳಿಗೆ ತೂರಲು ಬೇಕಾದ ಅನಿಯಂತ್ರಿತವಾದ ಶಕ್ತಿಯಾಗಿ ಬದಲಾಗುತ್ತದೆ..” ಅಪೂರ್ವಾನಂದ್ ಅವರ ಮೂಲ ಬರಹ, ಸುನೈಫ್ ಅವರ ಕನ್ನಡ ಅನುವಾದದಲ್ಲಿ

ಅದೊಂದು ರಾಮನವಮಿಯ ದಿನ. ನನ್ನ ಸಹೋದ್ಯೋಗಿಯೊಬ್ಬರ ಜೊತೆಗೆ ರಾಮ್‌ ಕಿ ಶಕ್ತಿ ಪೂಜಾದ ಗಾಢತೆಯ ಬಗ್ಗೆ ಚರ್ಚಿಸುತ್ತಾ ಕೂತಿದ್ದೆ. ಸೂರ್ಯಕಾಂತ್‌ ತ್ರಿಪಾಠಿ ‘ನಿರಾಲ’ ಅವರ ಪ್ರತಿಮಾರೂಪದ ಈ ನೀಲ್ಗವಿತೆ ತನ್ನನ್ನು ತಾನು ಅನಾವರಣಗೊಳಿಸಲು ನಿರಾಕರಿಸುವ ಕೃತಿ. ಅದೆಷ್ಟು ಬಾರಿ ಆ ಸಾಲುಗಳನ್ನು ಓದಿಕೊಂಡರೂ ಪ್ರತಿ ಬಾರಿಯೂ ಹೊಸ ಹೊಳವನ್ನು ನೀಡುವ ಕವಿತೆ.

ನಮ್ಮ ಮಾತುಕತೆಯು ಕವಿತೆಯ ಕೊನೆಯ ಚರಣಗಳ ಬಗ್ಗೆ ನಡೆಯುತ್ತಿತ್ತು. ರಾಮನ ಕಠಿಣ ತಪಸ್ಸಿಗೆ ಮನಸ್ಸೋತ ದುರ್ಗೆಯು ತನ್ನ ಪೂರ್ಣ ರೂಪವನ್ನು ರಾಮನಿಗೆ ದರ್ಶಿಸುವ ಸಾಲುಗಳು ಅವು.

ನಿರಾಲರ ಒಂದು ಸಾಲಿನಲ್ಲಿ ನಾವು ನಿಂತಿದ್ದೆವು. ಅದು ಮಹಾಶಕ್ತಿಯ ವಿವರಣೆಯನ್ನು ನೀಡುವ ಸಾಲು. ಆ ಸಾಲು ಅದೇನನ್ನು ಹೇಳಲು ಪ್ರಯತ್ನಿಸುತ್ತಿದೆ. ಅದು ಹೀಗಿದೆ: ಆಕೆಯ ತಲೆಯ ಮೇಲೆ ಶಂಕರ.

ಈ ಕಾವ್ಯಲೋಕದಲ್ಲಿ ದುರ್ಗೆಯು ಕೇವಲ ದೇವತೆ. ಭಗವತಿ ಅಥವಾ ಶಕ್ತಿ ಮಾತ್ರವಲ್ಲ. ಇಲ್ಲಿನ ನಿರೂಪಣೆಯು ರಾಮಾಯಣದ ಪರಿಚಿತ ವ್ಯಾಪ್ತಿಯಲ್ಲಿಯೇ ಉಸಿರಾಡುತ್ತದೆ. ಅಂದರೆ, ರಾವಣನ ವಿರದ್ಧ ನಡೆಯುವ ಅಂತಿಮ ಯುದ್ಧ. ಆದರೆ, ನಿರಾಲರ ಮತ್ತೊಬ್ಬ ಗಂಭೀರ ಓದುಗರಾದ ನಂದಕಿಶೋರ್‌ ನಾವಲ್‌ ಹೇಳುವಂತೆ, ನಿರಾಲರಿಗೆ ರಾಮನ ಈ ಯುದ್ಧವು ತನ್ನ ಪ್ರೀತಿಯ ಪತ್ನಿ ಸೀತೆಯನ್ನು ರಕ್ಷಿಸುವ ಪ್ರಯತ್ನ ಮಾತ್ರವೇ ಆಗಿದೆ.

