ಹಾಸನ: ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಪ್ರೇಮ ವಿವಾಹ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಭೀಕರ ಮಾರಾಮಾರಿ ನಡೆದಿದ್ದು, ಇಡೀ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಘರ್ಷಣೆಗೆ ಸಂಬಂಧಿಸಿದಂತೆ ಬೇಲೂರು ಪೊಲೀಸ್ ಾಣೆಯಲ್ಲಿ ಸದ್ಯ ಒಟ್ಟು 5 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಹಾಗೂ ವಿರೋಧಿಸಿದ ವಿಚಾರವಾಗಿ ಸಾರ್ವಜನಿಕ ರಸ್ತೆಯಲ್ಲೇ ಎರಡು ಬಣಗಳ ನಡುವೆ ಗಲಾಟೆ ನಡೆದಿದ್ದು, ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಪೊಲೀಸರು ಖುದ್ದಾಗಿ ಎರಡು ಸುಮೋಟೋ (Suo Motu) ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇದರೊಂದಿಗೆ ಹಲ್ಲೆಗೊಳಗಾದವರು ನೀಡಿದ ದೂರಿನ ಮೇರೆಗೆ ಇತರ 3 ಕೇಸ್ ಸೇರಿದಂತೆ ಒಟ್ಟು 5 ಎಫ್‌ಐಆರ್ (FIR) ದಾಖಲಾಗಿವೆ.
ಪೊಲೀಸರಿಂದ ಬಿಗಿ ಬಂದೋಬಸ್ತ್: ಸದ್ಯ ಬೇಲೂರು ಪಟ್ಟಣದಲ್ಲಿ ಸೃಷ್ಟಿಯಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಬಿಗಿ ಬಂದೋಬಸ್ತ್ ನಿಯೋಜಿಸಿದ್ದಾರೆ. ಈಗಾಗಲೇ ಗಲಾಟೆಯಲ್ಲಿ ಭಾಗಿಯಾಗಿದ್ದ ಕೆಲವು ಪ್ರಮುಖ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ. ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
