Home ವಿಶೇಷ ಗಾಂಧಿ ಎಂಬ ಚುಂಬಕ ಶಕ್ತಿ

ಗಾಂಧಿ ಎಂಬ ಚುಂಬಕ ಶಕ್ತಿ

0

ವರ್ತಮಾನದ ಜಗತ್ತು ಅನುಭವಿಸುತ್ತಿರುವ ಆರ್ಥಿಕ ಹಿಂಜರಿತ, ನಿರುದ್ಯೋಗ, ಬಡತನ, ಭಯೋತ್ಪಾದನೆ, ಹಿಂಸೆ ಇವೆಲ್ಲಕ್ಕೂ ಗಾಂಧೀಜಿಯ ಚಿಂತನೆಗಳಲ್ಲಿ, ಸಿದ್ಧಾಂತಗಳಲ್ಲಿ ಪರಿಹಾರ ಇದೆ ಎಂಬುದನ್ನು ಆಧುನಿಕ ಜಗತ್ತು  ಈಗ ಮರೆತಿದೆ ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಎನ್.ಜಗದೀಶ್ ಕೊಪ್ಪ.

ಗಾಂಧೀಜಿ ನಮ್ಮನ್ನಗಲಿ ಮುಂದಿನ ವರ್ಷಕ್ಕೆ ಎಪ್ಪತ್ತೈದು ವರ್ಷವಾಗಲಿದೆ. ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಅನೇಕ ಪ್ರಜ್ಞಾವಂತರಲ್ಲಿ ಇಂದಿಗೂ ಕಾಡುತ್ತಿರುವ ವಿಶಿಷ್ಟ ವ್ಯಕ್ತಿತ್ವ ಅವರದು. ಇಪ್ಪತ್ತೊಂದನೆಯ ಶತಮಾನದ ಮಾಹಿತಿ ತಂತ್ರಜ್ಞಾನದ ಕ್ರಾಂತಿಯಿಂದಾಗಿ ನಮ್ಮ ಬದುಕಿನಲ್ಲಾದ ಬದಲಾವಣೆ, ಆಲೋಚನಾ ಕ್ರಮ ಹಾಗೂ ತಲೆಮಾರುಗಳ ದೃಷ್ಟಿಕೋನದಲ್ಲಿರುವ ಅಂತರ ಇವೆಲ್ಲವುಗಳ ನಡುವೆಯೂ ಗಾಂಧೀಜಿ ಇನ್ನೂ ಜೀವಂತವಾಗಿದ್ದಾರೆ. ಬೆಂಕಿಯಷ್ಟೇ ಮನುಷ್ಯನನ್ನು ಕೊಲ್ಲಬಲ್ಲದು ಎಂದು ನಂಬಿದ್ದ ಜಗತ್ತಿಗೆ, ತಣ್ಣಗಿನ ಮಂಜುಗೆಡ್ಡೆಯೂ ಮನುಷ್ಯನನ್ನು ಕೊಲ್ಲಬಲ್ಲದು ಎಂಬುದನ್ನು ತಮ್ಮ ಬದುಕಿನ ಮೂಲಕ ಮನುಕುಲಕ್ಕೆ  ತೋರಿಸಿಕೊಟ್ಟ ಅನನ್ಯ ವ್ಯಕ್ತಿತ್ವ ಅವರದು.

