Home ಜನ-ಗಣ-ಮನ ಕಲೆ – ಸಾಹಿತ್ಯ ಗದ್ದರ್ ಬದುಕಿನ ಕತೆ: ಚಳವಳಿಗಳಿಂದ ರಾಜಕೀಯದ ತನಕ. ಕೊನೆಯಿಲ್ಲದ ವಾತ್ಸಲ್ಯದಿಂದ ಟೀಕೆಯ ತನಕ..

ಗದ್ದರ್ ಬದುಕಿನ ಕತೆ: ಚಳವಳಿಗಳಿಂದ ರಾಜಕೀಯದ ತನಕ. ಕೊನೆಯಿಲ್ಲದ ವಾತ್ಸಲ್ಯದಿಂದ ಟೀಕೆಯ ತನಕ..

0

ಗದ್ದರ್‌ ಎನ್ನುವುದು ಸಾಮಾಜಿಕ ಕಳಕಳಿ ಹೊಂದಿರುವ ಜನರ ಮನಸ್ಸಿನಲ್ಲಿ ಒಂದು ಕೆಚ್ಚನ್ನು ಮೂಡಿಸುವ ಹೆಸರು. ಗದ್ದರ್‌ ಎಂದರೆ ಸಾಮಾಜಿಕ ನ್ಯಾಯದ ದನಿ. ಗದ್ದರ್‌ ಎನ್ನುವುದು ಬಂಡಾಯದ ಕಹಳೆ. ಅಂತಹ ಗದ್ದರ್‌ ನಮ್ಮನ್ನು ಅಗಲಿದ್ದಾರೆ. ಅವರ ಕುರಿತು ಬಿಬಿಸಿ ತೆಲುಗು ಪ್ರಕಟಿಸಿದ ಬರಹದ ಅನುವಾದ ಇಲ್ಲಿದೆ

ಅವು 1990ರ ದಶಕದ ದಿನಗಳು. ತೆಲಂಗಾಣದ ವಾರಂಗಲ್‌ನಲ್ಲಿ, ಸಿಪಿಐ (ಎಂಎಲ್) (ಪೀಪಲ್ಸ್ ವಾರ್) ನ ಅಂಗಸಂಸ್ಥೆಯಾದ ರೈತ ಕೂಟಿ ಸಂಗಮ್ ಸಭೆ ನಡೆಯಿತು, ಇದರಲ್ಲಿ ಸುಮಾರು 10 ಲಕ್ಷದಿಂದ 15 ಲಕ್ಷ ಜನರು ಭಾಗವಹಿಸಿದ್ದರು.

ಗುಮ್ಮಡಿ ವಿಠಲ್ ರಾವ್ ಅಲಿಯಾಸ್ ಗದ್ದರ್ ವೇದಿಕೆಯ ಮೇಲಿಂದ ಜನರನ್ನು ನೋಡುತ್ತಿದ್ದರು. ತೆಲಂಗಾಣದ ಉಪಭಾಷೆ ಮತ್ತು ಅಲ್ಲಿನ ಜಾನಪದದ ಟ್ರೇಡ್‌ ಮಾರ್ಕಿನಂತಿದ್ದ ಗದ್ದರ್‌ ಹಾಡುಗಳು ತೆಲಂಗಾಣದಲ್ಲಿನ ಪೊಲೀಸ್‌ ದಬ್ಬಾಳಿಕೆಯನ್ನು ಟೀಕಿಸುವುದರ ಜೊತೆಗೆ ಕೆಳಹಂತದ ಪೊಲೀಸರ ಕುರಿತು ಸಹಾನೂಭೂತಿಯನ್ನೂ ತೋರಿಸುತ್ತಿತ್ತು.

ಗದ್ದರ್ 1947ರಲ್ಲಿ ಬಡ ದಲಿತ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಮಹಾರಾಷ್ಟ್ರದ ಔರಂಗಾಬಾದಿನ ಡಾ.ಬಿ.ಆರ್.ಅಂಬೇಡ್ಕರ್ ಸ್ಥಾಪಿಸಿದ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು.

ಶಿಕ್ಷಣದಿಂದ ಮಾತ್ರ ಮುಕ್ತಿ ಸಾಧ್ಯ ಎಂದು ಗದ್ದರ್ ಅವರ ತಂದೆ ಬಲವಾಗಿ ನಂಬಿದ್ದರು. ಹೀಗಾಗಿ, ಅವರಿಗೆ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ತನಕ ವಿದ್ಯೆ ದೊರೆಯಿತು.

ಅದೇ ಸಮಯದಲ್ಲಿ, ಶ್ರೀಕಾಕುಳಂ ರೈತರ ಸಶಸ್ತ್ರ ಹೋರಾಟ, ತೀವ್ರಗಾಮಿ ಗೆಳೆಯರ ಸ್ನೇಹ, ಚಲನಚಿತ್ರ ನಿರ್ದೇಶಕ ಬಿ.ನರಸಿಂಗರಾವ್ ಮತ್ತು ಕೇಶವರಾವ್ ಜಾಧವ್ ಅವರ ಪ್ರಭಾವದಿಂದ ಅವರು ಚಳುವಳಿಯ ಭಾಗವಾದರು. ಅವರು ಚಿಕ್ಕ ವಯಸ್ಸಿನಿಂದಲೇ ಹಾಡುಗಳನ್ನು ಹಾಡುವಲ್ಲಿ ನಿಪುಣರಾಗಿದ್ದರು. ಹೀಗಾಗಿ ಅವರ ಧ್ವನಿ ಸಮಾನತೆಗಾಗಿ ಹೋರಾಡುವ ಆಯುಧವಾಗಿ ಕೆಲಸ ಮಾಡಿತು.   

 1970ರ ದಶಕದಲ್ಲಿ, ಗದ್ದರ್ ಸಿಪಿಐ (ಎಂಎಲ್) ನ ಸಾಂಸ್ಕೃತಿಕ ವಿಭಾಗವಾದ ಜನನಾಟ್ಯ ಮಂಡಳಿಗೆ ಸೇರಿದರು ಮತ್ತು ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಂಧಿಸಲ್ಪಟ್ಟರು. ಆ ಸಮಯದಲ್ಲಿ ತೆಲಂಗಾಣದಲ್ಲಿ ಪ್ರಬಲವಾಗಿದ್ದ ಊಳಿಗಮಾನ್ಯ ಭೂಮಾಲೀಕರು ಮತ್ತು ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಜನ ನಾಟ್ಯ ಮಂಡಳಿ ಆಯೋಜಿಸಿದ್ದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಇದರ ನಂತರ ಅವರು ಗದ್ದರ್‌ ಎಂದೇ ಪ್ರಸಿದ್ಧರಾದರು. ಗದ್ದರ್‌ ಎನ್ನುವುದು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಉಗ್ರಗಾಮಿ ಪಕ್ಷದ ಹೆಸರು.

ಜನನಾಟ್ಯ ಮಂಡಳಿಯಿಂದ ಉಚ್ಛಾಟನೆ

ತುರ್ತು ಪರಿಸ್ಥಿತಿಯ ನಂತರ ಗದ್ದರ್ ಜನತಾಯಮಂಡಳಿಯಲ್ಲಿ ಪೂರ್ಣಾವಧಿ ಕೆಲಸ ಮಾಡಲು ತಮ್ಮ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿದರು. ಅಂದಿನಿಂದ ಕೊನೆಯುಸಿರೆಳೆಯುವವರೆಗೂ ಕೈಯಲ್ಲಿ ಕೋಲು ಹಿಡಿದು, ಭುಜದ ಮೇಲೆ ಕಂಬಳಿ ಹೊದ್ದು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಅಸಮಾನತೆ, ದಬ್ಬಾಳಿಕೆ, ಪೊಲೀಸ್ ದೌರ್ಜನ್ಯದ ವಿರುದ್ಧ ದನಿ ಎತ್ತುತ್ತಾ ಇಡೀ ಆಂಧ್ರಪ್ರದೇಶವನ್ನು ಸುತ್ತಿದರು. ಅವರು ಬಂಡಾಯದ ಇನ್ನೊಂದು ವಿಳಾಸವಾಗಿ ಮಾರ್ಪಟ್ಟರು.

1995ರಲ್ಲಿ ಅವರನ್ನು ಜನನಾಟ್ಯ ಮಂಡಳಿಯಿಂದ ಹೊರಹಾಕಲಾಯಿತಾದರೂ, ಅವರು ತಾನು ನಂಬಿದ ದಾರಿಯನ್ನು ಬಿಡಲಿಲ್ಲ. ಅಂಬೇಡ್ಕರ್ ಅವರಿಂದ ಪ್ರೇರಿತರಾಗಿ ರಾಜಕೀಯದತ್ತ ಮುಖ ಮಾಡಿದರು. ಜಾತಿ ವ್ಯವಸ್ಥೆ ಬೇರೂರಿರುವ ದೇಶದಲ್ಲಿ ಅವರಿಗೆ ಸಾರ್ವಜನಿಕ ರಾಜಕಾರಣ ಬೇಕಿತ್ತು. ಆ ಸಮಯದಲ್ಲಿ 1997ರಲ್ಲಿ, ಅಪರಿಚಿತ ದುಷ್ಕರ್ಮಿಗಳು ಅವರ ದೇಹವನ್ನು ಗುರಿಯಾಗಿಸಿ ಮೂರು ಗುಂಡುಗಳನ್ನು ಹೊಡೆದರು.