ಆದರೂ ಸ್ವತಃ ದೇವನಾದ ರಾಮನಿಗೆ, ಒಬ್ಬ ಯಕಶ್ಚಿತ್‌ ಮರ್ತ್ಯ ಜೀವಿ ರಾವಣನು, ಒಬ್ಬ ಭಯಂಕರ ಎದುರಾಳಿಯಾಗಿ ಮಾತ್ರವಲ್ಲದೆ, ಅಜೇಯನಾಗಿಯೂ ಕಾಣಿಸುತ್ತಾನೆ. ಯಾಕೆಂದರೆ, ಸ್ವತಃ ಶಕ್ತಿಯೇ ಅಲ್ಲಿ ರಾವಣನ ಕಡೆಗೆ ನಿಂತಿರುವುದು ರಾಮನಿಗೆ ಅರಿವಾಗುತ್ತದೆ. ಅದು ರಾಮನಿಗೆ ಹಿನ್ನಡೆಯಾಗುತ್ತದೆ. ರಾವಣನ್ನು ಮಡಿಲಲ್ಲಿಟ್ಟುಕೊಂಡಿರುವ ಶಕ್ತಿಯನ್ನು ರಾಮನು ಕಾಣುತ್ತಾನೆ. ಇದು ಅನ್ಯಾಯವೊಂದರ ಧಾರ್ಮಿಕ ಅನುಮೋದನೆ. ಪರಾಶಕ್ತಿಯೇ ಕೇಡಿಗನ ಕಾವಲಿಗಿರುವಾಗ ಯುದ್ಧ ಮಾಡುವುದಾದರೂ ಹೇಗೆ?

ತೀರಾ ಹತಾಶೆಗೊಳ್ಳುವ ರಾಮನು ತನ್ನ ಸಹಚರರಿಗೆ ಈ ಯುದ್ಧವು ಅಸಮಾನತೆಯಿಂದ ಕೂಡಿದೆ ಎಂದು ಹೇಳುತ್ತಾನೆ. ಶಕ್ತಿಯ ವಿರುದ್ಧ ಹೋರಾಡುವುದು ಹೇಗೆ? ಆದರೆ, ಹಿರಿಯನೂ ಬುದ್ಧಿವಂತನೂ ಆದ ಜಾಂಬವಂತ ಹತಾಶ ರಾಮನಿಗೆ ಸಾಂತ್ವನ ನೀಡುತ್ತಾನೆ. ರಾಮನ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸುತ್ತಾನೆ. ಯುದ್ಧದ ಆವೇಶದಿಂದ ಹಿಂದೆ ಸರಿದು ಬೇರೆಯದೇ ರೀತಿಯ ತಪಸ್ಸು ಕೈಗೊಳ್ಳುವಂತೆ ರಾಮನಿಗೆ ಸಲಹೆ ನೀಡುತ್ತಾನೆ. ಅದೊಂದು ಸಾಮಾನ್ಯ ಧಾರ್ಮಿಕ ಆಚರಣೆಯಾಗಿರಲಿಲ್ಲ. ಜಾಂಬವಂತನು ಒಂದು ಹೊಸದೇ ಸವಾಲನ್ನು ಮುಂದಿಡುತ್ತಾನೆ. ರಾಮನು ತನ್ನದೇ ಆದ ಶಕ್ತಿಯ ಮೂಲ ಕಲ್ಪನೆಗೆ ಹಿಂತಿರುಗಬೇಕು. ಅದು ಎರವಲು ಪಡೆದ ರೂಪವಾಗಿರಬಾರದು. ಎಲ್ಲಿಂದಲೋ ದೊರೆತ ಸಾಂಪ್ರದಾಯಿಕ ರೂಪವಾಗಿರಬಾರದು ಅಥವಾ ಸ್ಥಾಪಿತ ಸಿದ್ಧಾಂತವೂ ಆಗಿರಬಾರದು. ಅದು ತನ್ನದೇ ಚೈತನ್ಯದ ಮೂಲಕ ರಾಮನು ಅರಿತುಕೊಳ್ಳುವ ಶಕ್ತಿಯಾಗಿರಬೇಕು. ರಾಮನು ಅದಕ್ಕೊಪ್ಪುತ್ತಾನೆ. ಈಗ ರಾಮನು ಅಧಿಕಾರವನ್ನು ಹೊಸದಾಗಿ ಕಲ್ಪಿಸಿಕೊಳ್ಳಬೇಕು.

