Home ವಿಶೇಷ ಗದ್ದರ್ : ಮರೆಯಲಾಗದ ‘ಪಾಟ’, ಮರೆಯಬಾರದ ಪಾಠ

ಗದ್ದರ್ : ಮರೆಯಲಾಗದ ‘ಪಾಟ’, ಮರೆಯಬಾರದ ಪಾಠ

0

ಗದ್ದರ್ ಎಂದರೆ ಬಂಡಾಯ

ಗದ್ದರ್ ಎಂದರೆ ದೇಶಪ್ರೇಮ

ಗದ್ದರ್ ಎಂದರೆ ಚಳವಳಿ

ಗದ್ದರ್ ಎಂದರೆ ಸಂಚಲನ

ಗದ್ದರ್ ಎಂದರೆ ಹೃದಯದ ಬಡಿತ

ಗದ್ದರ್ ಎಂದರೆ ಕಾವ್ಯ

ಗದ್ದರ್ ಎಂದರೆ ಕರೆ

ಗದ್ದರ್ ಎಂದರೆ ಪಾಟ [ಹಾಡು]

ಗದ್ದರ್ ಎಂದರೆ ಪಾಠ

ಗದ್ದರ್ ಪರಿಚಯವಾಗಿದ್ದು ನಾವಿನ್ನೂ ಕ್ರಾಂತಿಯ ಅಕ್ಷರಾಭ್ಯಾಸ ಪ್ರಾರಂಭಿಸಿದ್ದ ಸಂದರ್ಭದಲ್ಲಿ. ನಾವು ಚಿತ್ರದುರ್ಗದ ಜೆಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದೆವು. ಆಂಧ್ರದ ಕ್ರಾಂತಿಕಾರಿ ಚಳವಳಿಯಿಂದ ಪ್ರೇರಿತರಾಗಿ ಇಲ್ಲೂ ಒಂದು ಪ್ರಾಮಾಣಿಕ ಸಂಘಟನೆ ಕಟ್ಟಬೇಕು ಎಂದು ಪಿವಿಕೆ [ಪ್ರಗತಿಪರ ವಿದ್ಯಾರ್ಥಿ ಕೇಂದ್ರ] ಪ್ರಾರಂಭಿಸಿದ್ದೆವು. ಪಿವಿಕೆ ಶುರು ಮಾಡಿ ಒಂದು ವರ್ಷವಾಗಿತ್ತು. ಅಷ್ಟರಲ್ಲಿ [1985]ರಲ್ಲಿ ನಮ್ಮ ಸಂಘಟಕರು, ‘ಗದ್ದರ್ ಬರುತ್ತಿದ್ದಾರೆ ಇಲ್ಲೊಂದು ಕಾರ್ಯಕ್ರಮ ಏರ್ಪಡಿಸಬೇಕು’ ಎಂದು ಹೇಳಿದರು. ಆಗ ಅವರ ಬಗ್ಗೆ ನಮಗೇನೂ ಗೊತ್ತಿರಲಿಲ್ಲ. ಅಲ್ಲಿ ಇಲ್ಲಿ ಓಡಾಡಿ ಸರ್ಕಾರಿ ನ್ಯೂ ಮಿಡಲ್ ಸ್ಕೂಲ್ ಆವರಣದಲ್ಲಿ ಕಾರ್ಯಕ್ರಮ ಏರ್ಪಡಿಸಿದೆವು. ಗದ್ದರ್ ಬಂದರು. ‘ಜನನಾಟ್ಯ ಮಂಡಳಿ’ಯ ಇಡೀ ತಂಡ ಬಂದಿತು. ಸಂಜೀವ್, ರಮೇಶ್, ಸುಧಾಕರ್, ದಿವಾಕರ್, ಇತ್ಯಾದಿ. ನಾನು ದುರ್ಗದವನೇ ಆಗಿದ್ದರಿಂದ ಮನೆಗೂ ಬಂದು ಊಟ ಮಾಡಿದರು. ವಿಶೇಷವೇನೂ ಅನಿಸಲಿಲ್ಲ. ರಾತ್ರಿ ಕಾರ್ಯಕ್ರಮವಿತ್ತು. ನಾನು ಅಣ್ಣ ತಂದಿದ್ದ ಕ್ಯಾಮರಾ ಮೊದಲ ಬಾರಿಗೆ ಕೈಯಲ್ಲಿ ಹಿಡಿದು ಫೋಟೋ ತೆಗೆಯುವ ಜವಬ್ದಾರಿ ತೆಗೆದುಕೊಂಡೆ. 7 ಗಂಟೆಗೆ ಗದ್ದರ್, ಸಂಜೀವ್, ರಮೇಶ್ ವೇದಿಕೆ ಏರಿದರು. ಡಮಡಮಡಮ ಡಪ್ಪು [ತಮಟೆ] ಘರ್ಜಿಸಿತು. ಇದೀ… ಅಂತ ಗದ್ದರ್ ತೆಲುಗಿನಲ್ಲಿ ಮಾತು ಪ್ರಾರಂಭಿಸಿದರು. ಅಷ್ಟೇ, ಆನಂತರ ನನ್ನ ದೇಹ ನನ್ನ ಹತೋಟಿಯಲ್ಲಿ ಇರಲಿಲ್ಲ. ಈಗಲೂ ನೆನಪಿದೆ ಕೈ, ಕಾಲು, ದೇಹ ಎಲ್ಲವೂ ಕುಣಿಯುತ್ತಿದ್ದವು. ಫೋಟೋ ತೆಗೆಯಲೂ ಆಗದಂತೆ ವೈಬ್ರೇಟ್ ಆಗುತ್ತಿದ್ದವು. ಅದು ಗದ್ದರ್. ನನ್ನಂತಹ ಕೋಟ್ಯಂತರ ಹೃದಯಗಳನ್ನು ತಟ್ಟಿ ಹುಚ್ಚೆಬ್ಬಿಸಿದವರು ಗದ್ದರ್ ಮತ್ತು ಅವರ ‘ಜನನಾಟ್ಯ ಮಂಡಳಿ’.

