Tuesday, April 30, 2024

ಸತ್ಯ | ನ್ಯಾಯ |ಧರ್ಮ

ಗಣಪತಿ: ಬಂಡಾಯದ ದಳಪತಿ !

ಗಣಪತಿ ಕಾಲ್ಪನಿಕ ದೇವರು, ಬಾಹ್ಯ ವಸ್ತುಗಳಿಂದ ಮಾಡಿದ ದೇವರುಗಳು ದೇವರಲ್ಲ, ಮನೆಗಳಲ್ಲಿ ಅಥವಾ ಯಾವುದೇ ಸಮಾರಂಭಗಳಲ್ಲಿ ಮೊದಲು ಗಣಪತಿ ಪೂಜೆ, ಸ್ತೋತ್ರ ಶ್ಲೋಕ ಪಠಿಸಬೇಕು ಎಂಬುದು ಹಲವರ ನಂಬಿಕೆಯಾಗಿದ್ದು, ಅದರ ಬದಲು ವಚನಗಳನ್ನು ಪ್ರಾರ್ಥನೆಯಂತೆ ಪಠಿಸಬೇಕು ಎಂಬ  ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ-ವಿರೋಧದ ಚರ್ಚೆಗಳು ಆಗುತ್ತಿವೆ. ಈ ಹೊತ್ತಿನಲ್ಲಿ, ಯೋಗೇಶ್‌ ಮಾಸ್ಟರ್‌ ಬರೆದಿರುವ ಢುಂಢಿ ಕಾದಂಬರಿಯ ನಾಯಕ ಗಣಪತಿಯ ಚಿತ್ರಣ ಇಲ್ಲಿದೆ. ಇದು ಲೇಖನದ ಕೊನೆಯ ಭಾಗ.

ಆರ್ಯರಾಗಲಿ, ಇತರ ಬುಡಕಟ್ಟುಗಳಾಗಲಿ, ಪ್ರಾರಂಭದಲ್ಲಿ ತಮಗೆ ತೀರಾ ಪರಿಚಿತವಾದಂತಹ, ನೇರವಾಗಿ ಸಂಪರ್ಕ ಇದ್ದಂತಹ ಪ್ರಕೃತಿಯನ್ನೇ ಲಕ್ಷ್ಯಕೊಟ್ಟು ತಮ್ಮ ಸಿದ್ಧಾಂತಗಳನ್ನಾಗಲಿ, ಕಾವ್ಯಗಳನ್ನಾಗಲಿ ಹೊಮ್ಮಿಸಿದವರು. ಆದರೆ, ಅವರಿಗೆ ಅದು ಸಿದ್ಧಾಂತವೆಂದು ಕರೆಯುವುದಾಗಲಿ, ಕಾವ್ಯಗಳೆಂದು ಒಂದು ಪ್ರಕಾರಕ್ಕೆ ಹೆಸರಿಸುವುದಾಗಲಿ ಖಂಡಿತ ತಿಳಿದಿರಲಿಲ್ಲ. ಅದು ಹಾಗೆ, ತಂತಾನೇ ಓತಪ್ರೋತವಾಗಿ ಹರಿದಿದ್ದಿತು.

ನಿತ್ಯ ಕಾಣುತ್ತಿದ್ದ ಪ್ರಕೃತಿಯ ಸತ್ಯಗಳನ್ನು, ತಮ್ಮ ಭಯದಿಂದಲೋ, ಆನಂದದಿಂದಲೋ ಉಂಟಾಗುತ್ತಿದ್ದ ಅನುಭವಗಳನ್ನು ತಮಗೆ ತೋಚಿದ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದರು. ಭೂ ಸ್ವಾಧೀನದ ಪರಿಕಲ್ಪನೆಯೂ ಇಲ್ಲದಿದ್ದಂತಹ ಸಮಯದಲ್ಲಿ ತಮ್ಮ ಸಿದ್ಧಾಂತಗಳಿಗೆ ಹೋರಾಡುವಂತಹ ವಿಷಯವೂ ಬಲು ದೂರ. ಅವರೇನೇ ಹೋರಾಟಗಳನ್ನು ಮಾಡಿದ್ದರೂ, ಆಹಾರಕ್ಕಾಗಿ, ಆಹಾರ ಮತ್ತು ತಮ್ಮ ಜೀವನ ನಿರ್ವಹಣೆಗೆ ಅನುಕೂಲವಾಗುವಂತಹ ಪಶುಗಳಿಗಾಗಿ ಹೋರಾಡುತ್ತಿದ್ದರು. ಇದು ಆರ್ಯರಿಗಾದರೂ, ದ್ರಾವಿಡರಿಗಾದರೂ ಅಥವಾ ಇನ್ನಾವುದೇ ಬುಡಕಟ್ಟಿನವರಿಗಾದರೂ ಪ್ರಸ್ತುತವೇ. ಕಾಲ ಕ್ರಮೇಣ ಕೃಷಿ ಮಾಡುವುದನ್ನು ಕಂಡುಕೊಂಡ ಮೇಲೆ ಒಂದು ಕಡೆ ನೆಲೆ ನಿಲ್ಲುವುದು ಅನಿವಾರ್ಯವೂ, ಅಗತ್ಯವೂ ಆಯಿತು. ಕೃಷಿಯೂ ಹೆಣ್ಣಿನ ಆವಿಷ್ಕಾರವೆಂಬುದು ನೆನಪಿರಲಿ. ಬಸುರು, ಹೆರಿಗೆ, ಎಳೆಯ ಮಕ್ಕಳನ್ನು ಪಾಲನೆ ಮಾಡುವಂತಹ ತನ್ನ ಪ್ರಾಕೃತಿಕವಾದಂತಹ ವಿಷಯಗಳಿಗೆ ಅನಿವಾರ್ಯವಾಗಿ ಒಂದು ಕಡೆ ನಿಲ್ಲಲೇ ಬೇಕಾದಾಗ, ಹೆಣ್ಣು ಬೆಂಕಿಯಲ್ಲಿ ಆಹಾರವನ್ನು ಬೇಯಿಸುವುದಾಗಲಿ, ತಿಂದ ಹಣ್ಣಿನ ಬೀಜಗಳನ್ನು ಮಣ್ಣಿಗೆಸೆದು ಅವು ಮೊಳೆಯುವುದನ್ನೂ, ಬೆಳೆಯುವುದನ್ನೂ ಕಂಡುಕೊಂಡಂತಹ ಹೆಣ್ಣುಗಳು ಕೃಷಿಯನ್ನೂ ಆವಿಷ್ಕಾರ ಮಾಡಿದ್ದಾಳೆಂಬ ಸಾಧ್ಯತೆಗಳನ್ನು ಅಲ್ಲಗೆಳೆಯಲಾಗುವುದಿಲ್ಲ.

