Friday, June 21, 2024

ಸತ್ಯ | ನ್ಯಾಯ |ಧರ್ಮ

ವಾಟ್ಸಾಪ್ ಯೂನಿವರ್ಸಿಟಿಯ ಗಾಂಧಿ ನಮ್ಮ ಗಾಂಧಿಯಲ್ಲ!!

ಈ ನೆಲ ಕಂಡ ಅದ್ವಿತೀಯ ಚೇತನಗಳಲ್ಲಿ ಒಂದಾಗಿರುವ ಗಾಂಧೀಜಿಯನ್ನು ಧಿಕ್ಕರಿಸಿ ಮಾತಾಡುವ, ಗಾಂಧಿ ತತ್ತ್ವಗಳನ್ನು ಹಳೆಯ ಕಾಲದ ಥಿಯರಿ ಎಂದು ಹೀಯಾಳಿಸುವ, ಗಾಂಧಿಯಿಂದಲೇ ದೇಶ ಹಾಳಾಯಿತೆಂದು ಭಾವಿಸುವ ಯುವ ಜನತೆ ಹೆಚ್ಚುತ್ತಿರುವಾಗ ʼವಾಟ್ಸಾಪ್‌ ಯೂನಿವರ್ಸಿಟಿʼ ಸೃಷ್ಟಿಸಿದ ಗಾಂಧಿ ನಮ್ಮ ಗಾಂಧಿಯಲ್ಲ ಎಂದು ಗಟ್ಟಿದನಿಯಲ್ಲಿ ಹೇಳುತ್ತಾರೆ ಸಂತೇಶಿವರದ ಯುವಕ ವಿನಯ್ ಎಸ್ ಕಾಂತ.

ಜಗತ್ತಿಗೆ ಶಾಂತಿ, ಸತ್ಯ, ಅಹಿಂಸೆ, ಸರ್ವೋದಯ ಸಾರಿ ಜಗತ್ತಿನ ಹಲವು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾದರಿಯಾದ ಗಾಂಧಿ ಒಬ್ಬ ಮತಾಂಧನ ಕೈಯಿಂದ ಹತ್ಯೆಯಾಗಿ 75 ವರ್ಷ. ಇಂದಿಗೂ ಗಾಂಧಿ ಬೇರೆ ದೇಶಕ್ಕೆ ಅರ್ಥವಾದಷ್ಟು ಭಾರತಕ್ಕೆ ಅರ್ಥ ಆಗಿಲ್ಲ. ವಾಟ್ಸಾಪ್‌, ಫೇಸ್ಬುಕ್, ಯುಟ್ಯೂಬ್ ಮುಂತಾದ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಭಾರತೀಯರಿಗೆ ಗಾಂಧಿ ಹಿಂದೂ ವಿರೋಧಿ, ಮುಸ್ಲಿಂ ಪ್ರೇಮಿ, ದೇಶ ವಿಭಜಕ, ಆಂದೋಲನ ಜೀವಿ, ಮಜಾವಾದಿ. ಗಾಂಧೀಜಿಯವರ ರಾಜಕೀಯ ವಿರೋಧಿಯಾಗಿದ್ದ ಬ್ರಿಟಿಷರು ಗಾಂಧಿಯನ್ನುಇಷ್ಟೊಂದು ಕೆಳಮಟ್ಟದಲ್ಲಿ ಟೀಕಿಸಿರಲಾರರು. ಇಂದು ಇಂಗ್ಲೆಂಡ್ ದೇಶದಲ್ಲಿ ಇವರ ಹಲವಾರು ಪ್ರತಿಮೆಗಳಿವೆ. ಆದರೆ ನಮ್ಮಲ್ಲಿ ಇಲ್ಲಸಲ್ಲದ ಫೋಟೋಶಾಪ್ ಗಳು, ಕಥೆಗಳು, ಆಧಾರವೇ ಇಲ್ಲದ ಇತಿಹಾಸ ಕಟ್ಟಿ ಗಾಂಧಿಯನ್ನು ತೆಗಳುತ್ತಿದ್ದೇವೆ. ಗಾಂಧಿಯ ಪ್ರತಿಮೆಗಳನ್ನು ವಿರೂಪ ಗೊಳಿಸುತ್ತಿದ್ದೇವೆ. ಹೀಗೆಲ್ಲ ವಿಕಾರವಾಗಿ ವರ್ತಿಸುವ ನಾವು ಗಾಂಧೀಜೀಯವರ ನಿಜ ವಿಚಾರಗಳನ್ನು ಓದಿದ್ದೇವೆಯೇ? ಇಲ್ಲ. ಗಾಂಧೀಜಿ ಮಾತ್ರವಲ್ಲ ಅಂಬೇಡ್ಕರ್, ಭಗತ್ ಸಿಂಗ್, ವಿವೇಕಾನಂದ, ಪರಮಹಂಸರು, ಸುಭಾಷ್ ಚಂದ್ರ ಬೋಸ್, ನೆಹರು  ಮುಂತಾದವರ ಬರಹಗಳನ್ನು ಓದಿದ್ದೇವೆಯೇ? ಇಲ್ಲ. ಆದರೆ ಯಾರೋ ಪುಂಖಾನು ಪುಂಖವಾಗಿ ಪುಂಗುವ ಪುಂಗಿದಾಸರ ಮಾತುಗಳನ್ನು ಕೇಳಿ, ವಾಟ್ಸಾಪ್‌ ಗಳಲ್ಲಿ ಹರಿದು ಬರುವ ಸುದ್ದಿಗಳನ್ನೇ  ಗ್ರಹಿಕೆಗೆ ತೆಗೆದುಕೊಂಡು, ಸುಳ್ಳುಗಳನ್ನು ಸತ್ಯವೆಂದು ನಂಬಿ, ನಮ್ಮತನವನ್ನೆ ಕಳೆದುಕೊಂಡು ಬೇರೆಯವರ ದ್ವೇಷದ ಅಜೆಂಡಾದ ಭಾಗವಾಗುತ್ತಿದ್ದೇವೆ. ಇತಿಹಾಸದಲ್ಲಿ ತಪ್ಪು ಹುಡುಕಿ ಅದನ್ನು ಮತ್ತೆ ಬರೆಯಬೇಕು ಎಂಬುದು  ಇಂದಿನ ನಮ್ಮ ಫ್ಯಾಷನ್ ಆಗಿದೆ!

