Home ಬೆಂಗಳೂರು ಜೂನ್ 30ರೊಳಗೆ ಜಿಬಿಎ ಚುನಾವಣೆ: ಬಿಜೆಪಿ ಚುನಾವಣಾ ಉಸ್ತುವಾರಿಗಳ ನೇಮಕ

ಜೂನ್ 30ರೊಳಗೆ ಜಿಬಿಎ ಚುನಾವಣೆ: ಬಿಜೆಪಿ ಚುನಾವಣಾ ಉಸ್ತುವಾರಿಗಳ ನೇಮಕ

0

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗಳನ್ನು ಇದೇ ಜೂನ್ 30ರೊಳಗಾಗಿ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ, ಮುಂಬರುವ ಜಿಬಿಎ ಪಾಲಿಕೆಗಳ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದೆ. ಈ ಸಂಬಂಧ ಬಿಜೆಪಿ ಹೈಕಮಾಂಡ್ ಚುನಾವಣಾ ಉಸ್ತುವಾರಿಗಳು ಹಾಗೂ ಸಹ ಉಸ್ತುವಾರಿಗಳನ್ನು ನೇಮಕ ಮಾಡಿದೆ.

ಜಿಬಿಎ ಚುನಾವಣಾ ಉಸ್ತುವಾರಿಯನ್ನಾಗಿ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಸಹ ಉಸ್ತುವಾರಿಗಳಾಗಿ ರಾಜಸ್ಥಾನದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಹಾಗೂ ಮಹಾರಾಷ್ಟ್ರದ ಬಿಜೆಪಿ ಶಾಸಕರಾದ ಸಂಜಯ್ ಉಪಾಧ್ಯಾಯ್ ಅವರನ್ನು ನೇಮಕ ಮಾಡಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಹಲವು ವರ್ಷಗಳ ನಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿ ಅನುಭವೀ ನಾಯಕ ರಾಮ್ ಮಾಧವ್ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡುವ ಮೂಲಕ ಪಕ್ಷವು ಸಂಘಟನೆ ಹಾಗೂ ಚುನಾವಣಾ ತಂತ್ರಕ್ಕೆ ಹೆಚ್ಚಿನ ಒತ್ತು ನೀಡಿದೆ.

ಇನ್ನೊಂದೆಡೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ಇಂದು (ಜನವರಿ 20) ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕಾರದ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಚುನಾವಣೆಗೆ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳ ನೇಮಕ ಮಾಡುವ ಮೂಲಕ ಪಕ್ಷದ ಚುನಾವಣಾ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ಚರ್ಚೆಗಳು ತೀವ್ರಗೊಂಡಿವೆ. ಈ ಹಿಂದೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸುವುದಾಗಿ ಹೇಳಿಕೆ ನೀಡಿದ್ದರಿಂದ ಮೈತ್ರಿ ಕುರಿತು ಗೊಂದಲ ಉಂಟಾಗಿತ್ತು.

ಆದರೆ, ಈ ಗೊಂದಲಕ್ಕೆ ತೆರೆ ಎಳೆಯುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಯನ್ನು ಬಿಜೆಪಿ–ಜೆಡಿಎಸ್ ಮೈತ್ರಿಯಾಗಿ ಎದುರಿಸುವುದಾಗಿ ಘೋಷಿಸಿದ್ದಾರೆ.

You cannot copy content of this page

Exit mobile version