ಒಟ್ಟಿನಲ್ಲಿ ಪುರುಷ ಬೇಟೆಯಾಡುವಂತಹ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಂಡರೆ, ಹೆಣ್ಣು ಒಂದೆಡೆ ನೆಲೆನಿಲ್ಲುವ, ಬೆಂಕಿ ಮತ್ತು ನೀರನ್ನು ಉಪಯೋಗಿಸಿಕೊಂಡು ಅಡುಗೆ ಬೇಯಿಸಿ ಹಾಕುವ, ಕೃಷಿಯನ್ನು ಆವಿಷ್ಕಾರ ಮಾಡುವ, ಹುಟ್ಟಿದ ಮಕ್ಕಳನ್ನು ನೋಡಿಕೊಳ್ಳುವ ಅಗತ್ಯ ಮತ್ತು ಅನಿವಾರ್ಯತೆಯಿಂದ ಕುಟುಂಬ ವ್ಯವಸ್ಥೆಯನ್ನು ನೋಡಿಕೊಳ್ಳುವ ಯಜಮಾನಿಯಾಗಿ ಹೊಮ್ಮಿದ್ದು ಆಶ್ಚರ್ಯವೇನಲ್ಲ. ಹೀಗೇ ಮಾತೃಪ್ರಧಾನ ಸಮಾಜದಿಂದಲೇ ವ್ಯಕ್ತಿಗಳು ಗುರುತಿಸಿಕೊಳ್ಳುವಂತಾಗಿದ್ದು. ಗಂಗೆಯ ಮಗ ಭೀಷ್ಮ ಗಾಂಗೇಯನಾಗುವುದು, ರಾಧೆಯ ಮಗ ಕರ್ಣ ರಾಧೇಯನಾಗುವುದು, ಕುಂತಿಯ ಮಕ್ಕಳು ಕೌಂತೇಯರಾಗುವುದು ಮಾತೃ ಪ್ರಧಾನ ಸಮಾಜವನ್ನೇ ಸೂಚಿಸುವುದು. 

ತಮ್ಮ ಜೊತೆಗೆ ತಾಯಿಯನ್ನೂ, ಸ್ವಂತ ಬುದ್ಧಿಯ ಅರಿವು ಕೊನರಿ ತಾವು ಬೆಳೆದು ನಿಲ್ಲುವವರೆಗೂ ತಾಯಿಯನ್ನೂ, ತಾಯಿಯೊಂದಿಗೆ ತಮ್ಮ ಸುತ್ತ ಮುತ್ತಲಿನ ಪ್ರಕೃತಿಯನ್ನೂ ನೋಡುತ್ತಾ, ನಿಸರ್ಗದ ಒಡನಾಡಿಯಾಗಿದ್ದ ಗಂಡು ಮಕ್ಕಳಾಗಲಿ, ಹೆಣ್ಣು ಮಕ್ಕಳಾಗಲಿ, ಪ್ರಕೃತಿಯನ್ನು ಹೆಣ್ತನಕ್ಕೆ ಅಥವಾ ಪೊರೆಯುವ ತಾಯ್ತನಕ್ಕೆ ಸಮೀಕರಿಸಿದ್ದು ಏನೂ ಆಶ್ಚರ್ಯವಿಲ್ಲ. ಆ ವ್ಯಕ್ತಿಗಳ ಸಮೂಹವು ಮುಂದೆ ಗುಂಪುಗಳಾದಾಗ, ಆಯಾ ಗುಂಪುಗಳನ್ನು ಗುರುತಿಸಿಕೊಂಡಿದ್ದೂ, ಅವರ ನೆಚ್ಚಿನ ಯಾವುದೋ ಒಂದು ಪ್ರಕೃತಿಯಲ್ಲಿರುವ ವಸ್ತು, ಪಶು ಅಥವಾ ಪಕ್ಷಿಗಳನ್ನು ಲಾಂಛನವಾಗಿಟ್ಟುಕೊಳ್ಳುವ ಮೂಲಕವೇ. 

