ಮಹಾತ್ಮ ಗಾಂಧೀಜಿಯವರ 75ನೇ ಪುಣ್ಯ ತಿಥಿ ಇಂದು. ತನ್ನ ಚಿಂತನೆ, ಜೀವನ ಸಂದೇಶಗಳಿಂದಲೇ ಜಗತ್ತಿನುದ್ದಕ್ಕೂ ವ್ಯಾಪಿಸಿ ನಿಂತ ಈ ಮಹಾನ್ ಚೇತನವನ್ನು ನೆನಪಿಸಿಕೊಳ್ಳಲು ಅಕ್ಟೋಬರ್ 2 ಮತ್ತು ಜನವರಿ 30 ಕೇವಲ ನೆಪಗಳಷ್ಟೆ. ಮಹಾತ್ಮರ ವಿಚಾರ ಧಾರೆಗಳು ಮುಂಬರುವ ಪೀಳಿಗೆಗೆ ಮಾರ್ಗದರ್ಶಿಯಾಗಬೇಕೆನ್ನುವ ತುಡಿತದೊಂದಿಗೆ ಅವರ ಅಭಿಮಾನಿ ನೇತಾಜಿ ಗಾಂಧಿಯವರು ಗಾಂಧೀಜಿಯವರ ಜೀವನ ಮೌಲ್ಯಗಳು ಜಗತ್ತಿನ ಮೇಲೆ ಬೀರಿದ ಪ್ರಭಾವದ ಕುರಿತು ಬರೆಯುತ್ತಾರೆ.
“ಭಾರತದ ಒಬ್ಬ ಗಾಂಧಿ ೧೦೦ ನೊಬೆಲ್ ಗೆ ಸಮ. ಮಹಾತ್ಮಾ ಗಾಂಧಿಯವರು ಪ್ರತಿಪಾದಿಸಿದ ಅಹಿಂಸಾ ತತ್ತ್ವ ಸಿದ್ಧಾಂತಗಳು ಅವರ ಮಾನವೀಯ ಮೌಲ್ಯಗಳು, ಅವರ ನಡೆದು ಹೋದ ಶಾಂತಿಯ ಪಥ ಮನುಕುಲ ಉಳಿಯಲು ಅಂತಿಮ ಮಾರ್ಗ”. 1981ರಲ್ಲಿ 53 ಮಂದಿ ನೊಬೆಲ್ ಪುರಸ್ಕೃತರು ಉದ್ಘರಿಸಿದ ಪದಗಳಿವು.
ಸರ್ವೋದಯ ಫಿಲಾಸಫಿಯ ಸರ್ವೋಚ್ಛ ನೇತಾರ, ಮಾನವ ಪ್ರಪಂಚದ ಮಹಾ ನಾಯಕ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರು ಅಂದಷ್ಟೇ ಅಲ್ಲ, ಇಂದಷ್ಟೇ ಅಲ್ಲ ಮುಂದಷ್ಟೇ ಅಲ್ಲ, ಅವರು ಎಂದೆಂದಿಗೂ ಪ್ರಸ್ತುತರು. ಆ ಸೂರ್ಯ ಚಂದ್ರರು ಇರುವ ತನಕವೂ ಬಾಪೂ ಪ್ರತಿಪಾದಿಸಿದ ತತ್ವ- ಸಿದ್ಧಾಂತಗಳು ಅವರು ನಡೆದು ಹೋದ ಶಾಂತಿಯ ಪಥ, ಅವರು ಬ್ರಿಟಿಷರ ವಿರುದ್ಧ ಬಳಸಿದ ಸತ್ಯ, ನ್ಯಾಯ, ಅಹಿಂಸೆಗಳೆನ್ನುವ ಅಮೂಲ್ಯ ಅಸ್ತ್ರಗಳು ಮನು ಕುಲಕ್ಕೆ ಮಾರ್ಗದರ್ಶಿಯಾಗಿಯೇ ಇರಲಿವೆ. ಪ್ರಪಂಚದ ಅಗಣಿತ ನೇತಾರರಿಗೆ ಸ್ಪೂರ್ತಿದಾಯಕವಾಗಿವೆ. ಅವರು ನಡೆದು ಹೋದ ಶಾಂತಿಯ ಪಥ ಮಾನವ ಜಗತ್ತಿಗೆ ಹೆದ್ದಾರಿಯಾಗಿದೆ.
