ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಅವರು ಸೋಮವಾರ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ರಾಜಕೀಯ ಸಂಸ್ಕೃತಿಯಲ್ಲಿ ಬದಲಾವಣೆಯಾಗಬೇಕೆಂದು ಆಗ್ರಹಿಸಿದ ಅವರು, ತಮ್ಮ ಹಾಗೂ ತಮ್ಮ ಪತಿಯ ವಿರುದ್ಧ ಸಂದರ್ಭಕ್ಕೆ ತಕ್ಕಂತೆ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರು ನಿಂದನೀಯ ಹೂಡಿಕೆಗಳನ್ನು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಗೀತಾಂಜಲಿ ಆಂಗ್ಮೋ, “ಸೋನಮ್ ವಾಂಗ್ಚುಕ್ ಅವರನ್ನು ವಶಕ್ಕೆ ಪಡೆದಾಗ, ಬಿಜೆಪಿ ಐಟಿ ಸೆಲ್ ನಮ್ಮನ್ನು ದೇಶದ್ರೋಹಿಗಳು, ಚೀನಾ ಏಜೆಂಟರು, ವಿದೇಶಿ ಧನಸಹಾಯ ಪಡೆಯುವವರು ಎಂದು ಬಣ್ಣಿಸಿ ತಮಗೆ ತೋಚಿದ ಎಲ್ಲಾ ಲೇಬಲ್‌ಗಳನ್ನು ಹಚ್ಚಿತು. ಆದರೆ ಇಂದು, ಪ್ರಧಾನಿ ನಿವಾಸದ ಮುಂಭಾಗ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ನಾವು ನಾಟಕ ಎಂದು ಕರೆದಿದ್ದಕ್ಕೆ, ಕಾಂಗ್ರೆಸ್ ಬೆಂಬಲಿಗರು ನಮ್ಮನ್ನು ಸಂಘಿಗಳು, ಆರೆಸ್ಸೆಸ್ ಮತ್ತು ಬಿಜೆಪಿಯ ಚಮಚಾಗಳು ಎಂದು ನಿಂದಿಸುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ವಿಭಿನ್ನ ಬಾವುಟಗಳು ಆದರೆ ಒಂದೇ ಪ್ಲೇಬುಕ್: ಗೀತಾಂಜಲಿ
ಮುಂದುವರಿದು ಮಾತನಾಡಿದ ಗೀತಾಂಜಲಿ, “ವಿಭಿನ್ನ ಬಾವುಟಗಳು ಆದರೆ ಎಲ್ಲರದ್ದೂ ಒಂದೇ ಪ್ಲೇಬುಕ್. ಇದು ನಮ್ಮ ಸಂಪೂರ್ಣ ರಾಜಕೀಯ ಸಂಸ್ಕೃತಿಯನ್ನು ಹಾಳುಮಾಡಿದೆ. ಭಾರತಕ್ಕೆ ಕೇವಲ ಸರ್ಕಾರ ಬದಲಾಗುವುದಕ್ಕಿಂತ ಹೆಚ್ಚಿನದ ಅಗತ್ಯವಿದೆ. ಇಲ್ಲಿ ರಾಜಕೀಯದ ಶೈಲಿಯೇ ಬದಲಾಗಬೇಕಿದೆ; ಭಿನ್ನಾಭಿಪ್ರಾಯಗಳನ್ನು ನಿಂದನೆಯಿಂದ ಅಲ್ಲ, ಮಾತುಕತೆಯ ಮೂಲಕ ಎದುರಿಸಬೇಕು. ದೇಶಭಕ್ತಿಯನ್ನು ಪಕ್ಷದ ನಿಷ್ಠೆಯಿಂದಲ್ಲ, ಪ್ರಾಮಾಣಿಕತೆಯಿಂದ ಅಳೆಯಬೇಕು ಮತ್ತು ಸತ್ಯಕ್ಕೆ ರಾಜಕೀಯ ನಿಷ್ಠೆಗಿಂತ ಹೆಚ್ಚಿನ ಪ್ರಾಮುಖ್ಯತೆ ಇರಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಗೀತಾಂಜಲಿ ಆಂಗ್ಮೋ ಅವರು ಜುಲೈ 21 ರಂದು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ‘ಸುಳ್ಳು ಮತ್ತು ನಾಟಕ’ ಎಂದು