ಆರ್ಯರ ಮೂಲದ ಬ್ರಾಹ್ಮಣರಿಗಾಗಲಿ, ದ್ರಾವಿಡ ಅಥವಾ ಇನ್ನಿತರ ಬುಡಕಟ್ಟುಗಳ ಮೂಲದ ಪಂಗಡಗಳಾಗಲಿ ಈ ಮೇಲ್ಕಂಡ ರೀತಿಯಲ್ಲಿಯೇ ಬಂದಿರುವುದರಿಂದ ಗಣಗಳ ಲಾಂಛನಗಳು ಪ್ರಾಣಿಗಳು, ವೃಕ್ಷಗಳು ಅಥವಾ ಪಕ್ಷಿಗಳೇ ಆದವು. ಬ್ರಾಹ್ಮಣ ಜಾತಿಯ ಸದಸ್ಯರ ಸಮುದಾಯಗಳೂ ಸಣ್ಣ ಭಾಗಗಳಾಗಿ ಗೋತ್ರಗಳಾಗಿದ್ದು ಇದೇ ಬಗೆಯ ಮೂಲಗಳಿಂದಲೇ.

ಕಶ್ಯಪ ಗೋತ್ರದ ಉದಾಹರಣೆಯನ್ನು ಗಮನಿಸಿದರೆ, ಕಚ್ಛಪ ಅಂದರೆ ಆಮೆಯನ್ನು ಲಾಂಛನವಾಗಿಟ್ಟುಕೊಂಡಿದ್ದ ಪೂರ್ವಿಕರ ಮೂಲದಿಂದ ಬಂದಿರುವಂತಹದು. ಕೌಶಿಕ ಸೂತ್ರ(4.2)ದಲ್ಲಿ ಹೇಳುವಂತೆ, ಒಂದು ಮೂಲದಿಂದ (ಪ್ರಾಯಶಃ ರಕ್ತ ಸಂಬಂಧದ) ಬಂದಿರುವಂತಹ ವ್ಯಕ್ತಿಗಳ ಒಂದು ಸಮೂಹ. ಗೌತಮದ ಮೂಲ ಗೋ-ಲಾಂಛನದ್ದಾದರೆ, ಶುನಕವೆಂಬುದು ನಾಯಿ, ಮುದ್ಗಲವು ಒಂದು ಬಗೆಯ ಮೀನು, ಭಾರಧ್ವಜ, ಶಾಂಡಿಲ್ಯ ಒಂದು ಬಗೆಯ ಪಕ್ಷಿಗಳಾದರೆ, ಕೌಶಿಕವು ಗೂಬೆ; ಈ ಬಗೆಯ ಉದಾಹರಣೆಗಳನ್ನು ಗಮನಿಸಿದರೆ, ಬ್ರಾಹ್ಮಣರೂ ಪಶು ಅಥವಾ ಪ್ರಕೃತಿಯ ಲಾಂಛನವುಳ್ಳ ಬುಡಕಟ್ಟುಗಳ ಸಮೂಹದಿಂದಲೇ ಬಂದವರೆಂದು ಸ್ಪಷ್ಟವಾಗುತ್ತದೆ. ಆಯಾ ಪಶು ಲಾಂಛನಗಳ ಮೂಲದಿಂದ ಬಂದಂತಹ ಋಷಿಗಳ ಹೆಸರುಗಳೂ ಮುಂದೆ ಗೋತ್ರಕ್ಕೆ ನಾಮಧೇಯವಾಯಿತು.

ಅಂತಹ ಸಮೂಹಗಳು ಗಣಗಳು ಎನಿಸಿಕೊಂಡವು. ಆ ಗಣಗಳ ಒಡೆಯರು ಯಾರಾದರೂ ಅವರೆಲ್ಲರೂ ಗಣಪತಿಗಳಾದರು. ಆರ್ಯರ ದೇವತೆಗಳೆಂದು ಕರೆಯಿಸಿಕೊಳ್ಳಲ್ಪಟ್ಟ ಗಣದ ಒಡೆಯ ಇಂದ್ರನೂ ಗಣಪತಿಯೇ, ಬೃಹಸ್ಪತಿಯೂ ಗಣಪತಿಯೇ. ನಿಷಾಧರ ಗಣದ ಒಡೆಯ ರುದ್ರನೂ ಗಣಪತಿಯೇ. ಎಷ್ಟೆಷ್ಟು ಗಣಗಳಿದ್ದವೋ ಅಷ್ಟೆಲ್ಲಾ ಗಣಪತಿಯರಿದ್ದರು. ಗಣಗಳು ಒಡೆದು ಸಣ್ಣ ಸಣ್ಣ ಗಣಗಳಾದ ಅವುಗಳ ನಾಯಕರು ಹೊಮ್ಮಿದಂತೆ ಗಣಪತಿಯರು ಹುಟ್ಟಿಕೊಂಡರು. ಬೇರೆ ಬೇರೆ ಗಣಗಳು ಸಂಘರ್ಷದ ಫಲವಾಗಿಯೋ, ಸಂಧಾನದ ಫಲವಾಗಿಯೂ ಒಂದು ದೊಡ್ಡ ಗಣವಾಗಿ ಹೊಮ್ಮಿದಾಗ ಮಹಾಗಣಪತಿಗಳೂ ಹೊಮ್ಮಿರುವ ಸಾಧ್ಯತೆಗಳುಂಟು.  