ಗದ್ದರ್ ಅವರ ಹಾಡುಗಳಲ್ಲಿ ನೋವಿತ್ತು, ಕಣ್ಣೀರಿತ್ತು, ಅವೇದನೆ ಇತ್ತು, ರೋಷವಿತ್ತು, ಆಕ್ರೋಶವಿತ್ತು, ಅರಿವಿತ್ತು, ಕರೆ ಇತ್ತು. ಗದ್ದರ್ ಮಾತ್ರವಲ್ಲ, ‘ಜನನಾಟ್ಯ ಮಂಡಳಿ’ಯ ಇಡೀ ತಂಡ ಹಾಗಿತ್ತು. ಏಕೆಂದರೆ, ಈ ಇಡೀ ತಂಡ ಆ ಕಾಲದಲ್ಲಿ ಆಂಧ್ರದಲ್ಲಿ ಬೀಸುತ್ತಿದ್ದ ಕ್ರಾಂತಿಯ ಬಿರುಗಾಳಿಯಿಂದ ಹುಟ್ಟಿ ಬಂದಿತ್ತು. ಆ ಕ್ರಾಂತಿಕಾರಿ ಚಳವಳಿಯ ರಭಸವೇ ಹಾಗಿತ್ತು. ಅದು ಸಹಸ್ರಾರು ಯುವಜನರ ಕೈಗೆ ಬಂಡಾಯದ ಬಾವುಟವನ್ನಿತ್ತಿತ್ತು. ಈ ದೇಶದ ಊಳಿಗಮಾನ್ಯತೆ, ಜಾತೀಯತೆ, ಬಂಡವಾಳಶಾಹಿ ಲೂಟಿ, ರಾಜಕೀಯ ದ್ರೋಹಗಳ ವಿರುದ್ಧ ತಿರುಗಿಬೀಳುವಂತೆ ಜನರನ್ನು ಬಡಿದೆಬ್ಬಿಸಿತ್ತು. ಜಮೀನ್ದಾರಿಕೆಯನ್ನು ಅಂತ್ಯಗೊಳಿಸಲು ಹಳ್ಳಿಗಳಲ್ಲಿ ವರ್ಗ ಹೋರಾಟಕ್ಕೆ ಕರೆ ನೀಡಿತ್ತು. ಪ್ರಭುತ್ವವು ಭೂಮಾಲೀಕರ ರಕ್ಷಣೆಗೆ ನಿಂತರೂ, ಸಶಸ್ತ್ರ ಹಿಡಿದಾದರೂ ಸರಿಯೇ, ಭೂಮಾಲೀಕರ ದೌರ್ಜನ್ಯವನ್ನು ಅಂತ್ಯಗೊಳಿಸುವ ಸಂಕಲ್ಪ ಮಾಡಿತ್ತು. ಸಾವಿರಾರು ವಿದ್ಯಾರ್ಥಿಗಳು, ಯುವಜನರು, ಬುದ್ಧಿಜೀವಿಗಳು, ಕಲಾವಿದರು ಈ ಕರೆಗೆ ಓಗೊಟ್ಟು ಹಳ್ಳಿಗಳ ಕಡೆ ಹೆಜ್ಜೆ ಹಾಕಿದ್ದರು. ಹಳ್ಳಿಗಳು ಬಂಡಾಯಗಾರರ ತಾಣಗಳಾದವು. ಮೊದಲು ಭೂಮಾಲೀಕರ ಗೂಂಡಾಗಳೊಂದಿಗೆ, ಎಬಿವಿಪಿ ಪುಂಡರೊಂದಿಗೆ, ಆನಂತರ ಪೋಲೀಸರೊಂದಿಗೆ ಸಂಘರ್ಷ ಪ್ರಾರಂಭವಾಯಿತು. ಪೋಲೀಸರು