1948 ರ ಜನವರಿಯಲ್ಲಿ ಹಂತಕನ ಗುಂಡಿಗೆ ಬಲಿಯಾಗುವ ಮುನ್ನ `ಗಾಂಧಿವಾದ’ ಎಂಬುದು ತಲೆಯೆತ್ತಬಾರದು ಎಂದು ಗಾಂಧೀಜಿ ಅಪೇಕ್ಷಿಸಿದ್ದರು. `ಯಾವುದೇ ತತ್ವ-ಸಿದ್ಧಾಂತಗಳನ್ನು ನಾನು ಹುಟ್ಟುಹಾಕಿದೆನೆಂದು ಜಗತ್ತು ಹೇಳಬಾರದು. ಶಾಶ್ವತ ಸತ್ಯಗಳನ್ನು ನಮ್ಮ ದಿನ ನಿತ್ಯದ ಬದುಕು ಮತ್ತು ಸಮಸ್ಯೆಗಳಿಗೆ ನನ್ನದೇ ಆದ ರೀತಿಯಲ್ಲಿ ಅನ್ವಯಿಸಲು ನಾನು ಪ್ರಯತ್ನಿಸಿದೆ ಅಷ್ಟೆ’ ಇದು ಗಾಂಧಿಯವರ ನಿಲುವಾಗಿತ್ತು. ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದ ನೆಲ್ಸನ್ ಮಂಡೇಲಾ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಪತ್ರಕರ್ತನೊಬ್ಬ, ಗಾಂಧೀಜಿಯಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರಿಂದ ಕರಿಯರಿಗೆ ಬಿಡುಗಡೆ ಸಿಕ್ಕಿತು ಅಲ್ಲವೆ? ಎಂದಾಗ, ಮಂಡೇಲಾ ʼಹೌದು ನೀವು ಆಫ್ರಿಕಾಕ್ಕೆ ಮೋಹನದಾಸ ಕರಮಚಂದ ಗಾಂಧಿಯನ್ನು ಕಳಿಸಿಕೊಟ್ಟಿರಿ, ನಾವು ಅವರನ್ನು ಮಹಾತ್ಮ ಗಾಂಧೀಜಿಯನ್ನಾಗಿ ಕಳಿಸಿಕೊಟ್ಟೆವುʼ ಎಂದು ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿದ್ದರು.

 `ಶಕ್ತಿಯೇ ಸರ್ವಸ್ವ’ ಎಂದು ನಂಬಿರುವ ಆಧುನಿಕ ಜಗತ್ತಿಗೆ ಗಾಂಧೀಜಿಯ ತತ್ವ ಹಾಗು ಚಿಂತನೆಗಳನ್ನು ಅರಗಿಸಿಕೊಳ್ಳುವುದು ಕಷ್ಟ. ಸಮಾಜದಲ್ಲಿ ಎಲ್ಲರಿಗೂ ಸಮಾನತೆ, ಸಮೃದ್ಧಿ, ನ್ಯಾಯ ದೊರಕಿಸಿ ಕೊಡುವುದು ರಾಮರಾಜ್ಯದ ಕಲ್ಪನೆ. ವ್ಯಕ್ತಿಯೊಬ್ಬನ ಉನ್ನತಿಯ ಜೊತೆಗೆ ಸಮುದಾಯದ ಅಭಿವೃದ್ಧಿಗೆ ಜೀವನಾಂಶ ಒದಗಿಸಿ ಕೊಡುವುದು ಅಗತ್ಯ ಎಂದು ಗೌತಮ ಬುದ್ಧ ಪ್ರತಿಪಾದಿಸಿದ್ದನು. ದಾರ್ಶನಿಕ ಜಾನ್ ರಸ್ಕಿನ್ ಸರಳ ಬದುಕು ಅಗತ್ಯವೆಂದು ಒತ್ತಿಹೇಳುತ್ತಾ, ಮನುಷ್ಯನನ್ನು ದುರ್ಬಲಗೊಳಿಸುವ, ಸ್ವಾರ್ಥಿಯನ್ನಾಗಿ ರೂಪಿಸುತ್ತಿರುವ ಆಧುನಿಕ ಅರ್ಥವ್ಯವಸ್ಥೆಯನ್ನು ಟೀಕಿಸಿದ್ದನು. ಇವೆಲ್ಲವುಗಳಿಂದ ಗಾಂಧೀಜಿ ಪ್ರಭಾವಿತರಾಗಿದ್ದರು. ಈ ಕಾರಣಕ್ಕಾಗಿ ಶತಮಾನದ ಹಿಂದೆ (1908) ಅವರು ಹಿಂದ್ ಸ್ವರಾಜ್ ಕೃತಿ ಬರೆಯುವ ಮುನ್ನವೇ ಆಧುನಿಕ ಬದುಕಿನ ಎಲ್ಲಾ ಆಡಂಬರಕ್ಕೆ ಬೆನ್ನು ತಿರುಗಿಸಿ, ಪೂರ್ಣತೆಯ ಬದುಕಿನ ಹಾದಿಯ ಅನ್ವೇಷಣೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಬ್ರಿಟೀಷರ ಗುಲಾಮಗಿರಿಯಲ್ಲಿ ಸಿಲುಕಿ ನರಳುತ್ತಿರುವ ಭಾರತಕ್ಕೆ ಹಿಂಸೆ ಮಂತ್ರದಂಡವಲ್ಲ, ಅದಕ್ಕೆ ಪರ್ಯಾಯವಾಗಿ ಭಾರತೀಯ ಸಂಸ್ಕತಿಯ ಹಿನ್ನೆಲೆಯಲ್ಲಿ ಶ್ರೇಷ್ಠವಾದ ಅಸ್ತ್ರವೊಂದು ಭಾರತಕ್ಕೆ ಬೇಕಾಗಿದೆ ಎಂದು ನಂಬಿದ್ದ ಗಾಂಧಿ, ಅಣುಬಾಂಬ್‍ಗಿಂತ ಪ್ರಬಲವಾದ `ಅಹಿಂಸೆ’ ಎಂಬ ಅಸ್ತ್ರವನ್ನು ಈ ಜಗತ್ತಿಗೆ ನೀಡಿದರು.