ಹಾಗೆಂದೇ ʼಸೌತ್ ಆಫ್ರಿಕೆಯ ಗಾಂಧಿʼ ಎಂದು ಪರ್ಯಾಯ ಹೆಸರಿನಿಂದ ಕರೆಯಲ್ಪಡುವ ಡಾಕ್ಟರ್ ನೆಲ್ಸನ್ ಮಂಡೇಲಾ, ಅಮೇರಿಕೆಯ ಗಾಂಧಿ ಎಂದು ಎನಿಸಿಕೊಂಡ ಡಾಕ್ಟರ್ ಮಾರ್ಟಿನ್ ಲೂಥರ್ ಕಿಂಗ್, ಜೂನಿಯರ್ ಬರ್ಮಾ ದೇಶದ ಗಾಂಧಿ ಎನಿಸಿಕೊಂಡ ಆಂಗ್ ಸಾನ್ ಸೂಕಿ, ನೈಜೀರಿಯಾ ದೇಶದ ಗಾಂಧಿ ಎನಿಸಿಕೊಂಡ ಅಮೀನೋ ಕಾಣೋ ಅಂತಹ ಸಾವಿರ ಸಾವಿರ ಜನ ನಾಯಕರಿಗೆ ಸ್ಪೂರ್ತಿಯ ಸೆಲೆ ನಮ್ಮ ಬಾಪೂಜಿ. ನೊಬೆಲ್ ವಿಜೇತರಾದ ರೋಮಾ ರೋಲಾ, ಜಗತ್ ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್ಸ್ಟಿನ್, ಸೌತ್ ಆಫ್ರಿಕೆಯ ನಾಯಕರಾದ ಡೆಸ್ಮಂಡ್ ಟುಟು, ಆಲ್ಬರ್ಟ್ ಲ್ಯೂತುಳಿ ಇಂತಹ ಸಾವಿರ ಸಾವಿರ ನಾಯಕರು ಗಾಂಧೀಜಿಯವರು ನಡೆದು ಹೋದ ಶಾಂತಿಯ ಪಥವನ್ನೇ ಆಯ್ಕೆ ಮಾಡಿಕೊಂಡು ಸಾತ್ವಿಕ ವಾಗಿ ಹೋರಾಡಿ ನಿಗ್ರೋಗಳಿಗೆ ಘನತೆಯ ಬದುಕನ್ನು ತಂದುಕೊಟ್ಟವರು. ಡಾಕ್ಟರ್ ಮಂಡೇಲಾ ಅವರಂತೂ ದಶಕಗಳ ಕಾಲ (27 ವರುಷ ರಾಬಿನ್ ಐಲ್ಯಾನ್ಡ್ ನಲ್ಲಿ ಜೈಲು ಶಿಕ್ಷೆ ಅನುಭವಿಸಿದರು) ಸೆರೆಮನೆಯ ವಾಸವನ್ನು ಅನುಭವಿಸಿ ಕೊನೆಗೆ ಬಿಳಿಯ ರ ವಿರುದ್ಧ ಶಾಂತಿಯ ಸತ್ಯಾಗ್ರಹ ನಡೆಸಿ ಹೋರಾಡಿದವರು. ಅಮೆರಿಕೆಯ ಕರಿಯರಿಗಾಗಿ ಸ್ವಾತಂತ್ರ್ಯ ತಂದು ಕೊಟ್ಟ ಡಾಕ್ಟರ್ ಕಿಂಗ್ ಜ್ಯೂನಿಯರ್ ಜಗತ್ತಿನ ಮುಂದೆ ಗಾಂಧೀಜಿಯವರ ತತ್ವ – ಸಿದ್ಧಾಂತಗಳನ್ನ ಪ್ರಚಾರ ಪಡಿಸಿದವರು.
ಗಾಂಧೀಜಿಯವರ ರಾಷ್ಟ್ರೀಯ ಹೋರಾಟದಲ್ಲಿ ಭಾರತದಿಂದ ಬ್ರಿಟಿಷರನ್ನು ಓಡಿಸುವುದು ಅಷ್ಟೇ ಆಗಿರಲಿಲ್ಲ. ಭಾರತದಲ್ಲಿರುವ ಮೌಢ್ಯದ ವಿರುದ್ಧ, ಅಸಮಾನತೆಯ ವಿರುದ್ಧ, ಮತೀಯ ಐಕ್ಯತೆಯನ್ನು ಸಡಿಲ ಗೊಳಿಸುತ್ತಿರುವ ಆಂಗ್ಲರ ಒಡೆದು ಆಳುವ ನೀತಿಯ ವಿರುದ್ಧ, ಅಸ್ಪೃಶ್ಯತೆಯನ್ನು ಆಚರಿಸುತ್ತಿರುವ ಮೇಲು ವರ್ಗದ ಸವರ್ಣೀಯ ಹಿಂದೂಗಳ ವಿರುದ್ಧ ಹೋರಾಡುವ ಸಂಕಲ್ಪವೂ ಇತ್ತು. ದೀನರ, ಶೋಷಿತರ ಅಭ್ಯುದಯಕ್ಕಾಗಿ, ರೈತರ, ಕಾರ್ಮಿಕರ ಪರವಾಗಿ ತಮ್ಮ ಹೋರಾಟವನ್ನು ಸತ್ಯಾಗ್ರಹವನ್ನು ವಿಸ್ತರಿಸಿದ್ದರು ಬಾಪೂಜಿ.