ಅವುಗಳಲ್ಲಿ ಒಂದು ಗುಂಡು ದೇಹದಲ್ಲೇ ಉಳಿದು, ಅದು ಕೊನೆಯ ಉಸಿರು ಇರುವವರೆಗೂ ದೇಹದಲ್ಲಿಯೇ ಇತ್ತು. ಈ ದಾಳಿಯ ನಂತರ ಅವರು ಹೊಸ ಸಿದ್ಧಾಂತದೊಡನೆ ಮುಂದುವರೆದರು. ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುವುದು ಅವರ ಬಹುಕಾಲದ ಆಸೆಯಾಗಿತ್ತು. ಅವರು ತೆಲಂಗಾಣ ಚಳವಳಿಯ ಸಾಂಸ್ಕೃತಿಕ ನಾಯಕರಾದರು. ತಮ್ಮ ಪ್ರದರ್ಶನಗಳ ಮೂಲಕ ಪ್ರತ್ಯೇಕ ತೆಲಂಗಾಣ ರಾಜ್ಯದ ಅಗತ್ಯವನ್ನು ಎತ್ತಿ ತೋರಿಸಿದರು.

ಅವರು ಸಿಪಿಐ (ಮಾವೋವಾದಿ) ಪಕ್ಷದ ಚಟುವಟಿಕೆಗಳಿಂದ ದೂರವಿದ್ದರೂ, ಅವರು ಅದರ ಕುರಿತು ಸಹಾನುಭೂತಿಯುಳ್ಳವರಾಗಿ ಉಳಿದರು ಮತ್ತು ಆಂಧ್ರಪ್ರದೇಶ ಸರ್ಕಾರ ಮತ್ತು ಮಾವೋವಾದಿಗಳ ನಡುವಿನ ಶಾಂತಿ ಪ್ರಕ್ರಿಯೆಯ ಮಾತುಕತೆಗಳಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದರು.

ತೆಲಂಗಾಣ ರಾಜ್ಯ ರಚನೆಯ ನಂತರ, ಗದ್ದರ್ ತೀವ್ರಗಾಮಿ ಚಳುವಳಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡರು. ಸಂಸದೀಯ ರಾಜಕೀಯವನ್ನು ಪರ್ಯಾಯವಾಗಿ ಪರಿಗಣಿಸಿ ಅವರು 2018ರಲ್ಲಿ ಮೊದಲ ಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಆ ಸಮಯದಲ್ಲಿ ಅವರು ತಾನು ಬುಲೆಟ್‌ನಿಂದ ಮತಪತ್ರಕ್ಕೆ ಬದಲಾಗಿರುವುದಾಗಿ ಘೋಷಿಸಿದರು.

ಅವರು ಸಂಸದೀಯ ವ್ಯವಸ್ಥೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳನ್ನು, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರನ್ನು ಭೇಟಿಯಾದರು.

ಮಾನವ ಹಕ್ಕುಗಳ ರಕ್ಷಣೆ, ಕಲ್ಯಾಣ ಮತ್ತು ಜಾತ್ಯತೀತ ಸಮಾಜದ ನಿರ್ಮಾಣದಲ್ಲಿ ಪಕ್ಷಗಳನ್ನು ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಲು ಅವರು ಬಯಸಿದ್ದರು. ನಂತರ ಅವರು ಹಲವು ಪಕ್ಷಗಳನ್ನು ಬದಲಾಯಿಸಿದರು ಮತ್ತು ಮರಣದ ವೇಳೆಗೆ ಅವರು ಕಾಂಗ್ರೆಸ್ ಸೇರುವ ಬಗ್ಗೆ ಯೋಚಿಸುತ್ತಿದ್ದರು.   