ಇಂಗ್ಲೆಂಡಿನ ಪ್ರಸಿದ್ಧ ಅರ್ಥಶಾಸ್ತ್ರಜ್ಞ `ಶೊಮಾಕರ್ ‘ ನನ್ನ ಆರ್ಥಿಕ  ಸಿದ್ಧಾಂತಗಳಲ್ಲಿ ಗಾಂಧೀಜಿಯವರ ಅಹಿಂಸಾ ತತ್ವಗಳನ್ನು ಕಾಣಬಹುದಾಗಿದೆ ಎಂದು ಹೇಳುವುದರ ಮೂಲಕ ಗಾಂಧೀಜಿಯವರ ತತ್ವಗಳನ್ನು ಪಾಶ್ಚಾತ್ಯ ಬುದ್ಧಿಜೀವಿಗಳಿಗೆ ಅರ್ಥೈಸಲು ಪ್ರಯತ್ನಿಸಿದನು. ಅಷ್ಟೇ ಅಲ್ಲದೆ `ಸಣ್ಣದು ಸುಂದರ’ (ಸ್ಮಾಲ್ ಈಸ್ ಬ್ಯೂಟಿಫುಲ್) ಎಂಬ ಅರ್ಥಶಾಸ್ತ್ರದ ಕೃತಿಯನ್ನು  ರಚಿಸಿ ಜಗತ್ತನ್ನು ತಲ್ಲಣಗೊಳಿಸಿದನು. ಶೊಮಾಕರ್ ಗಾಂಧೀಜಿಯವರಿಂದ ಪ್ರಭಾವಿತನಾಗುವಷ್ಟು ಅವರ ತತ್ವ-ಸಿದ್ಧಾಂತಗಳು ಪರಿಣಾಮಕಾರಿಯಾಗಿದ್ದವು. ಅವುಗಳನ್ನು ಅರ್ಥಮಾಡಿಕೊಂಡವರಲ್ಲಿ ಶೊಮಾಕರ್ ಮತ್ತು  ಜೆ.ಸಿ.ಕುಮಾರಪ್ಪ ಪ್ರಮುಖರು.

