ಬೆಂಗಳೂರು: ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಕೈಗೊಳ್ಳುತ್ತಿರುವ ನಿರ್ಧಾರಗಳ ಕುರಿತು ಚರ್ಚೆ ನಡೆಸಲು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಮುಖ್ಯಮಂತ್ರಿಗಳ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ನಡೆದ ದಕ್ಷಿಣ ಭಾರತ ಸಮಾಜವಾದಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಇತ್ತೀಚಿನ ನೀತಿಗಳು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವಂತಿವೆ ಎಂದು ಆರೋಪಿಸಿದರು. ಕೇಂದ್ರದ ನಡೆಗಳಿಂದ ರಾಜ್ಯಗಳಿಗೆ ಲಭಿಸಬೇಕಾದ ಅನುದಾನದಲ್ಲಿ ಕಡಿತವಾಗುತ್ತಿದ್ದು, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನ್ಯಾಯವಾಗುತ್ತಿದೆ ಎಂದರು.
ಹೆಚ್ಚಿನ ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದರೂ, ಕೇಂದ್ರದಿಂದ ರಾಜ್ಯಕ್ಕೆ ಲಭಿಸುವ ಅನುದಾನದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ಸಿಎಂ ಹೇಳಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ನೀಡುತ್ತಿದ್ದ ಅನುದಾನವನ್ನೂ ಕಡಿತಗೊಳಿಸಲಾಗಿದ್ದು, ಇದರಿಂದ ರಾಜ್ಯದ ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬೀಳುವ ಆತಂಕವಿದೆ ಎಂದು ತಿಳಿಸಿದರು.
ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುವ ಯಾವುದೇ ಪ್ರಯತ್ನಗಳನ್ನು ಪ್ರಜಾಸತ್ತಾತ್ಮಕವಾಗಿ ಪ್ರಶ್ನಿಸುವ ಅಗತ್ಯವಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಈ ಹಿನ್ನಲೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮಹತ್ವದ ನಿರ್ಧಾರಗಳಿಗೆ ವೇದಿಕೆಯಾಗಲಿದೆ ಎಂದು ಅವರು ಹೇಳಿದರು.