ಅದರ ವಿಧಿಗಳೆಲ್ಲ ಮುಗಿಯುತ್ತಾ ಬಂದು, ಕೊನೆಗೆ ನೂರಾ ಎಂಟು ನೀಲಿ ಕಮಲಗಳನ್ನು ಅರ್ಪಿಸಲು ರಾಮನು ಸಿದ್ದನಾಗುತ್ತಾನೆ. ಆದರೆ, ಆಗ ದುರ್ಗೆಯು ತನ್ನ ದೈವೀಕವೂ ಪರೀಕ್ಷಾರ್ಥವೂ ಆದ ಆಟವನ್ನು ಆಡುತ್ತಾ ಕೊನೆಯ ಹೂವನ್ನು ಕದಿಯುತ್ತಾಳೆ. ತನ್ನ ಅಪೂರ್ಣವಾದ ತ್ಯಾಗವನ್ನೂ ನಿರೀಕ್ಷಿಸಿತ ಸೋಲನ್ನೂ ಎದುರುಗಾಣುವಾಗ ರಾಮನು ತನ್ನಾತ್ಮ ತಮಸ್ಸಿನಲ್ಲಿ ಮುಳುಗುತ್ತಾನೆ. ಆದರೆ, ಮರುಕ್ಷಣವೇ ಒಂದು ಮಿಂಚಿನ ಯೋಚನೆ ಹೊಳೆಯುತ್ತದೆ. ತನ್ನ ತಾಯಿಯು ತನ್ನನ್ನು “ರಾಜೀವ ನಯನ” ಎಂದು ಕರೆಯುತ್ತಿದ್ದಳು. ಅಂದರೆ ನೀಲಿ ಕಂಗಳು ಎಂದು. ಹೂವಿನ ಬದಲಿಗೆ ತನ್ನ ಕಣ್ಣನ್ನೇ ರಾಮನು ಅರ್ಪಿಸುತ್ತಾನೆ.

ಭಕ್ತಿಯೆಂಬುದು ಆಚರಣೆಗಳನ್ನು ಮೀರಿ, ಆತ್ಮತ್ಯಾಗದ ಸಂಕಲ್ಪವಾಗುವ ಆ ಗಳಿಗೆಯಲ್ಲಿ ದುರ್ಗೆಯು ಪ್ರತ್ಯಕ್ಷಳಾಗುತ್ತಾಳೆ. ಅವಳು ಆದಿ ಶಕ್ತಿ. ಅವಳು ರಾಮನಿಗೆ ವಿಜಯದ ಭರವಸೆಯನ್ನು ನೀಡುತ್ತಾಳೆ. ಕಾವ್ಯದ ಗಾಢ ಮುಕ್ತಾಯದ ಹಂತದಲ್ಲಿ ರಾಮನ ಆತ್ಮದೊಂದಿಗೆ ಅವಳು ಮಿಲಿತವಾಗುತ್ತಾಳೆ.

ಈ ಅಂತ್ಯವು ಓದುಗರನ್ನು ಬಹಳ ಕಾಲದಿಂದಲೂ ಕಾಡುತ್ತಲೇ ಇದೆ. ಶಕ್ತಿಯನ್ನು ಹೊಸದಾಗಿ ಕಲ್ಪಿಸಿಕೊಳ್ಳವಂತೆ ರಾಮನಿಗೆ ಸವಾಲು ಹಾಕುವುದು: ಈ ದರ್ಶನವನ್ನು ನಾವು ಹೇಗೆ ಕಾಣಬೇಕು? ಹಾಗೆ ಪ್ರತ್ಯಕ್ಷಗೊಳ್ಳುವ ಶಕ್ತಿಯು ರಾಮನ ಆಂತರಿಕ ರೂಪಾಂತರವೇ? ಈ ಚಿತ್ರಣದ ನಿಜವಾದ “ಮೂಲ” ಯಾವುದು?

ಈ ಪ್ರಶ್ನೆಯನ್ನು ಹಿಡಿದುಕೊಂಡು ನನ್ನ ಸಹೋದ್ಯೋಗಿ ಉಪನ್ಯಾಸಕರ ಜೊತೆ ಚರ್ಚಸಿದೆ. ಉತ್ತರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಿರುವಾಗ ಪಾಟ್ನಾದಲ್ಲಿರುವ ತರುಣ್‌ ಕುಮಾರ್‌ ಅವರನ್ನು ನಾನು ಸಂಪರ್ಕಿಸುವುದು. ತರುಣ್‌ ಕುಮಾರ್‌ ನಿರಾಲರ ಗೆಳೆಯ ಮತ್ತು ಅವರನ್ನು ಸೂಕ್ಷ್ಮವಾಗಿ ಓದಿಕೊಂಡಿದ್ದವರೂ ಹೌದು. ಅವರಿಗೆ ಫೋನ್‌ ಸಂಪರ್ಕ ಸಿಗಲಿಲ್ಲ. ಆಗ ನಾನು X ನ ಡಿಜಿಟಲ್‌ ಲೋಕದಲ್ಲಿ ಒಮ್ಮೆ ಕಣ್ಣಾಡಿಸಿದೆ. ಅಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದಿಂದ ಒಂದು ವೀಡಿಯೋ ಕಾಣಿಸಿತು. ವಿಶ್ವಾಸಾರ್ಹ ಮೂಲವೆಂದು ಹೇಳಬಹುದಾದ, ಯಾವುದೇ ರಾಜಕೀಯ ಉದ್ದೇಶದ ಕಲ್ಪಿತ ದೃಶ್ಯಗಳಲ್ಲವೆಂದು ಹೇಳಬಹುದಾದ, ಆ ಕ್ಷಣದ ಜೀವಂತ ದಾಖಲೆ ಎಂದೇ ಊಹಿಸಬಹುದಾದ ವೀಡಿಯೋ.