ಗಾಂಧಿ ಹೀಗಿದ್ದರು …

ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿಯನ್ನು ಮುಗಿಸಿ ಹಿಂದಿರುಗಿ ಬರುವಾಗ ಅಲ್ಲಿದ್ದ ಭಾರತೀಯರು ಅವರನ್ನು ಸನ್ಮಾನಿಸಿ ಹಲವಾರು ಉಡುಗೊರೆಗಳನ್ನು ನೀಡಿದ್ದರು. ಅದರಲ್ಲಿ ಒಂದು ಬೆಲೆ ಬಾಳುವ ಚಿನ್ನದ ನೆಕ್ ಲೆಸ್ ಇದ್ದು ಅದು ಕಸ್ತೂರ್ ಬಾ ಅವರಿಗೆ ಬಹಳ ಇಷ್ಟವಾಗಿದ್ದರೂ ಆ ಬೆಲೆ ಬಾಳುವ ಉಡುಗೊರೆಯನ್ನು ಹಿಂದಿರುಗಿಸಿದವರು ಗಾಂಧೀಜಿ. ಇಂತಹ ನಡೆವಳಿಕೆಯನ್ನು ಇಂದಿನ ಪೀಳಿಗೆಯ ಯಾವ ನಾಯಕರಲ್ಲಿ, ಅಧಿಕಾರಿಗಳಲ್ಲಿ ನಿರೀಕ್ಷಿಸಬಹುದು?

ಗಾಂಧೀಜಿಯ ಅಹಿಂಸೆ

ಅಹಿಂಸೆ ಗಾಂಧೀಜಿಯವರ ಮೂಲ ತತ್ತ್ವಗಳಲ್ಲಿ ಒಂದು. ಇಂದು ವಾಟ್ಸಾಪ್ ಯೂನಿವರ್ಸಿಟಿಯ ಪ್ರಕಾರ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸೋದು ಅಹಿಂಸೆ. ಆದರೆ ಗಾಂಧೀಜಿಯವರ ನಿಜ ಅಹಿಂಸೆ ಅಂದರೆ ಯುದ್ಧಕ್ಕೆ ವಿರೋಧ.