  ಗಾಂಧೀಜಿಯ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಲ್ಲಿ ಜನತಾಂತ್ರಿಕ ರಾಜಕೀಯ ಆಶಯಗಳು ಮತ್ತು ಮಾರುಕಟ್ಟೆ ಆರ್ಥಿಕತೆಯ ಆಶಯಗಳು ಪರಸ್ಪರ ವಿರುದ್ಧ ದಿಕ್ಕಿನ ಭಿನ್ನ ನೆಲೆಗಳಲ್ಲಿ ಚಲಿಸುತ್ತವೆ. ತಮ್ಮ ಏಳಿಗೆಗೆ ಅವಶ್ಯಕವಾದ ನಿರ್ಧಾರಗಳನ್ನು ಜನರೇ ತೆಗೆದುಕೊಳ್ಳುತ್ತಾರೆ. ಇದು ಜನತಾಂತ್ರಿಕ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ. ಇಂತಹ ಸಾಮೂಹಿಕ ನಿರ್ಧಾರ ತಳಮಟ್ಟದ ಸಮುದಾಯಗಳದ್ದು, ಈ ಪ್ರತಿಕ್ರಿಯೆ ಶಕ್ತಿಶಾಲಿಯಾಗಿರುತ್ತದೆ. ಮಾರುಕಟ್ಟೆ ಆಶಯ ಇದಕ್ಕೆ ತದ್ವಿರುದ್ಧವಾದುದು. ಜನತೆ ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳುವ ಸಾಧ್ಯತೆ ಬಗ್ಗೆ ಚಿಂತಿಸುವುದಾದರೆ, ಮಾರುಕಟ್ಟೆ ವ್ಯವಸ್ಥೆ ಸ್ಥಳೀಯ ನೆಲೆಗಳಿಗೆ ವಿಕೇಂದ್ರೀಕರಣಗೊಳ್ಳುವುದು ಅನಿವಾರ್ಯವಾಗುತ್ತದೆ. ಇಂತಹ ಸ್ಥಳೀಯ ನೆಲೆಗಳು ಜೀವಂತವಿರುವುದು ದೇಶೀ ಸಂಸ್ಕೃತಿಯಲ್ಲಿ ಮಾತ್ರ. ಗ್ರಾಮ ಸಂಸ್ಕತಿಯು ನಮ್ಮ ಪೂರ್ವಿಕರ ದರ್ಶನದಲ್ಲಿ ಅಡಕವಾಗಿರುವ ಮಾನವೀಯ ಮುಖವುಳ್ಳದ್ದಾಗಿದ್ದು ಅದು ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿದೆ.

ಶೈಕ್ಷಣಿಕ ಅಥವಾ ಅರ್ಹತೆಯ ಹಂಗಿಲ್ಲದ ಜನಪದರ ಪ್ರಾದೇಶಿಕ ತಿಳುವಳಿಕೆಯ ರೂಪವಾದ ದೇಶೀಯ ಪಾರಂಪರಿಕ ವಿಜ್ಞಾನ-ತಂತ್ರಜ್ಞಾನಗಳು ನಮ್ಮ ಪಾಲಿಗೆ ಲೋಕದರ್ಶನಗಳಾಗಿವೆ. ಈ ಸತ್ಯವನ್ನು ಗಾಂಧೀಜಿಯವರು ಮನಗಂಡಿದ್ದರು. ನಮ್ಮ ಪೂರ್ವಿಕರ ಈ ಜ್ಞಾನ ಶಾಖೆಗಳ ವೈಶಿಷ್ಟ್ಯವೆಂದರೆ, ಇವುಗಳು ಸ್ಥಳೀಯ ಸಂದರ್ಭ-ಅಗತ್ಯಗಳಿಗೆ ತಕ್ಕಂತೆ ರೂಪಾಂತರಗೊಳ್ಳುವ ಶಕ್ತಿ ಪಡೆದಿವೆ. ಇಂತಹ ಲೋಕವಿದ್ಯೆ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿ, ಕ್ರಿಯಾರೂಪದಲ್ಲಿ ಪ್ರಕಟಗೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಎಂಬುದು ಗಾಂಧೀಜಿಯವರ ಅಚಲ ನಂಬಿಕೆಯಾಗಿತ್ತು.  ವರ್ತಮಾನದ ಜಗತ್ತು ಅನುಭವಿಸುತ್ತಿರುವ ಆರ್ಥಿಕ ಹಿಂಜರಿತ, ನಿರುದ್ಯೋಗ, ಬಡತನ, ಭಯೋತ್ಪಾದನೆ, ಹಿಂಸೆ ಇವೆಲ್ಲಕ್ಕೂ ಗಾಂಧೀಜಿಯ ಚಿಂತನೆಗಳಲ್ಲಿ, ಸಿದ್ಧಾಂತಗಳಲ್ಲಿ ಪರಿಹಾರ ಇದೆ ಎಂಬುದನ್ನು ಆಧುನಿಕ ಜಗತ್ತು  ಈಗ ಮರೆತಿದೆ.