ಕಪಟ ಎನ್ಕೌಂಟರುಗಳನ್ನು ಪ್ರಾರಂಭಿಸಿದರು. ಬಡವರ ದನಿಯಾಗಿ ಬಂಡಾಯವೆದ್ದ ಯುವಜನರನ್ನು ಹಿಡಿದು, ಹಿಂಸಿಸಿ, ಕೊಂದು ಹಾಕಿದರು. ಅನೇಕ ಅಪೂರ್ವ ಜೀವಗಳು ಹುತಾತ್ಮವಾದವು. ಈ ಹುತಾತ್ಮತೆಗಳು ನಿರಾಶೆ ಮೂಡಿಸದೆ, ಹೋರಾಟಕ್ಕೆ ಮತ್ತಷ್ಟು ಕೆಚ್ಚು ಹಚ್ಚಿದವು. ಕ್ರಾಂತಿಯ ಕಿಚ್ಚು ತೆಲಂಗಾಣ, ಚತ್ತೀಸ್ ಘಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಒರಿಸ್ಸಾದ ‘ದಂಡಕಾರಣ್ಯ’ ಎಂದು ಕರೆಸಿಕೊಳ್ಳುವ ಕಾಡುಗಳಲ್ಲಿ ಮತ್ತಷ್ಟು ವೇಗವಾಗಿ ಹರಡಿತು. ಆ ಹೋರಾಟದ ಆ ಎಲ್ಲಾ ರಭಸ, ನೋವು, ಆಕ್ರೋಶ, ‘ಜನನಾಟ್ಯ ಮಂಡಳಿ’ಯ ಹಾಡುಗಳಲ್ಲಿ ಮಿಳಿತಗೊಂಡವು. ಗದ್ದರ್ ಆ ಎಲ್ಲಾ ಭಾವಗಳನ್ನು ಎದೆಗಪ್ಪಿಕೊಂಡು, ತನ್ನ ಹೃದಯದಿಂದ, ಹುತಾತ್ಮರ ನೆತ್ತರಿನಿಂದ ಬರೆಯುತ್ತಿದ್ದೇನೆ ಎಂಬಂತೆ, ಉತ್ಕಟತೆಯ ಕಾವ್ಯವಾಗಿಸಿದರು. ಚಳವಳಿಯ ಎಲ್ಲಾ ಭಾವಗಳನ್ನು ತನ್ನ ಮುಖ, ಕೈ, ಕಾಲು, ದೇಹ, ಕೋಲು ಮತ್ತು ಬಾವುಟಗಳ ಮೂಲಕ ಅಭಿವ್ಯಕ್ತಪಡಿಸಿದರು. ಇದ್ಯಾವುದೂ ತಲೆಯಿಂದ ಹುಟ್ಟಿದ ಕಾವ್ಯವಾಗಿರಲಿಲ್ಲ. ಹೃದಯ ಹಿಂಡಿ ಬರೆದ ಕ್ರಾಂತಿಕಾರಿ ಚಳವಳಿಯ ದಾಖಲೆಗಳಾಗಿದ್ದವು. ಹೋರಾಟಗಾರರಿಗೆ ಪ್ರೇರಣೆಯಾದರು ಗದ್ದರ್, ಜನರಿಗೆ ಕ್ರಾಂತಿಯ ಸಂಕೇತವಾದರು, ಕಲಾವಿದರಿಗೆ ಅನುಕರಿಸುವ ಮಾದರಿಯಾದರು.  

