‘ಎಂಚಿನ ರಶ್ಶ್ ಮಾರಾಯರೆ… ನೂಕೋಂದು ನೂಕೋಂದು ಪೋದು ಸಾಕಾಂಡ್ʼ (ಎಂಥಾ ರಶ್ಶ್ ಮಾರಾಯರೆ..ತಳ್ಳಿಕೊಂಡು ಹೋಗಿ ಹೋಗಿ ಸಾಕಾಯ್ತು) ಇದು ಮಂಗಳೂರಿನ ಕದ್ರಿ ಪಾರ್ಕಿನೊಳಗೆ ಪ್ರವೇಶಿಸುತ್ತಿದ್ದಂತೆ ಕೇಳಿಬರುತ್ತಿದ್ದ ಮಾತು. ಮಂಗಳೂರಿಗರಿಗೆ ಬೀಚ್ ಬಿಟ್ಟರೆ ಹಾಯಾಗಿ ತಿರುಗಾಡಲು ಇರುವ ಒಂದೇ ಒಂದು ಪಾರ್ಕ್ ಕದ್ರಿ ಪಾರ್ಕ್. ಕೊರೋನಾ ಬಳಿಕ ಪಾರ್ಕ್ ಕೂಡಾ ನಿರ್ಜನ ಆಗಿದ್ದುದೇ ಹೆಚ್ಚು. ಹೀಗಿರುವಾಗ ಗಣರಾಜ್ಯೋತ್ಸವ ಪ್ರಯುಕ್ತ ಜನವರಿ ೨೬ರಿಂದ ೨೯ ರವರೆಗೆ ತೋಟಗಾರಿಕಾ ಇಲಾಖೆಯ ಹೂಹಣ್ಣು ಪ್ರದರ್ಶನ ಮಂಗಳೂರಿನ ಹೂಪ್ರಿಯರನ್ನು ಇನ್ನಿಲ್ಲದಂತೆ ಆಕರ್ಷಿಸಿತು.
ಬಣ್ಣ ಬಣ್ಣದ ಹೂಗಳಿಂದಲೇ ರೂಪಿಸಿದ ಜಿರಾಫೆ, ಪಾತರಗಿತ್ತಿ, ಲಿಂಬೆ ಹಣ್ಣುಗಳಿಂದ ನಿರ್ಮಿಸಿದ ಬಿಂದಿಗೆಯೊಳಗಿಂದ ಹರಿದುಬರುವ ನೊರೆನೀರಿನಂಥ ಪುಷ್ಪಧಾರೆ ವಿಶೇಷ ಆಕರ್ಷಣೆಯಾಗಿ ಅಲ್ಲಿ ಯುವ ಸೆಲ್ಫಿಗರ ತರಹೇವಾರಿ ಪೋಸ್ ಗಳು ತಣ್ಣಗೆ ದೂರದಲ್ಲಿ ನಿಂತು ನೋಡುವವರಿಗೆ ಮನರಂಜನೆಯೇ ಆಗಿತ್ತು.
ವಿವಿಧ ಜಾತಿಯ ಅರಳಿನಿಂತ ಹೂ ಗಿಡಗಳು, ತರಕಾರಿಗಳು, ಅಲಂಕಾರಿಕ ಗಿಡಗಳನ್ನು ಬೆಳೆಸಿ ಪ್ರದರ್ಶಿಸಿರುವುದು ಕುತೂಹಲ ಕಾರಿಯಾಗಿತ್ತು. ಅಡಿಕೆ ಮತ್ತು ಜೀರಿಗೆ ಮೆಣಸಿನಿಂದ ಮಾಡಿದ ವಿಶೇಷ ಐಸ್ಕ್ರೀಂ ಹೊಟ್ಟೆ ತಂಪಾಗಿರಿಸುವುದರ ಜತೆಗೆ ಮನವನ್ನೂ ತಂಪಾಗಿಸಿತು. ಬಣ್ಣ ಬಣ್ಣದ ಕಾರಂಜಿಗಳು ಫಲಪುಷ್ಪ ಪ್ರದರ್ಶನಕ್ಕೆ ವಿಶೇಷ ಮೆರಗು ನೀಡಿದ್ದವು. ಪ್ಲಾಸ್ಟಿಕ್ ಕುಂಡಗಳಿಗೆ ಪ್ರತಿಯಾಗಿ ಮೈದಳೆದ ತೆಂಗಿನ ನಾರಿನಿಂದ ಮಾಡಿದ ಹೂಕುಂಡಗಳು ನೋಡುಗರ ಮನಗೆದ್ದವು. ಉಳಿದಂತೆ ಅಲಂಕಾರಿಕ ವಸ್ತುಗಳು, ಕೃಷಿಸಂಬಂಧಿ ಪ್ರಾತ್ಯಕ್ಷಿಕೆಗಳ ಮಳಿಗೆಗಳು, ಮನೆಬಳಕೆಯ ವಸ್ತುಗಳು, ಹೂ ಹಣ್ಣಿನ ತರಹೇವಾರಿ ಗಿಡಗಳ ನರ್ಸರಿಗಳಿಗೆ ಜನ ಮುಗಿಬೀಳುತ್ತಿದ್ದರು.
ಮಂಗಳೂರಿಗರು ಹೂಹಣ್ಣು ಪ್ರದರ್ಶನದ ಅಂದ ಚೆಂದವನ್ನು ಕಣ್ಮನ ತುಂಬಿಕೊಂಡರೆ ಇದ್ಯಾವುದರ ಗೊಡವೆಯೇ ಇಲ್ಲದೆ ಎಲ್ಲಿಂದಲೋ ಬಂದ ಪುಟ್ಟ ಮಕ್ಕಳು ಹೊರಗೆ ಬಲೂನ್ ಮಾರುವುದರಲ್ಲಿ ತಲ್ಲೀನರಾಗಿದ್ದರು!
ಪೀಪಲ್ ಮೀಡಿಯಾ ಸೆರೆ ಹಿಡಿದ ಕೆಲ ಚಿತ್ರಗಳು ಇಲ್ಲಿವೆ.