Home ಬ್ರೇಕಿಂಗ್ ಸುದ್ದಿ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ : ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ : ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

0

ಬೆಂಗಳೂರು : ಸರ್ಕಾರಿ ಒತ್ತುವರಿ ಜಮೀನುಗಳ ಪ್ರಾಥಮಿಕ ಒತ್ತುವರಿ ಪಟ್ಟಿಯನ್ನು ಶೀಘ್ರದಲ್ಲಿ ತಯಾರಿಸಿ ಹಾಗೂ ಪ್ರತೀ ವಾರಾಂತ್ಯದಲ್ಲಿ ಒತ್ತುವರಿ ತೆರವಿಗೆ ಮುಂದಾಗಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದ್ದಾರೆ.

ವಿಕಾಸ ಸೌಧದಲ್ಲಿ ಇಂದು ಸರ್ಕಾರ ಪ್ರಧಾನ ಕಾರ್ಯದರ್ಶಿ,  ಬೆಂಗಳೂರು ನಗರ/ಗ್ರಾಮೀಣ ಭಾಗದ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಆಯುಕ್ತರ ಸಭೆ ಕರೆದಿದ್ದ ಸಚಿವರು, ಸಭೆಯಲ್ಲಿ ಒತ್ತುವರಿ ತೆರವಿಗೆ ಎಲ್ಲ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದಾರೆ.

ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ ಅವರು, “ಬೆಂಗಳೂರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಮೀನು ಒತ್ತುವರಿ ಅತಿದೊಡ್ಡ ಸಮಸ್ಯೆಯಾಗಿದೆ. ಸರ್ಕಾರದ ಜಮೀನು ಭೂ ಮಾಫಿಯಾ ಪಾಲಾಗುತ್ತಿದೆ. ಪರಿಣಾಮ ಸರ್ಕಾರಕ್ಕೆ ಸಾಕಷ್ಟು ಆದಾಯವೂ ಖೋತಾ ಆಗುತ್ತಿದೆ. ಹೀಗಾಗಿ ಅಧಿಕಾರಿಗಳು ಶೀಘ್ರದಲ್ಲಿ ಒತ್ತುವರಿ ಜಮೀನಿನ ಪ್ರಾಥಮಿಕ ಪಟ್ಟಿ ಸಿದ್ದಪಡಿಸಿ, ಪ್ರತೀ ಶನಿವಾರ ಹಾಗೂ ಭಾನುವಾರ ಒತ್ತುವರಿ ತೆರವಿಗೆ ಮುಂದಾಗಬೇಕು” ಎಂದು ತಿಳಿಸಿದರು.

ಕಳೆದ ಅಧಿವೇಶನದಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವಿನ ಬಗ್ಗೆ ನಮ್ಮ ಸರ್ಕಾರ ಮಾತು ನೀಡಿದೆ. ಕೊಟ್ಟ ಮಾತಿನಂತೆ ಒತ್ತುವರಿ ತೆರವಿನ ಜೊತೆಗೆ ಸರ್ಕಾರಿ ಜಮೀನನ್ನು ರಕ್ಷಿಸುವ ಕೆಲಸವೂ ಆಗಬೇಕು. ಸರ್ಕಾರಿ ಜಮೀನಿನ ಸುತ್ತ ಸುರಕ್ಷಿತ ಬೇಲಿ ಹಾಕಬೇಕು, ಪ್ರತಿವಾರ ಅಧಿಕಾರಿಗಳು ‘ಬೀಟ್’ ಹಾಕುವ ಮೂಲಕ ಸರ್ಕಾರಿ ಸ್ವತ್ತನ್ನು ಕಾಪಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಭೂಮಿಯ ರೀ ಸರ್ವೆ ಆಗಲಿ
ಹಲವಾರು ಪ್ರಕರಣಗಳಲ್ಲಿ ಸರ್ಕಾರಿ ದಾಖಲೆಗಳು ಕಳುವಾಗಿವೆ ಅಥವಾ ಕೆಲವು ದಾಖಲೆಗಳನ್ನು ತಿದ್ದಲಾಗಿದೆ. ಇದರ ಹಿಂದೆ ಭೂ ಮಾಫಿಯಾ ಕೈವಾಡವೂ ಇದೆ. ಹೀಗಾಗಿ ಭೂ ಸುಧಾರಣೆ-ಬಗರ್ ಹುಕುಂ ಅಡಿಯಲ್ಲಿ ಜಮೀನು ಗ್ರ್ಯಾಂಟ್ ಪಡೆದ ಅರ್ಹ ಫಲಾನುಭವಿಗಳೂ ಸಂಕಷ್ಟ ಎದುರಿಸುವಂತಾಗಿದೆ.

ಇದಲ್ಲದೆ, ಗೋಮಾಳ, ಸ್ಮಶಾನದ ಭೂಮಿ, ಕೆರೆ-ಕಟ್ಟೆಗಳೂ ಸಹ ಒತ್ತುವರಿ ಆಗಿದೆ. ಹೀಗಾಗಿ ಭೂ ಮಾಪಕರು ಹಾಗೂ ಗ್ರಾಮ ಲೆಕ್ಕಿಗರು ತಹಶೀಲ್ದಾರ್ ನೇತೃತ್ವದಲ್ಲಿ ಸರ್ಕಾರಿ ದಾಖಲೆಗಳಲ್ಲಿರುವ ಪ್ರತಿ ಸರ್ಕಾರಿ ಜಮೀನನ್ನು ಮತ್ತೆ ರೀ ಸರ್ವೆ (ಮರು ಮಾಪನ) ನಡೆಸಬೇಕು. ಆ ವರದಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಒತ್ತುವರಿಯಾದ ಸರ್ಕಾರಿ ‌ಜಮೀನನ್ನು ಗುರುತಿಸಿ ಪಟ್ಟಿ ಸಿದ್ದಪಡಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು.

ಪ್ಲ್ಯಾನ್ ಅನುಮತಿಗೆ ಮುನ್ನ ಎಚ್ಚರ
ವಸತಿ ಸಮುಚ್ಚಯ ಸೇರಿದಂತೆ ಯಾವುದೇ ಯೋಜನೆಗಾಗಿ ನೋಂದಣಿ ಬಂದರೂ ಸಹ ಅಧಿಕಾರಿಗಳು ಎಚ್ಚರವಹಿಸಬೇಕು. ನೋಂದಣಿಯಾಗುತ್ತಿರುವ ಭೂಮಿಯ ದಾಖಲೆಗಳನ್ನು ಪರಿಶೀಲಿಸಬೇಕು, ಸರ್ಕಾರಿ ಜಮೀನಾಗಿದ್ದಲ್ಲಿ ಕೂಡಲೇ ಕ್ರಮ ಜರುಗಿಸಬೇಕು. ಇನ್ನಾದರೂ ಅಕ್ರಮ ಒತ್ತುವರಿಗೆ ತಡೆಯೊಡ್ಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತರಾದ ಪಿ. ಸುನೀಲ್ ಕುಮಾರ್ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಧಿಕಾರಿ ಡಾ| ಶಿವಶಂಕರ್. ಎನ್ ಹಾಗೂ ಕಂದಾಯ ಇಲಾಖೆಯ ಹಲವು ಅಧಿಕಾರಿಗಳು ಇದ್ದರು.

You cannot copy content of this page

Exit mobile version