ಭಾರತದಲ್ಲಿ ರಾಜ್ಯ ವ್ಯವಸ್ಥೆಯು ನಿಂತದ್ದೇ ಬುಡಕಟ್ಟುಗಳ ಅವಶೇಷಗಳ ಮೇಲೆ. ಆಗ ಇದ್ದಂತಹ ಬುಡಕಟ್ಟುಗಳ ಬಣಗಳು ಗಣಗಳೆಂದು ಕರೆಯಿಸಿಕೊಳ್ಳುತ್ತಿದ್ದವು. ನಾಗರಿಕತೆ ಮತ್ತು ರಾಜ್ಯ ವ್ಯವಸ್ಥೆಯೂ ಎಲ್ಲೆಡೆಯೂ ಸಮವಾಗಿ ಬೆಳೆದು ಅಭಿವೃದ್ಧಿ ಹೊಂದಿರುವುದೇನಲ್ಲ. ಆರ್ಯರೆಂಬುವರು ಅವರೂ ಏನೂ ಒಮ್ಮಿಂದೊಮ್ಮೆಲೆ ಇತರರಿಗಿಂತ ಶಿಷ್ಟರೆಂಬಂತೆ ತೋರುವ ತಮ್ಮ ಪದ್ಧತಿಯನ್ನು ರೂಢಿಸಿಕೊಂಡೇ ಹುಟ್ಟಿಬಂದವರಲ್ಲ. ಅವರೂ ಆಗಿನ ಇತರ ಬುಡಕಟ್ಟುಗಳಿದ್ದಂತೆ ಇದ್ದವರೇ. ಅವರ ಸಂಪತ್ತನ್ನು ಪಶುಗಳಲ್ಲಿ ಅಳೆಯಲಾಗುತ್ತಿತ್ತು. ಈ ಪಶು ಸಂಪತ್ತಿಗಾಗಿ ಅವರವರ ಬಣಗಳಲ್ಲಿ ಮತ್ತು ಇತರರ ಅಂದರೆ, ಆರ್ಯರಲ್ಲದ ಬಣಗಳೊಡನೆಯೂ ಹೋರಾಟಗಳಾಗುತ್ತಿದ್ದವು. ಇಂತಹ ಹೋರಾಟಗಳಲ್ಲಿ ಸೋಲು ಮತ್ತು ಗೆಲುವು ಎಲ್ಲವೂ ಇದ್ದಂತಹುದ್ದೇ. 

ಭಾರತದಲ್ಲಿ ಕಾಲಕಾಲಕ್ಕೆ ಬಂದು ನೆಲೆಸಿದ ಜನಾಂಗಗಳು ಇಲ್ಲಿಯ ಮೂಲ ನಿವಾಸಿಗಳೊಂದಿಗೆ ಐತಿಹಾಸಿಕವಾಗಿ ಹೋರಾಡಿ ಗೆದ್ದರೂ ಕೊನೆಗೂ ಸಾಂಸ್ಕೃತಿಕವಾಗಿ ಅವರಿಗೇ ಸೋತು ಬಾಳಿದ ಸಂದರ್ಭದಲ್ಲಿ ಕೆಲವೊಂದು ಒಡಂಬಡಿಕೆ, ಹೊಂದಾಣಿಕೆ ಮಾಡಿಕೊಂಡಾಗ ಗೆದ್ದವರ ದೇವತೆಗಳಿಗೆ ಸೋತವರ ದೇವತೆಗಳು ವಾಹನಗಳಾದವು. ಒಬ್ಬರ ವಾಹನ (ಗಣಗಳ ಲಾಂಛನ?) ಇನ್ನೊಬ್ಬರ ವಾಹನವೂ ಆಯಿತು. ಒಬ್ಬರಿಗಿದ್ದಷ್ಟೇ ಭುಜಗಳು ಇನ್ನೊಬ್ಬರಿಗೂ ಆದವು. ವೈದಿಕ ದೇವತೆಗಳು ಹಿಂದೆ ಬಿದ್ದು ಪೌರಾಣಿಕ ವ್ಯಕ್ತಿತ್ವಗಳು ದೇವತ್ವವನ್ನು ಪಡೆದವು. ಅಲ್ಲಲ್ಲಿಯ ಪ್ರಾದೇಶಿಕ ದೇವರುಗಳು ಭಾರತೀಯ ಪ್ರಾಶಸ್ತ್ಯವನ್ನೂ ಪಡೆದರು. ಇಂದ್ರನಿಗೂ ಗೌಣನಾದ ಉಪೇಂದ್ರನು ವಿಷ್ಣುವಾದನು. ಸರಸ್ವತಿಯ ಮಯೂರವು ಸುಬ್ರಹ್ಮಣ್ಯನದಾಯಿತು. ದುರ್ಗೆಯ ಸಿಂಹವು ಕೃತಯುಗದ ಗಣಪತಿಯ ವಾಹನವೂ ಆಯಿತು. ದೇವರ ಸಹಸ್ರನಾಮಗಳಲ್ಲಿಯೂ ಹಲವಷ್ಟು ಸ್ವತಃ ಬೇರೆ ಬೇರೆ ದೇವತೆಗಳ ಹೆಸರುಗಳಾದವು. 