ಭೂಮಾಲೀಕತ್ವದಿಂದ, ಅರಣ್ಯಾಧಿಕಾರಿಗಳ ಕಿರುಕುಳದಿಂದ, ಪೋಲೀಸರ ದೌರ್ಜನ್ಯಗಳಿಂದ ರೋಸಿಹೋಗಿದ್ದ ಜನರಿಗೆ ನಕ್ಸಲೈಟ್ ಚಳವಳಿ ಏಕೈಕ ಪರಿಹಾರವಾಗಿ ಕಾಣತೊಡಗಿತ್ತು. ವಿಮೋಚನೆಯ ಭರವಸೆ ಅದರಲ್ಲಿ ಗೋಚರಿಸುತ್ತಿತ್ತು. ತಮಗಾಗಿ ಪ್ರಾಣ ತೆತ್ತವರ ಬಗ್ಗೆ ಆಳವಾದ ಅಭಿಮಾನ ಜನಮಾನಸದಲ್ಲಿ ಬೆಳೆದಿತ್ತು. ಜನ ಇವೆಲ್ಲವನ್ನೂ ಗದ್ದರ್ ಮತ್ತು ‘ಜನನಾಟ್ಯ ಮಂಡಳಿ’ಯ ಹಾಡುಗಳಲ್ಲಿ ಕಾಣತೊಡಗಿದರು. ‘ಜನನಾಟ್ಯ ಮಂಡಳಿ’ಯ ಕಾರ್ಯಕ್ರಮವೆಂದರೆ ಜನ ಹುಚ್ಚೆದ್ದು ಭಾಗವಹಿಸುತ್ತಿದ್ದರು. ಗದ್ದರ್ ಚಳವಳಿಯ ನಾಯಕರಾಗಿರಲಿಲ್ಲ. ಅದರ ಕಲಾ ವಿಭಾಗದ ಮುಂದಾಳುವಾಗಿದ್ದರು. ಆದರೆ ಭೂಗತ ಚಳವಳಿಯ ಬಹಿರಂಗ ನಿನಾದವಾದ ಗದ್ದರ್ ನಾಯಕರಾಗಿ ಕಾಣಿಸುತ್ತಿದ್ದರು. ಜನರು ಗದ್ದರ್ ಅವರನ್ನು ಅಪಾರವಾಗಿ ಅಭಿಮಾನಿಸುತ್ತಿದ್ದರು. ಚಳವಳಿಯ ಬಗೆಗಿನ ತಮ್ಮ ಪ್ರೀತಿಯನ್ನೆಲ್ಲಾ ಗದ್ದರ್ ಮೇಲೆ ತೋರಿಸಿದರು. ಚಳವಳಿಯಿಂದ ಹುಟ್ಟಿದ ‘ಜನನಾಟ್ಯ ಮಂಡಳಿ’ ಚಳವಳಿಗೆ ಹೊಸ ಚೈತನ್ಯ ತಂದುಕೊಟ್ಟಿತು. ‘ಜನನಾಟ್ಯ ಮಂಡಳಿ’ಯಿಂದ ಹುಟ್ಟಿದ ಗದ್ದರ್ ‘ಜನನಾಟ್ಯ ಮಂಡಳಿ’ಯ ಚೈತನ್ಯವನ್ನು ಉತ್ತುಂಗಕ್ಕೆ ಒಯ್ದರು. 80-90ರ ದಶಕಗಳು ಭಾರತದ ಇತಿಹಾಸದಲ್ಲಿ ಕ್ರಾಂತಿಯ ಸ್ಪೂರ್ತಿದಾಯಕ ಅಧ್ಯಾಯಗಳಾದವು.  ಜನ ನಾಟ್ಯ ಮಂಡಳಿ ಮತ್ತು ಗದ್ದರ್ ಅವರ ಹಾಡುಗಳು ಅವನ್ನು ಕ್ರಾಂತಿಕಾರಿ ಕಾವ್ಯವಾಗಿಸಿದವು. ಗದ್ದರ್ ಒಬ್ಬ ಮಹಾನ್ ಕವಿ, ಗಾಯಕ ಹಾಗೂ ಕಲಾವಿದರಾಗಿ ಬೆಳಗಿದರು. ಹಾಗಾಗಿಯೇ ಗದ್ದರ್ ಎಂದರೆ ವ್ಯಕ್ತಿಯಲ್ಲ ಕ್ರಾಂತಿಯ ಪಾಟ [ಹಾಡು] ಆದರು.