ಅದು ಗೋರಕಖ್‌ಪುರದ ದೃಶ್ಯ. ಐದು ವರ್ಷ ಪ್ರಾಯದ ಹೆಣ್ಣು ಮಗುವಿನ ಸಂದರ್ಶನದ ವೀಡಿಯೋ. ಆ ಮಗುವಿನ ಕುಟುಂಬಿಕರಂತೆ ಕಾಣುತ್ತಿದ್ದ ಹಿರಿಯರು ಕೂಡ ಪಕ್ಕದಲ್ಲಿದ್ದಾರೆ. ಬೆಳಗಿನ ನಡಿಗೆಯ ಹೊತ್ತಿನಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್‌ ಆ ಮಗುವನ್ನು ಭೇಟಿಯಾಗಿದ್ದರು. ಆ ಮಗುವಿನ ಪುಟಾಣಿ ಕೈಗಳಲ್ಲಿ ಒಂದು ಆಟಿಕೆಯಿತ್ತು. ಬುಲ್ಡೋಜರ್‌ ಆಟಿಕೆ.

ಆ ವೀಡಿಯೋದಲ್ಲಿ ಮುಖ್ಯಮಂತ್ರಿಗೆ ಆ ಮಗು ಆಟಿಕೆ ಬುಲ್ಡೋಜರನ್ನು ನೀಡುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಅವರು ಅದನ್ನು ನಗುತ್ತಾ ಸ್ವೀಕರಿಸಿ, ಟಿವಿಯಲ್ಲಿ ಪ್ರಸಾರವಾಗಬೇಕೆಂಬ ಸನ್ನೆಯೊಂದಿಗೆ ನಗುತ್ತಾ, ಕ್ಯಾಮರಾಗಳಿಗೆ ಫೋಸ್‌ ನೀಡಿ ಅದನ್ನು ಮರಳಿಸುತ್ತಾರೆ. ಆ ಮಗು ನಂತರ ಮುಖ್ಯಮಂತ್ರಿ ಹೇಳಿದ ಬುದ್ದಿ ಮಾತನ್ನು ನೆನಪಿಸಿಕೊಳ್ಳುತ್ತದೆ: “ಕಷ್ಟಪಟ್ಟು ಓದಿ, ಬುಲ್ಡೋಜರ್‌ ಜೊತೆಗೆ ಆಟವಾಡಿ.”

ಇಲ್ಲಿ ನಾವು ಚೂರು ತಡೆದು ಯೋಚಿಸಬೇಕು. ಸಮಕಾಲೀನ ಭಾರತದ ರಾಜಕಾರಣದಲ್ಲಿ ಮಗುವೊಂದು ಬುಲ್ಡೋಜರ್‌ ಜೊತೆಗೆ “ಆಟವಾಡುವುದು” ಎಂದರೆ ಏನು? ಪ್ರಸ್ತುತ ರಾಜಕಾರಣಿಗಳು ಅದರ ಜೊತೆಗೆ ಹೇಗೆಲ್ಲಾ ಆಟವಾಡುತ್ತಿದ್ದಾರೆ? ಈಗ ಅದರ ಗುರುತು ತನ್ನ ಮುಗ್ದತೆಯನ್ನು ಕಳೆದುಕೊಂಡಾಗಿದೆ. ಬುಲ್ಡೋಜರ್‌ ಎಂಬುದು ಅದರ ಯಾಂತ್ರಿಕತೆಯಿಂದಲ್ಲ, ಬದಲಿಗೆ ಅದು ಎದುರಿಸುವ ವಿಷಯಗಳ ಮೂಲಕ ವ್ಯಾಖ್ಯಾನಿಸಲಾಗುತ್ತದೆ. ಮನೆಗಳು, ಬದುಕು, ಧೂಳೀಪಟವಾಗುವ ಇತಿಹಾಸ, ಸರ್ವನಾಶ. ಆಧುನಿಕ ಭಾರತದ ವ್ಯಾಕರಣದಲ್ಲಿ ಬುಲ್ಡೋಜರ್‌ ಒಂದು ಸಾಮುದಾಯಿಕ ಗುರುತನ್ನು ಪಡೆದುಕೊಂಡಿದೆ. ವಿನಾಶದ ಮೂಲಕ ತನ್ನನ್ನು ತಾನು ಪ್ರಕಟಿಸಿಕೊಳ್ಳುವ ಶಕ್ತಿ ಸಾಧನವಾಗಿದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಮುಸ್ಲಿಮರ ಬದುಕು ಮತ್ತು ಆಸ್ತಿಗಳ ವಿನಾಶ.