ಪಶ್ಚಿಮ ಭಾರತದ ಗುಜರಾತಿನ ಪೋರ್ ಬಂದರ್ ನ ಮುಸ್ಲಿ ಮರ್ಜೆಂಟ್ ದಾದಾ ಅಬ್ದುಲ್ ಅವರ ಕೇಸನ್ನು ನಡೆಸಲು ಹೋಗಿದ್ದಾಗ ಮೋಹನ್ ದಾಸ್ ಗಾಂಧಿ ಯಂಗ್ ಬ್ಯಾರಿಸ್ಟರ್ ಆಗಿದ್ದರು. ಅಲ್ಲಿ ಅವರಿಗಾದ ಅವಮಾನ, ಅಪಮಾನಗಳು, ಹತ್ಯಾಯತ್ನಗಳು, ಅಲ್ಲಿದ್ದ ಭಾರತೀಯರ ಮೇಲೆ ಆಗುತ್ತಿದ್ದ ದೌರ್ಜನ್ಯಗಳು ಹಿಂಸೆಗಳು ಅಸಮಾನತೆಗಳು ವರ್ಣ ಬೇಧ ನೀತಿಗಳು ಈ ಎಲ್ಲವುಗಳು ಬ್ಯಾರಿಸ್ಟರ್ ಗಾಂಧಿಯನ್ನು ಕೆರಳಿಸಿದವು. ಕ್ರಮೇಣ ಸತ್ಯಾಗ್ರಹಿ ಗಾಂಧಿಯನ್ನಾಗಿ ಪರಿವರ್ತನೆ ಮಾಡಿದವು.
ತಮ್ಮ ಜೀವಮಾನದ 21 ವರುಷಗಳನ್ನು ಸೌತ್ ಆಫ್ರಿಕೆಯ ಸಂಘರ್ಷದ ಬದುಕಿನಲ್ಲಿ ಕಳೆದು ಮೋಹನ್ ದಾಸ್ ಅನ್ನುವ ವಕೀಲ ಜನವರಿ 9, 1915ಕ್ಕೆ ಮಹಾತ್ಮರಾಗಿ ಭಾರತಕ್ಕೆ ಬಂದರು. ಬಂದವರೇ ಶಾಂತಿ ಮಾರ್ಗದ ನಾಯಕ ಗೋಪಾಲಕೃಷ್ಣ ಗೋಖಲೆಯವರನ್ನು ಭೇಟಿ ಮಾಡಿದರು. ಗೋಖಲೆ ಅವರ ಅಣತಿಯಂತೆ ಇಡೀ ದೇಶವನ್ನು ಸುತ್ತಿದರು. ಪ್ರತಿಯೊಂದು ಪ್ರಾಂತ್ಯವನ್ನು ಸಂದರ್ಶಿಸಿದರು. ಬೆನ್ನು ಬಾಗಿದ ಬಡ ಭಾರತ ದರ್ಶನವನ್ನು ಕಂಡರು. ಮನಸು ಮರುಗಿತು, ಹೃದಯ ಕರಗಿತು.
ಈ ದೇಶದ ಜನಸಾಮಾನ್ಯರಿಗೆ ಇರದ ಸುಖ ಸಂಪತ್ತು ನನಗೆ ಬೇಡವೆಂದು ಸರಳ ಜೀವನವನ್ನು ಆಯ್ಕೆ ಮಾಡಿಕೊಂಡರು. ಜೀವನ ಪೂರ್ತಿ ಅರೆ ಬೆತ್ತಲೆ ಫಕೀರನಾಗಿ ಬದುಕಲು ಕಠಿಣ ನಿರ್ಧಾರವನ್ನು ಕೈಗೊಂಡರು. ಜೀವನದ ಕೊನೆಯ ಉಸಿರಿನವರೆಗೂ ಹಾಗೆಯೇ ಬದುಕಿದರು. ದಿವಾನರ ಮನೆತನದ, ಸಿರಿವಂತ ಕುಟುಂಬದ, ಮೇಲ್ವರ್ಗದ ಗಾಂಧಿ ಪ್ರತಿದಿನ ಪ್ರತಿಕ್ಷಣ ಬದಲಾಗುತ್ತಾ, ಮಾನವ ಜಗತ್ತಿಗೆ ತೆರೆದುಕೊಳ್ಳುತ್ತಾ ಹೋದರು, ಭಾರತಕ್ಕೆ ರಾಷ್ಟ್ರಪಿತ ಆದರು, ಇಡೀ ವಿಶ್ವಕ್ಕೆ ಮಹಾತ್ಮನಾದರು.