 ಗಾಂಧಿಯವರಿಂದ ಪ್ರಭಾವಿತರಾದ ಜೆ.ಸಿ.ಕುಮಾರಪ್ಪ ರಚಿಸಿದ ಶಾಶ್ವತ ಅರ್ಥಶಾಸ್ತ್ರ ಎಂಬ ಕೃತಿ ಈ ಕ್ಷಣದ ಎಲ್ಲಾ ಸವಾಲುಗಳಿಗೆ ಪರಿಹಾರವಾಗಬಲ್ಲದು. ತಮಿಳುನಾಡು ಮೂಲದ ಸಿ.ಕುಮಾರಪ್ಪ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪದವಿ ಪಡೆದು ಆಧುನಿಕ ಅರ್ಥಶಾಸ್ತ್ರಜ್ಞರಾಗಿ ರೂಪುಗೊಂಡಿದ್ದರು. ಗಾಂಧೀಜಿಯವರಂತೆ ಅವರಿಗೆ ಹೊಸದಾಗಿ ಹೇಳಲು ಏನೂ ಇರಲಿಲ್ಲ. ನಿಸರ್ಗದಲ್ಲಿ ಜೀವ ಜಂತುಗಳು ಹೇಗೆ ಪರಸ್ಪರ ಪರಾವಲಂಬಿಗಳಾಗಿ ಬದುಕುತ್ತವೆ ಎಂಬುದನ್ನು ಗಮನಿಸಿದರು. ಇದರಿಂದ ಮನುಷ್ಯ ಕಲಿಯಬಹುದಾದ ಪಾಠವನ್ನು ಗ್ರಹಿಸಿದರು. ಪ್ರಕೃತಿ ತನ್ನ ಎಲ್ಲಾ ಘಟಕಗಳ ಸಹಕಾರ ಬಯಸುತ್ತದೆ. ಪ್ರತಿಯೊಂದು ತನ್ನಷ್ಟಕ್ಕೆ ತಾನು ಕೆಲಸ ಮಾಡುತ್ತಾ, ಈ ಪ್ರಕ್ರಿಯೆಯಲ್ಲಿ ಸಮಾಜದ ಬೇರೆ ಬೇರೆ ಘಟಕಗಳು ಅದರದರ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಓಡಾಡಬಲ್ಲವರು ಓಡಾಡದವರಿಗೆ, ಬುದ್ಧಿ ಇರುವವರು ಬುದ್ಧಿ ಇಲ್ಲದವರಿಗೆ ನೆರವು ನೀಡುವಂತೆ, ನಿಸರ್ಗದಲ್ಲಿ ಪ್ರತಿಯೊಂದೂ ಸಾಮಾನ್ಯ ಉದ್ದೇಶಕ್ಕಾಗಿ ಒಂದನ್ನೊಂದು ಹೊಂದಿಕೊಂಡಿರುತ್ತವೆ. ಹಿಂಸೆ ಎಂಬುದು ಈ ಸರಪಳಿಯನ್ನು ಒಡೆಯದೆ, ಇವೆಲ್ಲವೂ ಸುಸೂತ್ರವಾಗಿ ನಡೆದಲ್ಲಿ ಶಾಶ್ವತ ಅರ್ಥಶಾಸ್ತ್ರ ಜನ್ಮ ತಾಳುತ್ತದೆ. ಕುಮಾರಪ್ಪನವರು ಶಾಶ್ವತ ಅರ್ಥಶಾಸ್ತ್ರದೊಂದಿಗೆ ನಶ್ವರ ಅರ್ಥಶಾಸ್ತ್ರವನ್ನು ಹೋಲಿಸಿದರು. ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ, ಕೀಟ ನಾಶಕ ಬಳಸಿ ಆ ಮೂಲಕ ಅಲ್ಪ ಕಾಲದವರೆಗೆ ಅತಿಹೆಚ್ಚು ಇಳುವರಿ ಪಡೆಯುವ ನಾಟಕೀಯ ದೃಶ್ಯವಾಗಿ ನಶ್ವರ ಅರ್ಥಶಾಸ್ತ್ರ ಗೋಚರಿಸುತ್ತದೆ. ಇದರ ಪರಿಣಾಮವಾಗಿ ಭೂಮಿ ನಾಶವಾಗುತ್ತದೆಂದು, ಆಹಾರದಲ್ಲಿ ಸ್ವಾವಲಂಬಿಯಾಗುವ ಬದಲು ವಾಣಿಜ್ಯ ಬೆಳೆಗಳಿಗೆ ಆದ್ಯತೆ ನೀಡಿದಲ್ಲಿ ಮುಂದಾಗುವ ಅಪಾಯದ ಬಗ್ಗೆ ಅವರು ಎಚ್ಚರಿಸಿದ್ದರು.