ಗೋರಖ್‌ಪುರದಲ್ಲಿ ಆ ಮುಂಜಾನೆ ನಡೆದದ್ದು ಒಂದು ರೀತಿಯ ಯೋಜಿತ ದೃಶ್ಯದಂತಿತ್ತು. ಮಗು ಮತ್ತು ಪೋಷಕರು ಅದಕ್ಕೆಲ್ಲ ಸಿದ್ದರಾಗಿದ್ದಂತೆ ಕಾಣಿಸುತ್ತಿದ್ದರು. ಅನಿರೀಕ್ಷಿತ ಘಟನೆಯನ್ನು ಪೂರ್ವ ಯೋಜಿತವಾಗಿ ನಡೆಸಿದಂತಿತ್ತು. ಇಲ್ಲದಿದ್ದರೆ ಐದು ವರ್ಷದ ಮಗುವೊಂದು ರಾಜ್ಯದ ಮುಖ್ಯಮಂತ್ರಿಗೆ ಉಡುಗೊರೆ ನೀಡಲು ವಿಧ್ವಂಸಕಾರಿ ಯಂತ್ರ ಸೂಕ್ತವಾದದ್ದು ಎಂದು ನಿರ್ಧರಿಸುವುದು ಹೇಗೆ? ಅಥವಾ ಈ ಸಾಂಕೇತಿಕ ಉಡುಗೊರೆಯ ಕಲ್ಪನೆಯು ಆ ಮಗುವಿನ ಮನೆಯವರ ಮನಸ್ಸಿನಲ್ಲಿ ಹುಟ್ಟಿಕೊಂಡಿತ್ತೇ? ಅಥವಾ ಬಲಪ್ರಯೋಗದ ಮೂಲಕ ನಡೆಸುವ ವಿನಾಶವನ್ನು ಸಾಮಾನ್ಯೀಕರಿಸುವ ಪ್ರಯತ್ನದ ಭಾಗವೇ? ಆಟಿಕೆಯೊಂದು ಮಗುವಿಗೆ ನೀಡುವ ಮುಗ್ದ ಆನಂದದ ಸಂಕೇತವೇ?

ಮಗುವಿನ ಕೈಯಲ್ಲಿ ಬುಲ್ಡೋಜರ್‌ ನೀಡುವುದು ಎಂದರೆ, ಆ ಮಗುವನ್ನು ಒಂದು ನಿರ್ದಿಷ್ಟ ರಾಜಕೀಯ ಸಿದ್ಧಾಂತಕ್ಕೆ ದೀಕ್ಷೆ ನೀಡಿದ ಹಾಗೆ. ಇದು “ಬುಲ್ಡೋಜರ್ ನ್ಯಾಯದ” ಅನುಮೋದನೆಯೇ? ಅಥವಾ ಅಸಾಂವಿಧಾನಿಕವಾದ ಈ ಹಿಂಸಾಕೃತ್ಯವನ್ನು ಪ್ರಶ್ನಿಸಿದ ನ್ಯಾಯಾಲಯಗಳ ವಿರುದ್ಧದ ಸಾಂದರ್ಭಿಕ ಪ್ರತಿಭಟನೆಯೇ? ಉದ್ದೇಶ ಏನೇ ಆಗಿದ್ದರೂ, ಆ ದೃಶ್ಯವು ತೀರಾ ಕೆಟ್ಟದ್ದಾಗಿತ್ತು. ಅತ್ಯಂತ ಕ್ಷುಲ್ಲಕವೂ ಆಕ್ರಮಣಕಾರಿಯೂ ಆದ ರಾಜಕೀಯ ಅಜೆಂಡಾವನ್ನು ಪೂರೈಸಲು ಮಗುವಿನ ಮುಗ್ದತೆಯನ್ನು ಸಾಧನವಾಗಿ ಬಳಸಿಕೊಂಡಿರುವುದು ಇಲ್ಲಿ ಸ್ಪಷ್ಟವಾಗಿದೆ. ರಾಜಕಾರಣದಲ್ಲಿ ಬೀಸುವ ಗಾಳಿಯ ಬಗ್ಗೆ ಸಾಮಾನ್ಯವಾಗಿ ಗಮನ ಕೊಡದ ಹಿಂದೂಗಳನ್ನೂ ಇದು ತಲೆ ತಗ್ಗಿಸುವಂತೆ ಮಾಡಿದೆ.