ಪ್ರತಿಯೊಂದಕ್ಕೂ ಒಂದೊಂದು ಕಥೆ, ಅದು ಬೆಳೆದು ಒಂದೊಂದು ಪುರಾಣ ಕಟ್ಟಿಕೊಂಡಿತು. – ಎಂದು ಗೌರೀಶ ಕಾಯ್ಕಿಣಿಯವರು ತಮ್ಮ “ಗಣಪತಿ ಮತ್ತು ಮಾರುತಿ” ಎಂಬ ಒಂದು ಲೇಖನವೊಂದರಲ್ಲಿ ವಿವರಿಸುತ್ತಾ, ಗಣಪತಿಯೊಬ್ಬ ಕೃಷಿದೇವತೆಯಿರಬೇಕು ಎಂದು ಅಭಿಪ್ರಾಯ ಪಡುತ್ತಾರೆ. ಏಕದಂತ ಒಂದೇ ಹಲ್ಲಿನ ನೇಗಿಲನ್ನು ನೆನಪಿಸುತ್ತದೆ. ಭಾದ್ರಪದದ ಜಡಿಮಳೆಗೆ ಆಕಾಶ ಮೋಡ ಕವಿದಿರಬೇಕು. ಆಗ ನಿರಭ್ರ ಶುಭ್ರವಾಗಿ ಚಂದ್ರ ನಗುತ್ತಿದ್ದರೆ, ಅದು ಕೃಷಿದೇವತೆಗೆ ಹೇಗೆ ಸಹನವಾಗಬೇಕು ಎಂದು ಗೌರೀಶ ಕಾಯ್ಕಿಣಿಯವರು ಪ್ರಶ್ನಿಸುತ್ತಾರೆ. ಹಾಗೆಯೇ ಮುಂದುವರಿದು, “ಈತ ಗಣಪತಿ, ಈ ಗಣಗಳು ಯಾವುವು? ಸಂಸ್ಕೃತದಲ್ಲಿ ಧಾತುಗಳ ಗಣಗಳಿವೆ, ಛಂದಸ್ಸಿನ ಮಾತ್ರಾಗಣಗಳಿವೆ, ಮರುತ್ ಗಣಗಳಿವೆ, ಪ್ರಮಥಗಣಗಳಿವೆ. ಯಾವ ಗಣಗಳಿಗೆ ಈತ ಪತಿ? ಮೂಲತಃ ಪ್ರಾದೇಶಿಕ, ಜಾನಪದವಾದ ಕೃಷಿ ದೇವತೆಯನ್ನು ಬ್ರಾಹ್ಮಣೀಕರಣದ ಯುಗದಲ್ಲಿ ವೈದಿಕ ದೇವತೆಯನ್ನಾಗಿ ಪುನರ್ಘಟಿಸಲಾಗಿದೆ. 

ವೈದಿಕವಾಗಿ ಗಣಪತಿಯದು ಎನ್ನುವ ವರ್ಣನೆಗಳಲ್ಲಿ ಆತ ಗಜಾನನನೆಂಬುದೇ ಇಲ್ಲ. ಒಂದೆಡೆಗೆ ‘ಮಹಾಹಸ್ತೀ ದಕ್ಷಿಣೇನ’ ಎಂಬ ಉಲ್ಲೇಖ ಬರುತ್ತದೆ. ಆದರೆ ಅಲ್ಲಿ ಅದರ ಅರ್ಥ ಬಲಬದಿಗೆ ಒಲಿದ ಸೊಂಡಿಲಿನ ಆನೆಯೆಂದು ಅಲ್ಲವೇ ಅಲ್ಲ. ಇದು ಇಂದ್ರನ ಹೊಗಳಿಕೆ. ಆತ ಮಹಾಹಸ್ತೀ ಅಂದರೆ ದೊಡ್ಡ ಹಸ್ತ ಉಳ್ಳವ, ದಕ್ಷಿಣೆ (ದಾನ) ನೀಡುವುದರಲ್ಲಿ, ಕನ್ನಡದಲ್ಲಿ ‘ಕೊಡುಗೈ ದೊರೆ’ ಎನ್ನುವಂತೆ. ಇಲ್ಲಿ ಬರುವ ಹಸ್ತೀ ಎಂಬುದನ್ನು ಕೈಯುಳ್ಳವನೆನ್ನುವ ಬದಲು ಸೊಂಡಿಲುಳ್ಳವನೆಂದು ಅರ್ಥ ಮಾಡಿಕೊಂಡು ಗಣಪತಿಯ ಗಜಮುಖಕ್ಕೆ ವೈದಿಕ ಆಧಾರ ಕಲ್ಪಿಸುವ ಪ್ರಯತ್ನವಾಗಿದೆ, ಎಂದು ಗೌರೀಶ ಕಾಯ್ಕಿಣಿಯವರು ತಮ್ಮ ಉಪಪತ್ತಿಯಲ್ಲಿ (ಇಂಟರ್‌ಪ್ರಿಟೇಶನ್) ಹೇಳುತ್ತಾರೆ.