ನಾನೂ ನಕ್ಸಲ್ ಚಳವಳಿಯಲ್ಲಿ ಅಷ್ಟೇ ತೀವ್ರತೆ ಮತ್ತು ಆಪ್ತತೆಯ ಜೊತೆ ತೊಡಗಿಸಿಕೊಂಡಿದ್ದರಿಂದ ಗದ್ದರ್ ಅವರ ಜೊತೆಗಿನ ಭೇಟಿ, ಮಾತುಕತೆ, ಒಡನಾಟ ಕಾಲಕಾಲಕ್ಕೆ ಮುಂದುವರೆಯಿತು. ಕಾಲ ಸಾಗಿದಂತೆ ಗದ್ದರ್ ವ್ಯಕ್ತಿಯಾಗಿಯೂ ಅರ್ಥವಾಗತೊಡಗಿದರು. ಅವರ ಶಕ್ತಿ ಮತ್ತು ದೌರ್ಬಲ್ಯ ಎರಡನ್ನೂ ಕಾಣಲು ಸಾಧ್ಯವಾಯಿತು. ಗದ್ದರ್ ಕಲಾವಿದರಾಗಿ ಮಹಾನ್ ಎತ್ತರಕ್ಕೆ ಬೆಳೆದರು. ಆದರೆ, ಬೆಳೆಯಬಾರದಾಗಿದ್ದ ಒಂದು ರೋಗ ಅವರಿಗೇ ಅರಿವಿಲ್ಲದಂತೆ ಅವರೊಳಗೆ ಬೆಳೆಯತೊಡಗಿತು. ಅದೇ ‘ನಾನು’. ‘ಜನನಾಟ್ಯ ಮಂಡಳಿ’ಯ ಭಾಗವಾಗಿ ಬೆಳೆದ ಗದ್ದರ್ ಕ್ರಮೇಣ ತಾನೇ ‘ಜನನಾಟ್ಯ ಮಂಡಳಿ’ ಎಂಬಂತೆ ನಡೆದುಕೊಳ್ಳತೊಡಗಿದರು. ತಂಡದ ಇತರೆ ಸದಸ್ಯರ ಮೇಲೆ ಸಿಡುಕುವುದು, ಅವರ ಸಲಹೆಗಳನ್ನು ಕೇಳಿಸಿಕೊಳ್ಳದಿರುವುದು, ತಾನು ಹೇಳಿದ್ದೇ ಆಗಬೇಕು ಎಂದು ಪಟ್ಟು ಹಿಡಿಯುವುದು ಹೆಚ್ಚಾಯಿತು. ಗದ್ದರ್ ‘ಗದ್ದರ್’ ಆಗಲು ಅವರ ಜೊತೆ ದುಡಿದ ರಮೇಶ್, ಸಂಜೀವ್, ಸುಧಾಕರ್, ದಯಾಕರ್ ಎಲ್ಲರೂ ಬಹಳ ನೊಂದುಕೊಂಡು ಹತಾಶರಾದರು. ಈ ‘ಅಹಂ’ ಜನನಾಟ್ಯ ಮಂಡಳಿಯ ಮಟ್ಟಕ್ಕೆ ನಿಲ್ಲದೆ, ಇಡೀ ಚಳವಳಿಯ ತೀರ್ಮಾನಗಳನ್ನೂ ಒಪ್ಪದ, ತನಗನಿಸಿದಂತೆ ಮಾಡುವ ಧೋರಣೆ ಬೆಳೆಯತೊಡಗಿತು. ಹಿರಿಯ ಸಂಗಾತಿಗಳು ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾದವು. ‘ನಾನು’ ಅವರನ್ನು ಆವರಿಸಿಕೊಂಡುಬಿಟ್ಟಿತು. ಚಳವಳಿಯ ನಿಲುವಿಗೆ ವಿರುದ್ಧವಾಗಿ ಮಾತನಾಡುವುದು, ನಡೆದುಕೊಳ್ಳುವುದು, ವ್ಯವಹರಿಸುವುದು ಪ್ರಾರಂಭವಾಯಿತು. ಈ ನಡತೆಯಿಂದಾಗಿ ಕ್ರಮೇಣ ಅವರು ಚಳವಳಿಯಿಂದ ದೂರವಾಗತೊಡಗಿದರು. 2010ರ ಹೊತ್ತಿಗೆ ಮಾವೋವಾದಿ ಪಕ್ಷದ ಸದಸ್ಯತ್ವವನ್ನು ರದ್ದು ಮಾಡಲಾಯಿತು. ಚಳವಳಿಯ ಚೇತನವಾಗಿದ್ದ ಗದ್ದರ್ ಒಬ್ಬ ವ್ಯಕ್ತಿಯಾಗಿ ಹೈದರಾಬಾದಿನಲ್ಲಿ ನೆಲೆಸಿದರು.