ಅನೇಕ ಟೀಕೆಗಳು

ಆರು ದಶಕಗಳ ಕಾಲದ ಅವರ ತೀವ್ರಗಾಮಿ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಗದ್ದರ್ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಅವರ ರಾಜಕೀಯ ಪ್ರವೇಶದ ಬಗ್ಗೆ ಸಾಕಷ್ಟು ಟೀಕೆಗಳು ಬಂದಿವೆ.

ಅವರ ಪ್ರದರ್ಶನಗಳು ಮತ್ತು ಕ್ರಾಂತಿಕಾರಿ ಹಾಡುಗಳು ಸಾವಿರಾರು ಯುವಕರನ್ನು ನಕ್ಸಲೈಟ್ ಚಳವಳಿ ಪ್ರವೇಶಿಸಲು ಕಾರಣವಾಗಿವೆ, ಅವರಲ್ಲಿ ಅನೇಕರು ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟರು. ಹೀಗಿರುವಾಗ ಅವರು ತಾನು ಕೋವಿ ಬಿಟ್ಟು ಮತ ಪತ್ರ ಹಿಡಿಯುತ್ತೇನೆ ಅಂದಾ ಅವರ ಕುರಿತು ದೊಡ್ಡ ಮಟ್ಟದಲ್ಲಿ ಟೀಕೆಗಳು ಕೇಳಿ ಬಂದವು.

ತಮ್ಮ ಕೊನೆಯ ದಿನಗಳಲ್ಲಿ ಹಿಂದೂ ದೇವತೆಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಸ್ತುತಿಸುವ ಹಾಡುಗಳನ್ನು ಹಾಡಿದ್ದಕ್ಕಾಗಿ ಗದ್ದರ್ ಅವರನ್ನು ಟೀಕಿಸಲಾಯಿತು. ಇದೆಲ್ಲದರ ನಡುವೆಯೂ ಜನರಿಗೆ ಅವರ ಮೇಲಿದ್ದ ಪ್ರೀತಿ ಎಂದೂ ಕಡಿಮೆಯಾಗಿರಲಿಲ್ಲ.

ಅವರ ಜೀವನವು ತೆಲಂಗಾಣದ ಪರಿಸ್ಥಿತಿಯ ಕನ್ನಡಿ.

 ವೆಟ್ಟಿಚಾಕಿರಿ (ಬಿಟ್ಟಿ ಚಾಕರಿ) ಮತ್ತು ಪ್ರಾಬಲ್ಯದ ವ್ಯವಸ್ಥೆ ಅಧಿಕಾರದಲ್ಲಿದ್ದ ದಿನಗಳಲ್ಲಿ ಅವರು ನಕ್ಸಲೈಟ್ ಚಳವಳಿಗೆ ಸೇರಿದರು. ಕ್ಷಿಪ್ರ ಬಂಡವಾಳಶಾಹಿಯಿಂದಾಗಿ ರಸ್ತೆಗಳು ಮತ್ತು ಇತರ ಬದಲಾವಣೆಗಳಂತಹ ಮೂಲಸೌಕರ್ಯಗಳ ತ್ವರಿತ ಅಭಿವೃದ್ಧಿಯಿಂದ ತೆಲಂಗಾಣದಲ್ಲಿ ನಕ್ಸಲೈಟ್ ಚಳುವಳಿ ದುರ್ಬಲಗೊಂಡಿತು. 1980ರ ದಶಕದಿಂದ, ಬುದ್ಧಿಜೀವಿಗಳು ಮತ್ತು ಗಾಯಕರು ಚಳುವಳಿಯಿಂದ ಹೊರಬರಲು ಪ್ರಾರಂಭಿಸಿದ್ದರು. ಇದು 1990ರ ದಶಕದಲ್ಲಿ ಎದ್ದು ಕಾಣುವಂತಿತ್ತು.

ಗದ್ದರ್ ಒಮ್ಮೆ ತಾನು ಸುಮಾರು 4,000ರಿಂದ 5,000 ಹಾಡುಗಳನ್ನು ಬರೆದಿದ್ದೇನೆ ಮತ್ತು ಅವುಗಳಲ್ಲಿ ಕೆಲವು ಮಾತ್ರ ಪ್ರದರ್ಶನ ನೀಡಿದ್ದೇನೆ ಎಂದು ಹೇಳಿದ್ದರು. ಈಗ ಅವರು ಅಗಲಿದ್ದಾರೆ ಆದರೆ ಅವರ ಹಾಡುಗಳು ಮುಂದೆಯೂ ಜನಮನಗಳಲ್ಲಿ ಅನುರಣಿಸಲಿವೆ.

You cannot copy content of this page

Exit mobile version