ಶ್ರೀ ಭಗವಾನ್ ದಾಸರು ತಮ್ಮ ಮಾನವಧರ್ಮ ಸಾರದಲ್ಲಿ, “ಪ್ರಾಚೀನೇನಾರ್ಯವೈದಿಕ ಸಮಾಜೇನ ಪರಾಜಿತ ಬರ್ಬರ ನಿಷಾದ ಆದಿ ಜಾತೀಃ ಸ್ವಸಮಾಜವ್ಯವಸ್ಥಾಯಾಂ ಯಥಾ ಸ್ಥಾನಂ ನಿವೇಶಯಿತು, ಮೈತ್ರೀ ಬುದ್ಧಾಂಚ ಸಾನ್ತ್ವಯಿತುಂ ತಾಸಾಂ ಕಾಶ್ಚಿದ್ಬಹು ಪೂಜಿತಾ ದೇವತಾಃ ತದರ್ಚನ ಪ್ರಕಾಶಾಣಾಮಾಂಶಾಂಶ್ಚ ಕಾಂಶ್ಚಿತ್ ಯಥಾ ಶಕ್ಯಂ ಪರಿಷ್ಕೃತ್ಯಾನುಮೇನಿರೆ | ಆಧ್ಯಾತ್ಮಿಕೈ ರರ್ಥೈಶ್ಚಾಪಿ ತಾಸಾಂ ಜಾತೀನಾಂ ಕ್ರಮಶಃ ಉದ್ಭೋಧನಾಯ ಚೋತ್ಕರ್ಷಣಾಯ ಚ ತಾ ದೇವತಾಶ್ಚ ತಾನರ್ಚಪ್ರಕಾರಂಶ್ಚ ಯುಯುಜಿರೆ |” ಎಂದು ಹೇಳಿರುವುದನ್ನು ಆಧರಿಸಿ, “ಪ್ರಾಚೀನ ಆರ್ಯ ವೈದಿಕ ಸಮಾಜವು ತಮ್ಮಿಂದ ಸೋತ ಬರ್ಬರ ಮತ್ತು ನಿಷಾದಾದಿಗಳ ಸಾಮಾಜಿಕ ಸ್ಥಿತಿಗಳನ್ನು ಯಥಾಸ್ಥಾನದಲ್ಲಿರಿಸಲು ಮತ್ತು ಸ್ನೇಹಬುದ್ಧಿಯಿಂದ ಅವರನ್ನು ಸಮಾಧಾನಪಡಿಸಲು ಅವರಲ್ಲಿಯ ಬಹುಪೂಜಿತ ದೇವತೆಗಳನ್ನು ಮತ್ತು ಮುಖ್ಯವಾದ ಪೂಜಾಂಶಗಳನ್ನು ತಮ್ಮ ಶಕ್ತ್ಯಾನುಸಾರ ಪರಿಷ್ಕರಿಸಿ ಅವುಗಳನ್ನು ಒಪ್ಪಿಕೊಂಡರು ಆ ಜಾತಿಗಳ ಉದ್ಬೋಧನೆ ಮತ್ತು ಉತ್ಕರ್ಷಣಕ್ಕಾಗಿ ಆ ದೇವತೆಗಳಿಗೂ ಹಾಗೂ ಪೂಜಾವಿಧಾನಗಳಿಗೂ ಆಧ್ಯಾತ್ಮಿಕ ಅರ್ಥವನ್ನು ಕಲ್ಪಿಸಿದರು. ಹಾಗಾಗಿ, ಆರ್ಯ ವೈದಿಕ ಸಮಾಜವು ಬುದ್ಧಿ ಪೂರ್ವಕವಾಗಿಯೇ ತಮ್ಮ ದೇವತೆಗಳ ಸಾಲಿನಲ್ಲಿ ಗಣಪತಿಯನ್ನು ಸೇರಿಸಿದರು.

ಆದರೆ ಪ್ರಾರಂಭದಲ್ಲಿ ಆರ್ಯರು ಅನಾರ್ಯರ ಸಹವಾಸದಿಂದ ವಿನಾಯಕನ ರೂಪದಲ್ಲಿ ಗಣಪತಿಯನ್ನು ಬಲತ್ಕಾರವಾಗಿ ಸೇರಿಸಿದರು. ಅನಂತರ ಅವನನ್ನು ಪರಿಷ್ಕರಿಸಬೇಕಾಗಿ ಬಂದಿತೆಂಬುದು ಡಾ. ಸಂಪೂರ್ಣಾನಂದ ಅ. ಮರಿಬಸವಾರಾಧ್ಯರವರು ಅಭಿಪ್ರಾಯ ಪಡುತ್ತಾರೆ. (ಗಣಪತಿ ತತ್ವ: ವಿಶ್ವವ್ಯಾಪಿ ಗಣೇಶ).