ಗದ್ದರ್ ನಕ್ಸಲ್ ಚಳವಳಿಯಿಂದ ದೂರವಾಗುವ, ನಕ್ಸಲ್ ಚಳವಳಿ ಅಪಾರ ನಷ್ಟ ಅನುಭವಿಸಿ ಹಿನ್ನಡೆ ಅನುಭವಿಸುವ ವಿದ್ಯಮಾನ ಏಕ ಕಾಲಘಟ್ಟದಲ್ಲಿ ನಡೆಯಿತು. “ಏಕ್ ಹೀ ರಾಸ್ತಾ ನಕ್ಸಲ್ಬಾರಿ” ಎಂದುಕೊಂಡಿದ್ದ ವ್ಯಕ್ತಿಗೆ ಧಿಡೀರನೆ ಚಳವಳಿಯ ಬಗೆಗಿನ ವಿಶ್ವಾಸ ಕುಸಿಯಿತು. ಚಳವಳಿ ಏಕೆ ಕುಸಿಯಿತು ಎಂಬ ಬಗ್ಗೆ ಒಂಟಿ ವ್ಯಕ್ತಿಯಾಗಿ ತನಗನಿಸಿದಂತೆ ಯೋಚಿಸತೊಡಗಿದರು. ಅವರಿಗೆ ಕಾರಣಗಳಾಗಿ ಒಂದೊಂದು ಸಂದರ್ಭದಲ್ಲಿ ಒಂದೊಂದು ಅನಿಸತೊಡಗಿತು. ಒಮ್ಮೆ ನಾವು ಜಾತಿ ಪ್ರಶ್ನೆಯನ್ನು ಸರಿಯಾಗಿ ಅಡ್ರೆಸ್ ಮಾಡಲಿಲ್ಲ ಅದಕ್ಕೆ ಹೀಗಾಯಿತು ಎಂದುಕೊಂಡರು. ಇನ್ನೊಮ್ಮೆ ಜನ ತೆಲಂಗಾಣ ಬಯಸುತ್ತಿದ್ದಾರೆ ಪಕ್ಷ ಅದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ – ನಾವು ಅದರಲ್ಲಿ ಧುಮುಕಬೇಕು ಎಂದುಕೊಂಡರು. ಮತ್ತೊಮ್ಮೆ ಜನರ ಭಾವನೆಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ, ನಾವು ಅವರ ಆಚರಣೆಗಳ ಭಾಗವಾಗಬೇಕು ಎಂದುಕೊಂಡರು. ಮಗದೊಮ್ಮೆ ನಾವು ರಾಜಕೀಯದಿಂದ ದೂರ ಉಳಿದೆವು, ನಾವು ರಾಜಕೀಯ ಪ್ರವೇಶಿಸಬೇಕು ಎಂದುಕೊಂಡರು. ಎಲ್ಲವೂ ಆಗಾಗ್ಗೆ ತೋರಿದ ಅರೆಬರೆ ಆಲೋಚನೆಗಳು. ಆಯಾ ಸಮಯದಲ್ಲಿ ಮನಕ್ಕೆ ಏನನಿಸುತ್ತೋ ಹಾಗೆ ನಡೆದುಕೊಳ್ಳತೊಡಗಿದರು. ದೇವಸ್ಥಾನಗಳಿಗೆ ಭೇಟಿಕೊಡತೊಡಗಿದರು, ದೇವಸ್ಥಾನವನ್ನು ಹೊಗಳಿ ಹಾಡು ಕಟ್ಟಿದರು, ಪುರೋಹಿತರ ಮುಂದೆ ತಲೆಬಾಗಿ ನಿಂತರು, ರಾಜಕಾರಣಿಗಳ ಜೊತೆ ಒಡನಾಟ ಬೆಳೆಸಿಕೊಳ್ಳಲು ಪ್ರಯತ್ನಿಸಿದರು, ತೆಲಂಗಾಣ ಬೇಡಿಕೆಯನ್ನು ಯಾರು ಬೆಂಬಲಿಸಿದರೂ ಅದನ್ನು ಸ್ವಾಗತಿಸಬೇಕು ಎಂದು ಲಾಲ್ ಕೃಷ್ಟ ಅಡ್ವಾಣಿ ಅವರಿಗೂ ಹೂ ಕೊಟ್ಟು ಸ್ವಾಗತಿಸಿದರು; ಒಮ್ಮೆ ಕೆಸಿಆರ್ ಅನ್ನು ಬೆಂಬಲಿಸಿದರು; ಮತ್ತೊಮ್ಮೆ ಕಾಂಗ್ರೆಸ್ಸನ್ನು ಬೆಂಬಲಿಸಿದರು; ತನ್ನದೇ ಒಂದು ಪಕ್ಷ ಹುಟ್ಟುಹಾಕಲು ಪ್ರಯತ್ನಿಸಿದರು… ಹೀಗೆ ಯಾವ ಕೆಲಸದಲ್ಲೂ ಆಳವಿಲ್ಲ, ತರ್ಕವಿಲ್ಲ.…. ಅವರ ಹೃದಯ ಬದಲಾವಣೆಗಾಗಿಯೇ ತವಕಿಸುತ್ತಿತ್ತು… ಆದರೆ ಮಿದುಳು ಲಕ್ಷ್ಯವನ್ನು ಕಳೆದುಕೊಂಡಿದ್ದರಿಂದ. ಹೆಜ್ಜೆಗಳು ಎತ್ತೆತ್ತವೋ ಹೋಗುತ್ತಿದ್ದವು.

