Saturday, April 27, 2024

ಸತ್ಯ | ನ್ಯಾಯ |ಧರ್ಮ

ಧಾರವಾಡ | ಗ್ಯಾಸ್ ಟ್ಯಾಂಕರ್ ತಂದಿಟ್ಟ ಸಂಕಷ್ಟ

ಧಾರವಾಡ ಬಳಿ ಅಂಡರ್‌ಪಾಸ್‌ ಒಂದರಲ್ಲಿ ಬೃಹತ್ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಸಿಲುಕಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಆತಂಕ ಮೂಡಿಸಿತ್ತು. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಿದ್ದರಿಂದ ಚಾಲಕರು ಹಾಗೂ ಪ್ರಯಾಣಿಕರು ಸಹ ಪರದಾಡುವಂತಾಯಿತು.

16 ಗಂಟೆಗಳ ಪ್ರಯತ್ನದ ನಂತರ, ಟ್ಯಾಂಕರ್ ಹೊರತೆಗೆದು ಹೈಡ್ರಾಮ ಅಂತ್ಯ ಕಂಡಿತು.

ಧಾರವಾಡ ನಗರದ ಸಮೀಪದ ಹೆದ್ದಾರಿ-4ರ ಹೈಕೋರ್ಟ್ ಪೀಠದ ಬಳಿ ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಟ್ಯಾಂಕರ್ ಒಂದು ಅಂಡರ್ ಪಾಸ್ ಅಡಿಯಲ್ಲಿ ಸಿಲುಕಿಕೊಂಡಿತ್ತು. ಟ್ಯಾಂಕರ್ ಚಾಲಕ ಅರಿವಿಲ್ಲದೆ ಇನ್ನೊಂದು ಬದಿಗೆ ಹೋಗುವಾಗ ಟ್ಯಾಂಕರ್ ಎತ್ತರ ಹೆಚ್ಚಾಗಿದ್ದು ಅಂಡರ್ ಪಾಸ್ ಮೇಲ್ಛಾವಣಿಗೆ ಉಜ್ಜಿ ಸಿಲುಕಿಕೊಂಡಿದೆ. ಚಾಲಕ ಎಷ್ಟೇ ಪ್ರಯತ್ನಿಸಿದರೂ ಮುಂದೆ ಅಥವಾ ಹಿಂದೆ ಸರಿಯಲಾಗಲಿಲ್ಲ.

ವಿಷಯ ತಿಳಿದ ಜಿಲ್ಲಾಧಿಕಾರಿಗಳು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕ್ರೇನ್‌ಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗ್ಯಾಸ್ ಸೋರಿಕೆಯಾದರೆ ಬೆಂಕಿ ಅನಾಹುತ ಸಂಭವಿಸುವ ಆತಂಕವಿತ್ದೆತು. ಮೊದಲು ಎಚ್ಚರಿಕೆಯಿಂದ ಸುತ್ತಮುತ್ತಲಿನ ವಿದ್ಯುತ್ ಕಡಿತಗೊಳಿಸಿ. ಯಾರೂ ಮನೆಗಳಲ್ಲಿ ಬೆಂಕಿಕಡ್ಡಿಗಳನ್ನು ಬಳಸಬಾರದು ಮತ್ತು ಅಡುಗೆ ಮಾಡಬಾರದು ಎಂದು ಘೋಷಿಸಲಾಯಿತು.

ಬೆಳಗಾವಿಯಿಂದ ಧಾರವಾಡಕ್ಕೆ ಬರುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಲಾಯಿತು. ಮತ್ತೊಂದು ಟ್ಯಾಂಕರ್ ತಂದು ಅದರಲ್ಲಿ ಗ್ಯಾಸ್ ತುಂಬಿಸಿದ ಬಳಿಕ ಕ್ರೇನ್ ಮೂಲಕ ಖಾಲಿ ಟ್ಯಾಂಕರ್ ಹೊರತೆಗೆಯಲಾಯಿತು.

ಇದೆಲ್ಲ ಕೆಲಸಕ್ಕೆ ಜನ ಸಹಕಾರ ನೀಡಿದ್ದಾರೆ ಎಂದು ಜಿಲ್ಲಾ ಎಸ್ಪಿ ಡಾ.ಸಂಜೀವ್ ಪಾಟೀಲ್ ಹೇಳಿದರು. 16 ಗಂಟೆಗಳ ಕಾಲ ಎಲ್ಲರನ್ನೂ ಉದ್ವಿಗ್ನಗೊಳಿಸಿದ್ದ ಗ್ಯಾಸ್ ಟ್ಯಾಂಕರ್ ಪ್ರಕರಣ ಗುರುವಾರ ಮಧ್ಯಾಹ್ನದ ಸುಮಾರಿಗೆ ಮುಕ್ತಾಯವಾಗುತ್ತಿದ್ದಂತೆ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಗಂಟೆಗಟ್ಟಲೆ ವಾಹನಗಳನ್ನು ತಡೆದಿದ್ದರಿಂದ ಜನರು ಹಾಗೂ ನೌಕರರು ಕಾಲ್ನಡಿಗೆಯಲ್ಲಿ ಅಲೆದಾಡಿದರು. ಜನರು ಮನೆಯಲ್ಲಿ ಅಡುಗೆ ಮಾಡದೆ ಹಸಿವಿನಿಂದ ಬಳಲುತ್ತಿದ್ದರು.

Related Articles

ಇತ್ತೀಚಿನ ಸುದ್ದಿಗಳು