ಇನ್ನು ಅಹಿಂಸೆಯಿಂದ, ಉಪವಾಸದಿಂದ ಸ್ವಾತಂತ್ರ್ಯ ಬರಲಿಲ್ಲ ಎನ್ನುತ್ತಾರೆ. ಆದರೆ ದೇಶದ ಎಲ್ಲಾ ವರ್ಗದ ಜನರನ್ನು ಸ್ವಾತಂತ್ರ್ಯ ಚಳುವಳಿಗೆ ಧುಮುಕುವಂತೆ ಮಾಡಿದ್ದು ಅಂದಿನ ಮಾಸ್ ಲೀಡರ್ ಗಾಂಧೀಜಿ.ಸ್ವಾತಂತ್ರ್ಯ ಚಳುವಳಿಯಲ್ಲಿ  ಭಾಗವಹಿಸದೇ  ಇಂದು ಅದರ ಬಗ್ಗೆಪುಂಖಾನು ಪುಂಖವಾಗಿ ಮಾತನಾಡುವುದೇ ವಿಪರ್ಯಾಸ.

ಗಾಂಧಿಜೀಯವರ ಮೇಲೆ ಬರುವ ಮತ್ತೊಂದು ಮುಖ್ಯ ಆರೋಪ ಅವರು ಹಿಂದೂ ವಿರೋಧಿ, ಪಾಕಿಸ್ತಾನದ ಪರ ಎನ್ನುವುದು. ಗಾಂಧಿ ತನ್ನ ಜೀವನ ಪೂರ್ತಿ ಅನುಸರಿಸಿದ್ದು ಹಿಂದೂ ಧರ್ಮದ ಜೀವನ ದರ್ಶನ, ಭಗವದ್ಗೀತೆ, ಉಪನಿಷತ್,‌ ಸತ್ಯ ಹರಿಶ್ಚಂದ್ರ, ಪಿತೃವಾಕ್ಯ ಪರಿಪಾಲಕ ಶ್ರೀರಾಮ. ಹೀಗಿರುವಾಗ ಗಾಂಧಿ ಒಬ್ಬ ನಿಜವಾದ ಅರ್ಥದಲ್ಲಿ ಹಿಂದೂ ಆಗಿದ್ದರು. ಅಸ್ಪೃಶ್ಯತೆಯ ವಿರೋಧಿ, ಗೋಹತ್ಯೆ ನಿಷೇಧದ ಪರ ಇದ್ದವರು. ಅವರೊಬ್ಬ ಆಧ್ಯಾತ್ಮಿಕ ಹಿಂದೂ ಆಗಿದ್ದರು. ರಾಜಕೀಯ ಲಾಭಕ್ಕಾಗಿ ಮತಾಂಧತೆಯನ್ನು ಹರಡುವ ಹಿಂದೂ ಆಗಿರಲಿಲ್ಲ. ಅವರಿಗೆ ಹಿಂದೂ ಮುಸ್ಲಿಂ ಏಕತೆ ಎಲ್ಲಕ್ಕಿಂತ ಮುಖ್ಯವಾಗಿತ್ತು. ಸ್ವಾತಂತ್ರ್ಯ ಚಳುವಳಿಯಲ್ಲಿ ಎಲ್ಲಾ ಕಡೆ ಈ ವಿಚಾರವನ್ನು ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಬಂದಾಗ ಗಾಂಧಿ ಆ ಸಂಭ್ರಮಾಚರಣೆಯಲ್ಲಿರಲಿಲ್ಲ . ಬದಲಿಗೆ ಹಿಂದೂ ಮುಸ್ಲಿಂ ಗಲಭೆ ಆರಿಸಲು ಕೊಲ್ಕತ್ತಾದಲ್ಲಿದ್ದರು!