ಗದ್ದರ್ ಅವರ  ಕೊನೆಗಾಲದ ಈ ಅಪ್ರಬುದ್ಧ, ಕೆಲವೊಮ್ಮೆ ಅಸಂಬದ್ಧ ನಡವಳಿಕೆಗಳು ಅವರ ಘನತೆಯನ್ನು, ಅವರ ವ್ಯಕ್ತಿತ್ವವನ್ನು   ನಾಶಗೊಳಿಸಿದವು. ಈ ಮೂಲಕ ಗದ್ದರ್ ನಮಗೆಲ್ಲರಿಗೂ ಮರೆಯಬಾರದ ಪಾಠವೂ ಆದರು. ವ್ಯಕ್ತಿಗೆ ಸಿಗುವ ಮನ್ನಣೆಯು ವ್ಯಕ್ತಿಯ ಸಾಧನೆಗಿಂತ ಹೆಚ್ಚಾಗಿ, ಸಂದರ್ಭದ, ಸಂಘರ್ಷದ, ಸಹಯೋಗಿಗಳ, ಸಹಪಯಣದ ಬಳವಳಿಯಾಗಿರುತ್ತದೆ. ಅದನ್ನು ‘ನನ್ನ ಸಾಧನೆ’ ಎಂದುಕೊಂಡ ದಿನದಿಂದ ಅದು ನಮ್ಮೊಳಗಿನ ‘ಕ್ಯಾನ್ಸರ್’ ಆಗಿ ಬೆಳೆಯತೊಡಗುತ್ತದೆ. ವ್ಯಕ್ತಿ ಮೇಲೇರಿದಷ್ಟೂ ಅವರಲ್ಲಿ ವಿನಯ ಬೆಳೆಯಬೇಕು. ವಿನಯದ ಬದಲು ‘ಅಹಂ’ ಬೆಳೆದರೆ ಅದು ಅವರನ್ನೇ ಬಲಿ ತೆಗೆದುಕೊಳ್ಳುತ್ತದೆ. ಕೊನೆಗಾಲದಲ್ಲಿ ಈ ‘ಅಹಂ’ಗೆ ಬಲಿಯಾಗಿ ವ್ಯಕ್ತಿತ್ವ ಕಳೆದುಕೊಂಡ ಗಣ್ಯರು ಕರ್ನಾಟಕದಲ್ಲೂ, ಭಾರತದಲ್ಲೂ ಅನೇಕರಿದ್ದಾರೆ. ಎಷ್ಟೇ ಎತ್ತರದಲ್ಲಿದ್ದರೂ ಹೇಗೆ ಮೈಮನಸ್ಸು ನೆಲದ ಮೇಲಿನ ಬಳ್ಳಿಯಂತೆ ಎಲ್ಲರ ಜೊತೆ ಬೆಸೆದುಕೊಂಡೇ ಇರಬೇಕು ಎಂಬುದಕ್ಕೆ ದೊರೆಸ್ವಾಮಿಯವರಂತಹವರು ಉದಾಹರಣೆಯಾಗಿದ್ದಾರೆ.

ಗದ್ದರ್ ಎಂದರೆ ಮರೆಯಲು ಸಾಧ್ಯವಿಲ್ಲದ ಹಾಡಾಗಿದ್ದಾರೆ. ಅದೇ ಸಂದರ್ಭದಲ್ಲಿ ನಾವೆಂದೂ ಮರೆಯಬಾರದ ಪಾಠವೂ ಆಗಿದ್ದಾರೆ.  ಪಾಠವನ್ನು ನಮ್ಮ ತಲೆಯಲ್ಲಿಟ್ಟುಕೊಳ್ಳೋಣ. ಅವರ ಪಾಟವನ್ನು [ಹಾಡನ್ನು] ಎದೆತುಂಬಿಕೊಂಡು ಅವು ಸೇರಬೇಕಾದ ಗಮ್ಯದತ್ತ ಒಟ್ಟಾಗಿ ಹೆಜ್ಜೆಹಾಕೋಣ.

ನೂರ್ ಶ್ರೀಧರ್

(ಲೇಖಕರು ಹೋರಾಟಗಾರರು)

You cannot copy content of this page

Exit mobile version