ಮುಂಬೈ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಜಲ್ನಾ ಮಾಜಿ ಪುರಸಭೆ ಸದಸ್ಯ ಶ್ರೀಕಾಂತ್ ಪಂಗರ್ಕರ್ ಎನ್‌ಡಿಎ ತೆಕ್ಕೆಗೆ ಸೇರ್ಪಡೆಯಾಗಿದ್ದಾರೆ.
ಅವರು ಶನಿವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾದರು. ಶಿಂಧೆ ಶಿವಸೇನೆ ಎನ್‌ಡಿಎ ಪಾಲುದಾರ ಎಂಬುದು ಗೊತ್ತೇ ಇದೆ. ಬಿಜೆಪಿಯು ಶಿವಸೇನೆಯನ್ನು ಎರಡು ಭಾಗ ಮಾಡಿ ಶಿಂಧೆ ಅವರನ್ನು ಅತ್ಯಂತ ಪ್ರಜಾಸತ್ತಾತ್ಮಕವಾಗಿ ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಿಸಿರುವುದು ಗೊತ್ತೇ ಇದೆ.
ಅತ್ಯಂತ ಘೋರ ಅಪರಾಧಗಳಲ್ಲಿ ಭಾಗಿಯಾದ ನಾಯಕರೆಲ್ಲ ಬಿಜೆಪಿ ಮತ್ತು ಎನ್‌ಡಿಎ ನೇತೃತ್ವದ ಪಕ್ಷ ಸೇರುತ್ತಿರುವುದು ಗಮನಾರ್ಹ.
ಸೆಪ್ಟೆಂಬರ್ 5, 2017ರಂದು, ಗೌರಿ ಲಂಕೇಶ್ ಅವರನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ ಅವರ ನಿವಾಸದ ಹೊರಗೆ ಕೇಸರಿ ಗೂಂಡಾಗಳು ಗುಂಡಿಕ್ಕಿ ಕೊಂದರು. ಈ ಕೊಲೆ ಪ್ರಕರಣದಲ್ಲಿ ಪಂಗರ್ಕರ್ ಮತ್ತು ಇತರರ ಕೈವಾಡವನ್ನು ಕರ್ನಾಟಕ ಪೊಲೀಸರು ಗುರುತಿಸಿದ್ದು, ಮಹಾರಾಷ್ಟ್ರ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು. ಪಂಗರ್ಕರ್ ಅವರು 2001-06ರಲ್ಲಿ ಜಲ್ನಾ ಮುನ್ಸಿಪಲ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆಗಸ್ಟ್ 2018ರಲ್ಲಿ ಅವರನ್ನು , ಆದರೆ ಕರ್ನಾಟಕ ಹೈಕೋರ್ಟ್ ಈ ವರ್ಷ ಸೆಪ್ಟೆಂಬರ್ 4ರಂದು ಜಾಮೀನು ನೀಡಿತು. ಇದೀಗ ಕೇಂದ್ರದಲ್ಲಿ ಆಡಳಿತ ಪಕ್ಷವಾಗಿರುವ ಎನ್‌ಡಿಎ ಒಕ್ಕೂಟವನ್ನು ಸೇರ್ಪಡೆಗೊಂಡಿರುವುದರಿಂದ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಕಗ್ಗಂಟಾಗಿದೆ.