ಗಾಂಧಿಜಿ ಮತ್ತು ಸುಭಾಷ್ ಚಂದ್ರ ಬೋಸ್

ಗಾಂಧಿಜೀ ಮತ್ತು ಸುಭಾಷ್ ಚಂದ್ರ ಬೋಸ್ ನಡುವೆ ಇಂದು ಕಂದಕವನ್ನೆ ವಾಟ್ಸಾಪ್‌ ಯೂನಿವರ್ಸಿಟಿ ಸೃಷ್ಟಿಸಿದೆ. ಗಾಂಧೀಜಿ ಮತ್ತು ನೇತಾಜಿ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದದ್ದು ನಿಜ. ಬೋಸ್ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಫಾರ್ವರ್ಡ್ ಬ್ಲಾಕ್ ಪಕ್ಷವನ್ನು ಸ್ಥಾಪಿಸಿದ್ದು ಈಗ ಇತಿಹಾಸ. ಆದರೆ ಅದೇ ಸುಭಾಷ್ ಚಂದ್ರ ಬೋಸ್ ರವರು ತಮ್ಮ ಭಾರತೀಯ ಸೇನೆಯ ರಿಜಿಮೆಂಟ್ ಗಳಿಗೆ ಗಾಂಧಿ, ನೆಹರು, ಆಜಾದ್ ಮತ್ತು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹೆಸರನ್ನಿಟ್ಟಿದ್ದರು! ಗಾಂಧೀಜೀಯವರನ್ನು ರಾಷ್ಟ್ರಪಿತ ಎಂದು ತಮ್ಮ ರೇಡಿಯೋ ಅವತರಣಿಕೆಯಲ್ಲಿ ಕರೆದಿದ್ದು ನೇತಾಜಿ. ನೇತಾಜಿಯವರನ್ನು ʼಸ್ವಾತಂತ್ರ್ಯ ಸೇನಾನಿಗಳ ರಾಜಕುಮಾರʼ ಎಂದು ಕರೆದದ್ದು ಇತಿಹಾಸ. 

ಇತ್ತೀಚೆಗೆ ನೇತಾಜಿ ಮಗಳು ಅನಿತಾ ಬೋಸ್ ಅವರು ನಮ್ಮ ತಂದೆಗೆ ಗಾಂಧಿ ಪ್ರೇರಣೆಯಾಗಿದ್ದರು,  ನೆಹರೂ ಮತ್ತು ನಮ್ಮ ತಂದೆ ಉತ್ತಮ ಸ್ನೇಹಿತರು ಮತ್ತು ಜಾತ್ಯತೀತ ಎಡಪಂಥೀಯ ನಾಯಕರಾಗಿದ್ದರು ಎಂದಿದ್ದನ್ನು ನೆನಪಿಸಿಕೊಳ್ಳಬಹುದು.