 ಪೂರ್ಣವಾಗಿ ಹಣ ಅಥವಾ ಲೌಕಿಕ ವಸ್ತುಗಳ ಮೌಲ್ಯದ ಆಧಾರದ ಮೇಲೆ ಕಟ್ಟಿದ ಅರ್ಥಶಾಸ್ತ್ರ ಸಮಯ ಮತ್ತು ಸ್ಥಳೀಯ ವಾಸ್ತವಿಕ ಹಿನ್ನೆಲೆಯನ್ನು ಪಡೆದುಕೊಳ್ಳುವುದಿಲ್ಲ. ಇದರಿಂದ ಹಿಂಸೆ ಮತ್ತು ನಾಶ ಆರಂಭವಾಗಿ ಈ ಜಗತ್ತಿಗೆ  ಈ ಸಂಕಷ್ಟದಿಂದ ಪಾರಾಗಲು ಯಾವ ಮಾರ್ಗವೂ ಇರಲಾರದು’. ಇದು ಕುಮಾರಪ್ಪ ಹಾಗು ಗಾಂಧೀಜಿಯವರ ಅಚಲ ನಂಬಿಕೆಯಾಗಿತ್ತು. ಆಧುನಿಕ ಜಗತ್ತು ಹಿಂಸೆಗೆ ದೂಡಲ್ಪಟ್ಟಿರುವ ಈ ಸಂದರ್ಭದಲ್ಲಿ, ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದಲ್ಲಿ ಗಾಂಧೀಜಿ ಮತ್ತವರ ಚಿಂತನೆಗಳು ನಿರ್ಲಕ್ಷ್ಯಕ್ಕೊಳಗಾದ ಪರಿಣಾಮದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಸರಳತೆ-ಸಮಾನತೆ- ಸ್ವಾವಲಂಬನೆ ಮುಂತಾದ ಗಾಂಧೀಜಿಯವರ ಪರಿಕಲ್ಪನೆಗಳು ಸನ್ಯಾಸತ್ವದ ಲಕ್ಷಣಗಳಲ್ಲ ಎಂಬುದನ್ನು ಆಧುನಿಕ ಜಗತ್ತು ಅರಿಯಬೇಕಿದೆ. ಈ ಅರಿವು ನಮ್ಮನ್ನು ಆವರಿಸಿಕೊಂಡಾಗ ಮಾತ್ರ ಮಹಾತ್ಮ ಗಾಂಧೀಜಿ ನಮಗೆ ಅರ್ಥವಾಗಲು ಸಾಧ್ಯ.

ಎನ್. ಜಗದೀಶ್‌ ಕೊಪ್ಪ, ಮೈಸೂರು
ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತು, ಪರಿಸರ ಮತ್ತು ಜಾಗತಿಕ ಬಡತನದ ಕುರಿತು ವಿಶೇಷ ಆಸಕ್ತಿ.

You cannot copy content of this page

Exit mobile version