ನನ್ನ ಮನಸ್ಸು ಮತ್ತೆ ರಾಮನ ತಪಸ್ಸಿನ ಕಡೆಗೆ ಹೊರಳಿತು. ನಾವು ರಾಮನು ಕಲ್ಪಿಸಿಕೊಂಡಿದ್ದ “ಶಕ್ತಿಯ ಉನ್ನತ ಕಲ್ಪನೆಯನ್ನು” ಹುಡುಕುತ್ತಿದ್ದೆವು. ಆದರೆ ಇಲ್ಲಿ, ಹೊಸದೇ ಗುರುತೊಂದು ಅದೆಲ್ಲಿಂದಲೋ ನುಗ್ಗಿ ಬಂದು ಆ ಕಲ್ಪನೆಯ ಪದರವನ್ನೇ ಹರಿದು ಹಾಕುತ್ತಿದೆ.

ನಿಜದಲ್ಲಿ ಬುಲ್ಟೋಜರ್‌ ಎಂಬುದು ಶಕ್ತಿಯ ಒಂದು ಬೃಹತ್‌ ರೂಪ, ಆದರೆ ಅದಕ್ಕೆ ಒಂದು ನಿರ್ದಿಷ್ಟ ಗುರಿಯಿದೆ. ಹಿಂದುತ್ವದ ದೃಷ್ಟಿಕೋನದಲ್ಲಿ ಮಾತ್ರ ಅದು ಕಾನೂನಿನ ನಿಯಮಗಳನ್ನು ಗಾಳಿಗೆ ತೂರಲು ಬೇಕಾದ ಅನಿಯಂತ್ರಿತವಾದ ಶಕ್ತಿಯಾಗಿ ಬದಲಾಗುತ್ತದೆ. ಬಹುಸಂಖ್ಯಾತರ ದೊಡ್ಡದೊಂದು ವಿಭಾಗಕ್ಕೆ “ಇತರರ” ಮೇಲೆ ಚಲಾಯಿಸಿಕೊಂಡು “ಗೆಲುವು” ಕಾಣಲು ಅತ್ಯಂತ ದೊಡ್ಡ ಸಾಕಾರ ರೂಪವಾಗಿದೆ.

ಒಂದು ಮಗುವಿನ ಕೈಗೆ ಇಂತಹ ಸಂಕೇತಗಳನ್ನು ಪ್ರೀತಿಯಿಂದ ದಾಟಿಸುವಾಗ ಆ ಸಮಾಜದ ನೈತಿಕ ಆರೋಗ್ಯದ ಸ್ಥಿತಿ ಯಾವ ಮಟ್ಟದಲ್ಲಿರಬಹುದು? ಇದೊಂದು ಬಿಡಿ ಘಟನೆಯಲ್ಲ. ಇದೊಂದು ಕಲಿಸುವಿಕೆಯ ರೀತಿ. ವಿನಾಶವನ್ನು ಒಂದು ಅಪೇಕ್ಷಣೀಯ ಸಹಜ ಕ್ರಿಯೆಯಾಗಿ ಅಂತರ್ಗತಗೊಳಿಸಿಕೊಳ್ಳುವುದನ್ನು ನಾವು ಕಾಣುತ್ತಿದ್ದೇವೆ. ಕೆಡವಲ್ಪಟ್ಟ ಮನೆಯೊಂದು ದುರಂತವಾಗಿ ಕಾಣಿಸುವುದರ ಬದಲಿಗೆ ಅದೊಂದು ರಾಜಕೀಯ ಭರವಸೆಯ ಈಡೇರಿಕೆಯಾಗಿಯೂ, ಸಂತೃಪ್ತಿಯ ಮೂಲವಾಗಿಯೂ ಪರಿಗಣಿಸುವ ತಲೆಮಾರೊಂದನ್ನು ನಾವು ರೂಪಿಸುತ್ತಿದ್ದೇವೆ.