79 ವರ್ಷದ ಸಂಘರ್ಷದ ಬದುಕಿನಲ್ಲಿ ಗಾಂಧಿ ಪಕ್ವವಾದರು, ಮಾಗಿದರು. ಭಾರತಕ್ಕಷ್ಟೇ ಅಲ್ಲ ಇಡೀ ಮನುಕುಲಕ್ಕೆ ದಾರಿ ದೀಪ ವಾದರು. ಬಾಪೂಜಿಯ ಗಟ್ಟಿಯಾದ ಚಿಂತನೆಗಳು ತತ್ವ – ಸಿದ್ಧಾಂತಗಳು ಮಸುಕಾಗುವ ಸರಕಲ್ಲ. ಅವು ಕೇವಲ ಭಾರತಕ್ಕಷ್ಟೇ ಅಲ್ಲ ಇಡೀ ಪ್ರಪಂಚಕ್ಕೆ ಹೊಸ ಭಾಷ್ಯವನ್ನು ಬರೆಯಬಲ್ಲಂಥವು. ಎಂದೇ ಜಗತ್ತಿನ 184 ರಾಷ್ಟ್ರಗಳು ತಮ್ಮ ರಾಷ್ಟ್ರದ ಪ್ರಮುಖ ಸ್ಥಳಗಳಲ್ಲಿ ಗಾಂಧಿ ಪ್ರತಿಮೆಗಳನ್ನ ನಿರ್ಮಿಸಿಕೊಂಡು ಗಾಂಧಿಯವರ ತತ್ವ- ಸಿದ್ಧಾಂತಗಳನ್ನು ತಮ್ಮ ತಮ್ಮ ದೇಶಕ್ಕೆ ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಲಿವೆ. ಜಗತ್ತಿನ 301 ಕಡೆ ರಸ್ತೆ ಮಾರ್ಗಗಳಿಗೆ ಗಾಧೀಜಿಯವರ ಹೆಸರನ್ನು ಇರಿಸಿಕೊಂಡು ಗೌರವ ಸೂಚಿಸಿವೆ. ಯಾವುದೇ ಜಾತಿ ಧರ್ಮ ಸಮುದಾಯದ ಸೋಂಕು ಇಲ್ಲದೆಯೇ, ಆ ಜಾತಿ ಧರ್ಮ ಸಮುದಾಯವನ್ನು ಮೀರಿ ಬೆಳೆದ ಮಹಾನ್ ಚೇತನ ಗಾಂಧಿ ಎಂಬುದನ್ನು ಅರಿತೇ ವಿಶ್ವಸಂಸ್ಥೆಯೂ ಕಳೆದ ತಿಂಗಳ 14 ರಂದು ತನ್ನ ಕಚೇರಿಯಲ್ಲಿ ಗಾಧೀಜಿಯವರ ಪ್ರತಿಮೆಯನ್ನು ಅನಾವರಣ ಮಾಡಿಕೊಂಡಿತು.
ವಿಶ್ವ ಭ್ರಾತೃತ್ವ, ಪರಧರ್ಮ ಸಹಿಷ್ಣುತೆ, ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು, ಮಾನವೀಯತೆ, ನೈತಿಕತೆ, ಸಮ ಸಮಾಜ ನಿರ್ಮಾಣ, ಕೋಮು ಸೌಹಾರ್ದತೆ, ಅಸ್ಪೃಶ್ಯತಾ ನಿವಾರಣೆ, ವಿದ್ಯಾರ್ಥಿಗಳ ರೈತರ, ಕಾರ್ಮಿಕರ ಶೋಷಿತರ ದನಿಯಾಗಿ ದುಡಿದ ಮಹಾತ್ಮ ನಮ್ಮನ್ನಗಲಿ ಇದೇ ಜನವರಿ 30ಕ್ಕೆ 75 ವರ್ಷ ತುಂಬಿತು. ದೇಶದಲ್ಲಿ ಹಿಂಸೆ, ಅನ್ಯಾಯಗಳು ವಿಜೃಂಭಿಸುತ್ತಿವೆ. ಕದನಗಳು, ವಿಭಜನೆಗಳನ್ನು ಜಗತ್ತು ಎಂದಿಲ್ಲದಷ್ಟು ಎದುರಿಸುತ್ತಿದೆ. ಈ ಹೊತ್ತು ಗಾಂಧಿ ಜಗತ್ತಿಗೆ ಬಿಟ್ಟುಹೋದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಪ್ರಸ್ತುತವಾಗಿದೆ.
ನೇತಾಜಿ ಗಾಂಧಿ, ಬಿಜಾಪುರ
ಗಾಂಧಿ ಅಭಿಮಾನಿ