ಇಂದು  ಗಾಂಧೀ ನೆನಪು ಹೀಗೆ…

ನಿರ್ಮಲ ಭಾರತ ಗಾಂಧಿಯ ಕನ್ನಡಕದೊಂದಿಗೆ ಸ್ವಚ್ಛ ಭಾರತವಾಗಿ ಬದಲಾಯಿತು. ಆದರೆ ಮತಾಂಧತೆ, ಜಾತೀಯತೆ, ಸುಳ್ಳು ಹಬ್ಬಿಸುವ ಮೆದುಳುಗಳು ಇನ್ನೂ ಸ್ವಚ್ಛವಾಗುವ ಮನಸ್ಸು ಮಾಡಲಿಲ್ಲ. 2013ರ ಕಂಪನಿ ಕಾಯ್ದೆಯ ಮೂಲಕ ಗಾಂಧಿಯ ಸಮಾಜವಾದ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಆಯಿತು. ಇದರಿಂದಾಗಿ ಶ್ರೀಮಂತರು ಬಡವರಿಗೆ ಒಂದಿಷ್ಟು ಲಾಭಾಂಶ ನೀಡಿ ಪೋಟೋ ತೆಗೆದುಕೊಂಡು ಪ್ರಚಾರ ಪಡೆಯುವಂತಾಯಿತು. ಹಳ್ಳಿಗಳು ಇಂದಿಗೂ ಅಭಿವೃದ್ಧಿ ಕಾಣದಾಗಿವೆ. ಆದರೆ ಅದೇ ಹಳ್ಳಿಗಳಲ್ಲಿ ಮಹಾತ್ಮ ಗಾಂಧಿ ಹೆಸರಲ್ಲಿ ಉದ್ಯೋಗ ಖಾತ್ರಿ ಯೋಜನೆ ನಡೆಯುತ್ತಿದೆ! ಪಕ್ಷಗಳಿಲ್ಲದ ಪ್ರಜಾಪ್ರಭುತ್ವದ ಕನಸು ಕಂಡಿದ್ದವರಿಗೆ ಇಂದಿನ  ಪಕ್ಷಾಂತರ, ಆಪರೇಷನ್ ಗಳು! ಖಾದಿ ಬಳಸುವವರು ಇಲ್ಲದೆ ಗ್ರಾಮ ಪಂಚಾಯಿತಿಗಳು, ಗುಡಿ ಮತ್ತು ಸಣ್ಣ ಕೈಗಾರಿಕೆಗಳು ಸರ್ಕಾರದ ಬೆಂಬಲ ಇಲ್ಲದೆ ಕುಂಟುತ್ತಿವೆ. ಗಾಂಧಿಯ ಗ್ರಾಮ ಸ್ವರಾಜ್ ಸ್ವದೇಶೀ ಆತ್ಮ ನಿರ್ಭರವಾಗಿ ಪ್ರಚಾರ ಪಡೆಯಿತು. ಆದರೆ ಯಶಸ್ಸು ಕಾಣಲು ಒದ್ದಾಡುತ್ತಿದೆ.ಇಂದಿನ ಜಾಗತಿಕ ಸಮಸ್ಯೆಯಾದ ಹವಾಮಾನ ಬದಲಾವಣೆಗೆ ಗಾಂಧೀಜಿಯವರ ಜೀವನ ವಿಧಾನದ ಸುಸ್ಥಿರಾಭಿವೃದ್ಧಿಯೇ ಉತ್ತರವಾಗಿದೆ.

 ತಮ್ಮ ಜೀವನದಲ್ಲಿ ಯಾವುದೇ ಅಧಿಕಾರ ಅನುಭವಿಸದೇ  ತನ್ನ ಅರ್ಧ ಜೀವನವನ್ನು ಅರೆಬೆತ್ತಲೆ ಫಕೀರನಾಗಿ ಕಳೆದ ಮಹಾತ್ಮ  ವಿಶ್ವಕ್ಕೆ ತನ್ನ ಅಹಿಂಸೆ,  ಸತ್ಯಾಗ್ರಹ ಚಳವಳಿಯ ಮಾರ್ಗ ತೋರಿದರು. ಇಂದಿಗೂ ಯಾವುದೇ ಜಾತಿ, ಸಂಘಟನೆಗಳು, ಪಕ್ಷಗಳು ಕ್ಲೇಮ್ ಮಾಡದ ವಾದ ಗಾಂಧಿವಾದವಾಗಿದೆ. ವಿಶ್ವ ಸಂಸ್ಥೆಯಿಂದ  ಗಾಂಧಿಯವರ ಜನ್ಮದಿನಾಚರಣೆಯನ್ನು ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ. ಯಾರು ಏನೇ ಹೇಳಲಿ ಗಾಂಧೀಜಿ ನಿಜವಾಗಿ  ಮಹಾತ್ಮ.ಇಂದು ಇಡೀ ವಿಶ್ವ ಭಾರತವನ್ನು ಗುರುತಿಸಿರುವುದು ಗಾಂಧಿ, ಅಂಬೇಡ್ಕರ್, ವಿವೇಕಾನಂದ, ನೆಹರೂರಂತಹ ಚೇತನಗಳಿಂದಲೇ ಹೊರತು ವಾಟ್ಸಾಪ್‌  ಯೂನಿವರ್ಸಿಟಿಯ ವೀರರಿಂದಲ್ಲ.

ವಿನಯ್ ಎಸ್ ಕಾಂತ

ಸಂತೇಶಿವರ

Related Articles

ಇತ್ತೀಚಿನ ಸುದ್ದಿಗಳು