ಅಧಿಕಾರದ ಈ ಕಲ್ಪನೆಯು ಈಗ ಕೇವಲ ಸಾಂಕೇತಿಕವಾಗಿ ಉಳಿದಿಲ್ಲ, ಅದು ವರ್ತಮಾನದ ಸಹಜ ಸ್ಥಿತಿಯಾಗಿ ಬದಲಾಗಿದೆ. ಪುಣೆಯಲ್ಲಿ ಲೋಕಾಯತ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಗೆಳತಿ ತಾನು ತಿಂಗಳುಗಳ ಕಾಲ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದ ಮಕ್ಕಳ ಜೊತೆಗೆ ಒಂದು ಪ್ರವಾಸದ ನಂತರ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ್ದನ್ನು ನೆನಪಿಸಿದ್ದಳು. ಆ ರಿಕ್ಷಾ ಮಸೀದಿಯೊಂದರ ಎದುರಿನಿಂದ ಹಾದು ಹೋಗುತ್ತಿದ್ದಂತೆ ಆ ಮಕ್ಕಳು “ಜೈ ಶ್ರೀರಾಮ್!‌” ಎಂದು ಕೂಗಿದ್ದರಂತೆ.

ಮಕ್ಕಳ ಆ ಕ್ರಿಯೆಯ ಸಹಜತೆಯ ಬಗ್ಗೆ ಆಕೆ ದಿಗ್ಭ್ರಮೆಗೊಂಡಿದ್ದಳು. ಈ ನಮ್ಮ ಕಾಲದಲ್ಲಿ ರಾಮನಾಮ ಜಪವು ದೈವೀಕ ಪ್ರಾರ್ಥನೆಯಾಗಿ ಉಳಿದಿಲ್ಲ. ಮುಸ್ಲಿಮರು ಮತ್ತು ಕ್ರೈಸ್ತರ ಮೇಲೆ ಪ್ರಾಬಲ್ಯ ಸಾಧಿಸುವ ಅಸ್ತ್ರವಾಗಿ ಅದನ್ನು ಬದಲಾಯಿಸಲಾಗಿದೆ. ಬಾಬರಿ ಮಸೀದಿ ಧ್ವಂಸ ಮತ್ತು ದಶಕ ಕಾಲ ನಡೆದ ರಾಮ ಜನ್ಮಭೂಮಿ ಹೋರಾಟದ ಆಘಾತದಿಂದ ಅದರ ಪ್ರತಿಧ್ವನಿಯನ್ನು ಬೇರ್ಪಡಿಸಲಾಗದು. ಇದೊಂದು ರೀತಿಯಲ್ಲಿ ಸ್ವಯಂ ಘೋಷಣೆಯಾಗಿದ್ದು, ಇದನ್ನು ಹೇಳುವವರಿಗೆ ತಮ್ಮ ಶಕ್ತಿಯ ಬಗ್ಗೆ ನಂಬಿಕೆ ಇಟ್ಟುಕೊಳ್ಳುವಷ್ಟು ಮತ್ತು ಬೆದರಿಸಲ್ಪಡುವ “ಇತರರ” ಮೇಲೆ ಪ್ರಭಾವ ಬೀರುವಷ್ಟು ಗಟ್ಟಿಯಾಗಿ ಬಿಟ್ಟಿದೆ.

ಡೆಹ್ರಾಡೂನಿನಲ್ಲಿ ನಡೆದ ಇದೇ ರೀತಿಯ ಕಥೆಯೊಂದು ನೆನಪಿಗೆ ಬರುತ್ತಿದೆ. ಪಕ್ಷಿಶಾಸ್ತ್ರಜ್ಞರೊಬ್ಬರು ಹೆಸರಾಂತ ಶಾಲೆಯೊಂದರ ವಿದ್ಯಾರ್ಥಿಗಳೊಂದಿಗೆ ವಲಸೆ ಹಕ್ಕಿಗಳ ಬಗ್ಗೆ ಮಾತನಾಡುತ್ತಿದ್ದರು. ಆ ಹಕ್ಕಿಗಳು ಪಾಸ್‌ಪೋರ್ಟ್‌ ಇಲ್ಲದೆ ಗಡಿದಾಟುವ ಜೀವಿಗಳು. ಮನುಷ್ಯನ ಸಹಾನುಭೂತಿಯನ್ನು ಉದ್ದೀಪಸಲೆಂದು ಅವರು ಸಾಂಪ್ರದಾಯಿಕ ಬುಡಕಟ್ಟು ಜನಾಂಗವಾದ ವ್ಯಾನ್‌ ಗುಜ್ಜರ್‌ಗಳ ಸಮುದಾಯವನ್ನು ಭೇಟಿ ಮಾಡಿಸಲೆಂದು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಾರೆ. ಮಾತಿಗೂ ಮೊದಲು ಮಕ್ಕಳು ಅವರನ್ನು ಸ್ವಾಗತಿಸಬೇಕೆಂದು ಅವರು ಸೂಚಿಸುತ್ತಾರೆ. ಆಗ ಮಕ್ಕಳೆಲ್ಲ ಜೋರಾಗಿ, ಏಕಕಂಠದಿಂದ ಗಟ್ಟಿಯಾಗಿ ಹೇಳುತ್ತಾರೆ: “ಜೈ ಶ್ರೀರಾಮ್!”

