Friday, April 26, 2024

ಸತ್ಯ | ನ್ಯಾಯ |ಧರ್ಮ

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು ಅಥವಾ ಯಾವುದೇ ರಾಜ್ಯ ಸರ್ಕಾರ/ಗಳು ರೂಪಿಸಿದ ಕಾನೂನಿನ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ‌ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ಸಲ್ಲಿಸಿದ ಅಫಿಡೆವಿಟ್ ನಲ್ಲಿ ಹೇಳಿದೆ. ಕೇಂದ್ರ ಸರ್ಕಾರಕ್ಕಾಗಲಿ, ರಾಜ್ಯ ಸರ್ಕಾರಗಳಿಗಾಗಲಿ ಪಿಎಂ ಕೇರ್ಸ್ ಟ್ರಸ್ಟ್ ಕಾರ್ಯನಿರ್ವಹಣೆ ವಿಷಯದಲ್ಲಿ ಯಾವುದೇ ರೂಪದ ನೇರ ಅಥವಾ ಪರೋಕ್ಷ ಹಿಡಿತ ಇರುವುದಿಲ್ಲ. ಪಿಎಂ ಕೇರ್ಸ್ ಟ್ರಸ್ಟ್ ಸಾರ್ವಜನಿಕ ಪ್ರಾಧಿಕಾರವಲ್ಲವಾದ್ದರಿಂದ ಅದು ಆರ್ ಟಿ ಐ ಕಾಯ್ದೆಯಡಿಯಲ್ಲೂ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡೆವಿಟ್ ನಲ್ಲಿ ಹೇಳಿದೆ.

ಈಗ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ.