ಕರೆದಿದ್ದರು. “ಪ್ರಧಾನಿ ನಿವಾಸದ ಹೊರಗಿನ ಪ್ರತಿಭಟನೆಯಲ್ಲಿ ಪ್ರಾಮಾಣಿಕತೆಯಿರಲಿಲ್ಲ. ಜಂತರ್ ಮಂತರ್‌ನಲ್ಲಿ ಕೈಜೋಡಿಸಿ ಹೋರಾಟ ನಡೆಸಿದ್ದರೆ ಅದು ನಿಜವಾದ ಸತ್ಯವಾಗಿರುತ್ತಿತ್ತು. ಜನರನ್ನು ಇನ್ಮುಂದೆ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ, ಇದು ಜಾಗೃತ ಭಾರತ” ಎಂದು ಹೇಳಿದ್ದರು.
ಆಸ್ಪತ್ರೆಯಿಂದ ಸೋನಮ್ ವಾಂಗ್ಚುಕ್ ಡಿಸ್ಚಾರ್ಜ್
ಕಳೆದ 26 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಅವರು ಗುರುಗ್ರಾಮದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರಬಂದ ನಂತರ ಅವರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಬಳಸುವ ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.
ಎಎನ್‌ಐ (ANI) ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸೋನಮ್ ವಾಂಗ್ಚುಕ್, “ಈ 26 ದಿನಗಳ ಉಪವಾಸ ಮತ್ತು ಆಂದೋಲನ ಮುಕ್ತಾಯಗೊಂಡ ನಂತರ, ನಾನು ಮೊದಲು ರಾಜ್‌ಘಾಟ್‌ಗೆ ಬಂದು ಮಹಾತ್ಮ ಗಾಂಧಿಯವರನ್ನು ಸ್ಮರಿಸಲು, ಅವರಿಗೆ ಕೃತಜ್ಞತೆ ಸಲ್ಲಿಸಲು ಬಯಸಿದ್ದೆ. ಅವರು ತೋರಿಸಿಕೊಟ್ಟ ಹಾದಿ ನೂರು ವರ್ಷಗಳ ಹಿಂದೆ ಎಷ್ಟೊಂದು ಪ್ರಸ್ತುತವಾಗಿತ್ತೋ, ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ ಎಂಬುದನ್ನು ದೇಶಕ್ಕೆ ತಿಳಿಸಲು ಬಯಸುತ್ತೇನೆ.
ವಿದ್ಯಾರ್ಥಿಗಳ ಪ್ರತಿಭಟನೆ ತನ್ನ ಗುರಿ ಸಾಧಿಸಿರುವುದು ನಮಗೆ ಗಾಂಧಿವಾದಿ ಮಾರ್ಗವು ಕೇವಲ ಲಡಾಖ್‌ನಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲೂ ಪ್ರಸ್ತುತವಾಗಿದೆ ಎಂಬ ಭರವಸೆ ನೀಡಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು. ಕಿಡಿಗೇಡಿಗಳು ತಪ್ಪು ಉದ್ದೇಶದಿಂದ ಕೆಲಸ ಮಾಡುತ್ತಿದ್ದರೆ ಏನೂ ಆಗುವುದಿಲ್ಲ ಎಂದು ನಾವು ಹೇಳಲು ಸಾಧ್ಯವಿಲ್ಲ. ಆದರೆ ಶಾಂತಿಯುತ ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು ಮತ್ತು ಅದನ್ನು ಗೌರವಿಸಬೇಕು ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದರು.