ಪುಣೆಯ ಆ ಮಕ್ಕಳು ಸಾಮಾನ್ಯ ಹಿನ್ನೆಲೆಯವರು. ಆದರೆ, ಡೆಹ್ರಾಡೂನಿನ ಮಕ್ಕಳು ಗಣ್ಯರ ಸಾಲಿಗೆ ಸೇರಿದವರು. ಆದರೂ ಕೂಡ, ಆ ಘೋಷಣೆ ಮತ್ತು ಅದರ ಮೂಲಕ ಪ್ರವಹಿಸುವ ಶಕ್ತಿಯು ಈ ವರ್ಗ ಭಿನ್ನತೆಗಳ ನಡುವೆಯೂ ಸಲೀಸಾಗಿ ಹರಿಯುತ್ತದೆ. ಆ ಮಕ್ಕಳ ಬಳಿ ಈ ಘೋಷಣೆಯ ಇತಿಹಾಸ ಕೇಳಿದರೆ ಅವರಿಗೆ ಅದು ತಿಳಿದಿರುವ ಸಾಧ್ಯತೆ ಬಹಳ ಕಡಿಮೆ. ಆದರೂ ಆವರೆಲ್ಲರು ಅದನ್ನು ಭಾಷಾ ಸಾಧನವಾಗಿಯೇ ಗುರುತಿಸುತ್ತಾರೆ. ಸಾಮಾನ್ಯವಾಗಿ ಶುಭಾಶಯಗಳು ನೆಮ್ಮದಿಯನ್ನು ಹಂಚುವ ಉದ್ದೇಶವನ್ನು ಹೊಂದಿರುತ್ತದೆ. ಆದರೆ, ರಾಮನ ಹೆಸರಿನ ಈ ಹೊಸ ಘೋಷಣೆಯು ಬೆದರಿಕೆಯ ಉದ್ದೇಶವನ್ನು ಹೊಂದಿದೆ.

ಆ ಮಗುವಿನ ಕೈಯಲ್ಲಿದ್ದ ಬುಲ್ಡೋಜರ್ ಆಟಿಕೆಯು ಹಿಂದೂ ಮನಸ್ಸಿನಲ್ಲಿ ಶಕ್ತಿಯ ಹೊಸ ಕಲ್ಪನೆಯ ವಾಸ್ತವತೆಯನ್ನು ಸೂಚಿಸುತ್ತಿದೆಯೇ? ಅಥವಾ ಅದು ಕಲ್ಪನಾ ಶಕ್ತಿಯ ಅಂತ್ಯವನ್ನು ಸೂಚಿಸುತ್ತಿದೆಯೇ? ಕಲ್ಪನಾ ಶಕ್ತಿಯು ಸೃಷ್ಟಿಯೊಂದಿಗೆ ಸಂಬಂಧ ಹೊಂದಿದೆ. ಬುಲ್ಡೋಜರ್‌ ಎಂಬುದು ವಿನಾಶದ ಸಂಕೇತವೂ ಆಗಿದೆ. ಬುಲ್ಡೋಜರ್‌ಗಳೊಂದಿಗೆ ಆಟವಾಡುವುದನ್ನು ಆನಂದಿಸುವ ಹಂತಕ್ಕೆ ರಾಮ ಭಕ್ತರ ಪ್ರಜ್ಞೆಯೊಳಗೆ ರೂಪುಗೊಂಡಿರುವ ಈ ಶಕ್ತಿಯ ಕಲ್ಪನೆ ಯಾವುದು?

ರಾಮ ನವಮಿಯ ಸಂದರ್ಭದಲ್ಲಿ, ರಾಮನ ಶಕ್ತಿಯ ಕಲ್ಪನೆಯ ಬಗ್ಗೆ ನಾವು ಯೋಚಿಸುವಾಗ, ಶಕ್ತಿಯ ಹೊಸ ಕಲ್ಪನೆಯಾದ ಬುಲ್ಡೋಜರ್‌ ಎಂಬುದು ಕಲ್ಪನಾ ಶಕ್ತಿಯ ಮೇಲೆ ಮಾಡುತ್ತಿರುವ ಆಘಾತ ಯಾವ ತರದ್ದು?

ಅಪೂರ್ವಾನಂದ್ ದೆಹಲಿ ವಿಶ್ವವಿದ್ಯಾಲಯದಲ್ಲಿ ಹಿಂದಿ ಉಪನ್ಯಾಸಕರಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು