ಬೆಂಗಳೂರು: 14 ಕೋಟಿಗೂ ಅಧಿಕ ನೋಂದಾಯಿತ ಸದಸ್ಯರನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಇದೀಗ ತನ್ನ ಆರ್ಥಿಕ ಶಕ್ತಿಯಲ್ಲೂ ಹೊಸ ದಾಖಲೆ ಬರೆದಿದೆ. 2025ರ ಮಾರ್ಚ್ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷದ ಲೆಕ್ಕಪರಿಶೋಧನಾ ವರದಿ ಅನ್ವಯ, ಬಿಜೆಪಿ ಬೊಕ್ಕಸದಲ್ಲಿ ₹10,230 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗಿದೆ.
ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಲೆಕ್ಕಪರಿಶೋಧನಾ ವರದಿ ಪ್ರಕಾರ, ಬ್ಯಾಂಕ್‌ಗಳಲ್ಲಿ ನಗದು ಹಾಗೂ ಠೇವಣಿ ರೂಪದಲ್ಲಿ ₹9,996 ಕೋಟಿ ಇದ್ದು, ಸಾಲ ಮತ್ತು ಮುಂಗಡ ಪಾವತಿ ರೂಪದಲ್ಲಿ ₹234 ಕೋಟಿ ಇದೆ. ಇದರಿಂದ ಪಕ್ಷದ ಒಟ್ಟು ಹಣಕಾಸು ಸಂಪತ್ತು ₹10,230 ಕೋಟಿಗೆ ತಲುಪಿದೆ.
ಆದಾಯದಲ್ಲಿ ಭಾರೀ ಏರಿಕೆ : 2023–24ನೇ ಹಣಕಾಸು ವರ್ಷದಲ್ಲಿ ಬಿಜೆಪಿ ಬಳಿ ₹3,967 ಕೋಟಿ ಇದ್ದು, ಅದರ ಮುಂದಿನ ವರ್ಷವಾದ 2024–25ರಲ್ಲಿ ಆದಾಯದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ದೆಹಲಿ ಮತ್ತು ಒಡಿಶಾ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ 2025ರಲ್ಲಿ ಪಕ್ಷಕ್ಕೆ ₹6,125 ಕೋಟಿ ದೇಣಿಗೆ ಲಭಿಸಿದೆ. ಇದಲ್ಲದೆ, ಬ್ಯಾಂಕ್ ಠೇವಣಿಗಳಿಂದ ₹634 ಕೋಟಿ ಬಡ್ಡಿ ಆದಾಯ ಬಂದಿದೆ. ಆದಾಯ ತೆರಿಗೆ ರೀಫಂಡ್ ಮೂಲಕ ₹66 ಕೋಟಿ ಹಾಗೂ ಅದಕ್ಕೆ ಬಡ್ಡಿಯಾಗಿ ₹4.40 ಕೋಟಿ ಪಕ್ಷಕ್ಕೆ ದೊರೆತಿದೆ.
ಚುನಾವಣಾ ವೆಚ್ಚವೇ ಮೇಲುಗೈ : 2024–25ನೇ ಹಣಕಾಸು ವರ್ಷದಲ್ಲಿ ಬಿಜೆಪಿ ಒಟ್ಟು ₹3,335 ಕೋಟಿ ವೆಚ್ಚ ಮಾಡಿದ್ದು, ಇದರಲ್ಲಿನ ಶೇ.88ರಷ್ಟು ಮೊತ್ತವನ್ನು ಚುನಾವಣಾ ಸಂಬಂಧಿತ ವೆಚ್ಚಗಳಿಗಾಗಿ ಬಳಸಲಾಗಿದೆ. ಅಭ್ಯರ್ಥಿಗಳಿಗೆ ಹಣಕಾಸು ನೆರವಿಗಾಗಿ ₹312 ಕೋಟಿ ಖರ್ಚಾಗಿದ್ದರೆ, ವಿಮಾನ ಮತ್ತು ಹೆಲಿಕಾಪ್ಟರ್ ಪ್ರಯಾಣ ವೆಚ್ಚಕ್ಕೆ ₹583 ಕೋಟಿ ವ್ಯಯಿಸಲಾಗಿದೆ.
ಎಲೆಕ್ಟ್ರಾನಿಕ್ ಮಾಧ್ಯಮ ಜಾಹೀರಾತಿಗೆ ₹1,125 ಕೋಟಿ, ಕಟೌಟ್, ಬ್ಯಾನರ್, ಹೋಲ್ಡಿಂಗ್‌ಗಳಿಗೆ ₹107 ಕೋಟಿ ಮತ್ತು ಮುದ್ರಣ ಕಾರ್ಯಗಳಿಗೆ ₹123 ಕೋಟಿ ವೆಚ್ಚವಾಗಿದೆ. ಇನ್ನು ಜಾಹೀರಾತು ವೆಚ್ಚಕ್ಕೆ ₹897 ಕೋಟಿ, ರ್‍ಯಾಲಿ ಹಾಗೂ ಪ್ರಚಾರಕ್ಕೆ ₹90 ಕೋಟಿ ಮತ್ತು ಸಭಾ ವೆಚ್ಚಗಳಿಗೆ ₹52 ಕೋಟಿ ಖರ್ಚು ಮಾಡಲಾಗಿದೆ ಎಂದು ಪಕ್ಷ ತಿಳಿಸಿದೆ.
ರಾಜಕೀಯ ಪಕ್ಷಗಳ ಹಣಕಾಸು ಪಾರದರ್ಶಕತೆಯ ಚರ್ಚೆ ನಡೆಯುತ್ತಿರುವ ನಡುವೆ, ಬಿಜೆಪಿ ಸಲ್ಲಿಸಿದ ಈ ಲೆಕ್ಕಪತ್ರಗಳು ವ್ಯಾಪಕ ಚರ್ಚೆಗೆ ಕಾರಣವಾಗಿವೆ.