ಇವುಗಳಾದದ್ದು ಬಹುಕಾಲದ ನಂತರ. ಹಲವಾರು ಕಾಲಘಟ್ಟಗಳು ಈ ಬೆಳವಣಿಗೆಗೆ ಸಾಕ್ಷಿಯಾಗಿವೆ.

ಅದಿರಲಿ, ಮತ್ತೆ ಈ ಮೊದಲು ಪ್ರಾರಂಭಿಸಿದ ವಿಷಯಕ್ಕೇ ಮರಳೋಣ. ಆರ್ಯರೇ ಆಗಲಿ, ಇತರರೇ ಆಗಲಿ, ಪ್ರಕೃತಿಯಲ್ಲಿನ ತಮ್ಮ ಅನುಭವವನ್ನು ಅಭಿವ್ಯಕ್ತ ಪಡಿಸುತ್ತಾ ಬಂದಂತೆ, ಕವಿತ್ವಗಳಾದವು, ಸಿದ್ಧಾಂತಗಳಾದವು. ಬರವಣಿಗೆ ಇಲ್ಲದ ಆ ಕಾಲಘಟ್ಟದಲ್ಲಿ ಬಾಯಿಂದ ಬಾಯಿಂದ ಹರಿಯುತ್ತಾ ಬಂದಂತೆ, ವ್ಯಕ್ತಿಗಳ ಅನುಭವದ ಬೆಳವಣಿಗೆಗೆ ತಕ್ಕಂತೆ ಸಿದ್ಧಾಂತಗಳೂ ಬದಲಾಗುತ್ತಾ ಬಂದವು. ಆಗಿನ ಕೆಲವು ವಿಷಯಗಳನ್ನು ಈಗಿರುವ ವಸ್ತು ಸ್ಥಿತಿ, ಸಿದ್ಧಾಂತಗಳಿಗೆ ಅವಲೋಕಿಸಿದರೆ ಆಶ್ಚರ್ಯವೆನಿಸುತ್ತದೆ. ಆಗಿನ ಆರ್ಯರ, ವೈದಿಕರ ಅಭಿವ್ಯಕ್ತಿಯಲ್ಲಿ ಮೋಕ್ಷವೆಂಬುದೇ ಇರಲಿಲ್ಲ. ಎಲ್ಲವೂ ಲೌಕಿಕವಾದ ಫಲಾಪೇಕ್ಷೆಗಳೇ ಆಗಿದ್ದವು. ಅತಿಭೌತಿಕವಾದ ವಿಷಯಗಳಿಗೆ ಪ್ರಾಮುಖ್ಯತೆ ನೀಡದೇ ದೈನಂದಿನ ಸುಖಕ್ಕಾಗಿ, ಆಗಿನ ಸಮಯ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಬೇಕಾದ ವಸ್ತುಗಳಿಗೆ, ಸವಲತ್ತುಗಳಿಗೆ ಹಾತೊರೆಯುತ್ತಿದ್ದರು. ಅದನ್ನೇ ಬಯಸಿ ತಮ್ಮ ಪ್ರಾರ್ಥನೆಗಳಲ್ಲಿ ಹೇಳುತ್ತಿದ್ದರು. ಗಾಳಿ, ಬೆಳಕು, ನೀರು, ಆಹಾರ ಇತ್ಯಾದಿಗಳಿಗೆ ತಮ್ಮ ಕಾಲ್ಪನಿಕ ಅಧಿಪತಿಗಳನ್ನು ರೂಪಿಸಿಕೊಂಡು ಅವರಲ್ಲಿ ಸದಾ ಲೌಕಿಕ ಕೋರಿಕೆಗಳನ್ನು ಮುಂದಿಡುತ್ತಿದ್ದರು. ಹಾಗೆಯೇ ಆಸೆ, ಅಚ್ಚರಿ, ಆತಂಕ ಮತ್ತು ಭಯಗಳ ಮೂಲದಿಂದಲೇ ದ್ರಾವಿಡರೇ ಮೊದಲಾದ ಅರಣ್ಯಕರೂ ತಮ್ಮ ಕಾಲ್ಪನಿಕ ಮೂರ್ತಿಗಳನ್ನು ರೂಪಿಸಿಕೊಂಡು ಅವುಗಳನ್ನು ನಂಬುತ್ತಿದ್ದರು. ಆದರೆ, ಅವರಲ್ಲಿ ಪ್ರಾರ್ಥನೆಯೆಂಬುದು ಇರಲಿಲ್ಲ. ಬದಲಾಗಿ ಆದೇಶಗಳಿರುತ್ತಿತ್ತು. ತಮಗೆ ಬೇಕಾದ ವಿಷಯವನ್ನು ಪ್ರಕೃತಿಗೆ ಆಜ್ಞಾಪಿಸುತ್ತಿದ್ದರು. ಅದು ಈಡೇರುವಂತೆ ಅಬ್ಬರದ ನಾಟಕವಾಡುತ್ತಿದ್ದರು. ಮಾಂತ್ರಿಕತೆ ಮೂಲವಾಗಿರುವುದು ಇಂತಹ ಆಚರಣೆಗಳೇ ಎಂಬ ಜಿಜ್ಞಾಸೆಗಳಿವೆ. 