  1. ಪಿಎಂ ಕೇರ್ಸ್ ಸ್ಥಾಪನೆಯಾಗಿದ್ದು ಕೋವಿಡ್ ಸಂಕಟದ ಕಾಲದಲ್ಲಿ. ಅಪಾರ ಸಾವು ನೋವು ಆರ್ಥಿಕ ನಷ್ಟ ಗಳಿಂದ ಕಂಗಾಲಾಗಿದ್ದ ಜನರಿಗೆ ಪಿಎಂ ಕೇರ್ಸ್ ಎಂಬುದು ಗಂಧರ್ವ ಲೋಕದಿಂದ ಬಂದ ಸಂಜೀವಿನಿ ಎಂಬಂತೆ ಬಿಂಬಿಸಲಾಗಿತ್ತು. ಸರ್ಕಾರಕ್ಕೂ ಇದಕ್ಕೂ ಸಂಬಂಧವಿಲ್ಲವೆಂದು ಅಂದೇ ಹೇಳಬಹುದಿತ್ತಲ್ಲವೇ? ಇದೊಂದು ಖಾಸಗಿ ಟ್ರಸ್ಟ್, ಇದಕ್ಕೆ ಭಾರತ ಸಂವಿಧಾನಕ್ಕೆ, ಸರ್ಕಾರಗಳಿಗೆ, ಜನರಿಗೆ ಉತ್ತರದಾಯಿ ಅಲ್ಲ ಎಂದು ಅಂದೇ ಹೇಳಬಹುದಿತ್ತಲ್ಲವೇ?
  2. ಇದು ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪನೆಯಾಗದಿದ್ದರೂ ರಾಷ್ಟ್ರೀಯ ಲಾಂಚನ ಬಳಸಿದ್ದು ಯಾಕೆ? ಇದು ಸರ್ಕಾರದ ಅಡಿಯಲ್ಲಿ ಬರುವ ಸಂಸ್ಥೆಯಲ್ಲವಾದರೂ gov.in ಬಳಸಿದ್ದು ಯಾಕೆ? ಹಣ ವಸೂಲಿಗೆ ಸರ್ಕಾರಿ ಯಂತ್ರಾಂಗಗಳನ್ನು ಬಳಸಿಕೊಂಡಿದ್ದು ಯಾಕೆ? ಸರ್ಕಾರವನ್ನು ಮುನ್ನಡೆಸುವವರೇ ಹಣ ಕೊಡಿ ಎಂದು ಬೇಡಿದ್ದು ಯಾಕೆ? ಸ್ವತಃ ಉಪರಾಷ್ಟ್ರಪತಿಗಳೇ ರಾಜ್ಯಸಭೆಯಲ್ಲಿ ಪಿಎಂ ಕೇರ್ಸ್ ಗೆ ದೇಣಿಗೆ ಕೊಡಿ ಎಂದು ಬೇಡಿಕೊಂಡಿದ್ದು ಯಾಕೆ?
  3. ಒಂದು ಖಾಸಗಿ ಟ್ರಸ್ಟ್ ಗೆ ಪಿಎಂ ಕೇರ್ಸ್ ಹೆಸರು ಬಳಸಿದ್ದು ಯಾಕೆ? ಇದರಿಂದ ದೇಶದ ಪ್ರಧಾನಿ ಹುದ್ದೆಯ ಘನತೆಯನ್ನು ಕುಗ್ಗಿಸಿದಂತೆ ಆಗಲಿಲ್ಲವೇ? ಖಾಸಗಿ ವ್ಯಕ್ತಿಗಳು ಪ್ರಧಾನಿ ಹೆಸರಲ್ಲಿ ಟ್ರಸ್ಟ್ ಮಾಡಿದರೆ ಅದು ಅಪರಾಧವಲ್ಲವೇ?
  4. ಪಿಎಂ ಕೇರ್ಸ್ ಖಾಸಗಿ ಟ್ರಸ್ಟ್ ಆದ ಮೇಲೆ, ಸರ್ಕಾರಿ ನೌಕರರ ಒಂದು ದಿನದ ಸಂಬಳವನ್ನು ಹೇಗೆ ಕಡಿತ ಮಾಡಿಕೊಂಡು ಟ್ರಸ್ಟ್ ಅಕೌಂಟಿಗೆ ಜಮಾ ಮಾಡಲಾಯಿತು? ಆದಾಯ ತೆರಿಗೆ ವಿನಾಯಿತಿಯನ್ನು ಯಾವ ಆಧಾರದಲ್ಲಿ ನೀಡಲಾಯಿತು? ಪಿಎಂ ಹೆಸರಲ್ಲಿ ಏನನ್ನು ಬೇಕಾದರೂ ಮಾಡಬಹುದೇ?
  5. ದೇಶದ ಜನರು ಸಾವಿರಾರು ಕೋಟಿ ರುಪಾಯಿಗಳನ್ನು ಪಿಎಂ ಕೇರ್ಸ್ ಗೆ ನೀಡಿದ್ದಾರೆ. ಈಗ ಅವರು ತಾವು ಕೊಟ್ಟ ಹಣದ ಲೆಕ್ಕ ಕೇಳುವಂತಿಲ್ಲ. ಎಷ್ಟು ಹಣ, ಯಾತಕ್ಕಾಗಿ ಖರ್ಚು ಮಾಡಿದ್ದೀರಿ ಎಂದು ಕೇಳುವಂತಿಲ್ಲ. ನಾಳೆ ಹಣವನ್ನೆಲ್ಲ ತೆಗೆದು ಅದಾನಿ ಕಂಪೆನಿಗೆ ಕೊಟ್ಟರೂ, ಭಾರತೀಯ ಜನತಾ ಪಕ್ಷ ಚುನಾವಣೆ ಖರ್ಚಿಗೋ, ಶಾಸಕರ ಖರೀದಿಗೋ ಬಳಸಿದರೂ ನಾವು ಕೇಳುವಂತಿಲ್ಲ. ಇದು ಭಾರತದ ಯಾವುದೇ ಕಾನೂನಿನ ಅಡಿಯಲ್ಲಿ ಸ್ಥಾಪಿಸಿಲ್ಲ ಎಂದು ಸರ್ಕಾರ ಹೇಳುತ್ತಿರುವುದರಿಂದ ನಾವು ಕೋರ್ಟುಗಳ ಮೊರೆ ಹೋಗುವಂತಿಲ್ಲ. ಇಂಥ ಅನೈತಿಕ ವ್ಯವಹಾರ ಯಾಕೆ ಬೇಕಿತ್ತು?
  6. ಮೊದಲಿನಿಂದಲೂ ಇರುವ ಪಿಎಂ ರಿಲೀಫ್ ಫಂಡ್ ಗೆ ಪಿಎಂ ಕೇರ್ಸ್ ಹಣ ಕೊಡುತ್ತದೆಯಂತೆ! ಈ ಡಬ್ಬಲ್ ಎಂಜಿನ್ ಯಾಕೆ ಬೇಕಿತ್ತು? ಒಂದು ಅಧಿಕೃತ ಇರುವಾಗ ಇನ್ನೊಂದು ಅನಧಿಕೃತ ಯಾಕೆ ಬೇಕಿತ್ತು? ಪಿಎಂ ರಿಲೀಫ್ ಫಂಡ್ ಮೂಲಕ ಮಾಡಲಾಗದ ಯಾವ ಘನಂದಾರಿ ಕೆಲಸವನ್ನು ಪಿಎಂ ಕೇರ್ಸ್ ಮಾಡುತ್ತದೆ?
  7. ನರೇಂದ್ರ ಮೋದಿ ಸರ್ಕಾರ ಬಿದ್ದು ಹೋಗಿ, ಹೊಸ ಸರ್ಕಾರ ಬಂತು ಎಂದಿಟ್ಟುಕೊಳ್ಳಿ. ಆಗ ಟ್ರಸ್ಟ್ ಹಣೆಬರೆಹವೇನು? ಹೊಸ ಪ್ರಧಾನಿಗೆ ಅಲ್ಲಿ ಪಾತ್ರವೇ ಇರುವುದಿಲ್ಲ. ಪ್ರಧಾನಿ ಬದಲಾದರೂ ಮೋದಿಯೇ ಪಿಎಂ ಕೇರ್ಸ್ ನಿರ್ವಹಿಸುತ್ತಾರೆಯೇ? ಆಗ ಪ್ರಧಾನಿಯಲ್ಲದ ವ್ಯಕ್ತಿ ಪ್ರಧಾನಿ ಹೆಸರಲ್ಲಿ ಹೇಗೆ ಟ್ರಸ್ಟ್ ನಡೆಸುತ್ತಾರೆ?
  8. ಇದೆಲ್ಲ ಗಮನಿಸಿದರೆ ಪಿಎಂ ಕೇರ್ಸ್ ಕೂಡ ಒಂದು ದೊಡ್ಡ ಫ್ರಾಡ್ ಎಂದು ಅನಿಸುವುದಿಲ್ಲವೇ? ದೇಶವನ್ನು ಮುನ್ನಡೆಸಬೇಕಾದವರೇ ಇಂಥ ದಂಧೆಗೆ ಇಳಿದರೆ ದೇಶ ಉಳಿಯಲು ಸಾಧ್ಯವೇ?

ದಿನೇಶ್ ಕುಮಾರ್ ಎಸ್.ಸಿ.

Related Articles

ಇತ್ತೀಚಿನ ಸುದ್ದಿಗಳು