ಏನೇ ಆಗಲಿ, ಪ್ರಕೃತಿ ಮೂಲದಿಂದ ಬಲು ಸರಳವಾಗಿ, ಬಹು ಸಹಜವಾಗಿ ಬಂದಂತಹ ಸಿದ್ಧಾಂತಗಳು ಮಾನವ ಜೀವನಕ್ಕೆ ನಿಕಟವಾಗಿದ್ದು, ದೈನಂದಿನ ಬದುಕಿಗೆ ಹತ್ತಿರವಾಗಿದ್ದು, ಅತಿ ಭೌತಿಕವಾದಂತಹ ಪುರಾಣಗಳು ಹೇಗೆ ಹುಟ್ಟಿಕೊಂಡು ಬಂದವು ಎಂಬುದು ಅತ್ಯಂತ ಆಶ್ಚರ್ಯದ ವಿಷಯ. ಸಹಜವಾದಂತಹ, ಸರಳವಾದಂತಹ ವಿಷಯಗಳನ್ನು ಮಹಾ ರಹಸ್ಯ ವಿಷಯಗಳೆಂಬಂತೆ ತೋರ್ಪಡಿಸುತ್ತಾ, ಬಹು ದೊಡ್ಡ ಸಿದ್ಧಾಂತಗಳೆಂಬಂತೆ ಸಾಧಿಸುತ್ತಾ ಅತಿ ಮಾನುಷವಾದ ಅಭಿವ್ಯಕ್ತಿಯ ಹಿಂದೆ ಬಹು ದೊಡ್ಡ ರಾಜಕೀಯ ಪ್ರೇರಣೆ ಮತ್ತು ಸ್ವಾರ್ಥ ಸಾಧನೆಗಳು ಇರುವುದು ಆಶ್ಚರ್ಯವೇನೂ ಅಲ್ಲ. ಆಗಿನ ಒಂದು ಸಮುದಾಯದ ಅಥವಾ ಹಲವು ವರ್ಗಗಳ ಜೀವನ ಕ್ರಮ ಮತ್ತು ಪದ್ಧತಿಗಳನ್ನು, ಅನುಭವ ಮತ್ತು ಅನುಭಾವ ಸಿದ್ಧಾಂತಗಳನ್ನು ಉಲ್ಲೇಖಿಸಿದ ದಾಖಲೆಗಳಾದ ವೇದಗಳ ಹಾಗೂ ಕೆಲವೊಮ್ಮೆ ವೈದಿಕ ಪದ್ಧತಿಗಳನ್ನು ಅಲ್ಲಗಳೆಯುತ್ತಾ, ಮುಕ್ತವಾದ ವಿಚಾರ, ವಿವೇಚನೆಗಳಿಂದ, ವ್ಯಕ್ತಿಯ ಒಳಗಿನ ಮತ್ತು ಹೊರಗಿನ ಅನುಭವ ಮತ್ತು ಅನುಭೂತಿಗಳನ್ನು ನಿಷ್ಪಕ್ಷಪಾತವಾಗಿ, ನಿರ್ವಂಚನೆಯಿಂದ ಜಿಜ್ಞಾಸೆ ಮಾಡುತ್ತಾ ಬಂದ ಉಪನಿಷತ್ತುಗಳ ಕಾಲಗಳ ನಂತರ ಅಥವಾ ಅವುಗಳ ಜೊತೆ ಜೊತೆಯಾಗಿಯೇ ಪುರಾಣಗಳು ಹೇಗೆ ಮೂಡಿ ಬಂದವು ಎಂಬುದೇ ಒಂದು ಕುತೂಹಲಕರವಾದ ಅಂಶ. ಅದರಲ್ಲೂ ಈ ಪುರಾಣಗಳಲ್ಲಿ ರಾಜಕೀಯ, ಸ್ವಜನ ಪಕ್ಷಪಾತ, ಸಿದ್ಧಾಂತಗಳ ವೈಭವೀಕರಣವಾಗಿದ್ದು ಇನ್ನೂ ಆಸಕ್ತಿದಾಯಕ. ಪುರಾಣಗಳಲ್ಲಿ ಪಕ್ಷಪರ ರಾಜಕೀಯಗಳು ಆದವು. ಅದರಲ್ಲೂ ಗಣಪತಿಯನ್ನು ಸಾರ್ವಜನಿಕವಾಗಿ ಕೂರಿಸುವ ತಿಲಕರ ಧೋರಣೆ ಮತ್ತು ಇತರ ಗಣೇಶೋತ್ಸವಗಳಲ್ಲಿ ಭಯಂಕರ ಸಮಾಜೋಧಾರ್ಮಿಕ ರಾಜಕೀಯಗಳಿವೆ. ಅವುಗಳು ಈ ಲೇಖನದ ವಿಷಯವಲ್ಲ.

(ಚಿತ್ರ ಕೃಪೆ: ಗೂಗಲ್)

ಯೋಗೇಶ್‌ ಮಾಸ್ಟರ್

ಕಾದಂಬರಿ, ನಾಟಕ, ಕವಿತೆ, ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವವರು.

ಇವುಗಳನ್ನು ಓದಿದ್ದೀರಾ?

Related Articles

ಇತ್ತೀಚಿನ ಸುದ್ದಿಗಳು