ದೆಹಲಿ: 18 ವರ್ಷ ತುಂಬಿದ ಯುವಜನರನ್ನು (ಜೆನ್-ಝೀ) ಮತದಾರರ ಪಟ್ಟಿಗೆ ಸೇರಿಸಲು ಪ್ರತಿವರ್ಷ ಕೈಗೊಳ್ಳಬೇಕಾದ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್ಎಸ್ಆರ್) ಪ್ರಕ್ರಿಯೆಯು 2024 ರಿಂದ ಸ್ಥಗಿತಗೊಂಡಿರುವುದು ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿಯೇ ಈ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ ಎಂಬ ವರದಿ ಹೊರಬಿದ್ದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುವಜನರ ಮತಗಳೆಂದರೆ ಭಯ ಎಂದು ಕಾಂಗ್ರೆಸ್ ಪಕ್ಷ ವಾಗ್ದಾಳಿ ನಡೆಸಿದೆ.
‘ದಿ ಎಕನಾಮಿಕ್ ಟೈಮ್ಸ್’ ಪ್ರಕಟಿಸಿರುವ ವರದಿಯ ಪ್ರಕಾರ, 2024 ರ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯ ವಾರ್ಷಿಕ ಎಸ್ಎಸ್ಆರ್ ಪ್ರಕ್ರಿಯೆಯನ್ನು ಕೈಗೊಂಡಿಲ್ಲ.18 ವರ್ಷ ಪೂರೈಸಿದ ಹೊಸ ಮತದಾರರನ್ನು ಪಟ್ಟಿಗೆ ಸೇರಿಸುವ ಈ ಮಹತ್ವದ ಪ್ರಕ್ರಿಯೆಯು ಸಾಮಾನ್ಯವಾಗಿ ಪ್ರತಿವರ್ಷ ಮೇ ತಿಂಗಳ ಅಂತ್ಯದಲ್ಲಿ ಘೋಷಣೆಯಾಗುತ್ತದೆ.ಆದರೆ 2026-27ರ ಸಾಲಿಗೂ ಸಹ ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು, ವಿವೇಕ್ ಜೋಶಿ ಹಾಗೂ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ನಡುವೆ ಒಮ್ಮತ ಮೂಡದಿರುವುದೇ ಈ ವಿಳಂಬಕ್ಕೆ ಪ್ರಮುಖ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ (ಎಸ್ಐಆರ್) ಒಂದು ವಿಸ್ತೃತ ತಪಾಸಣಾ ಪ್ರಕ್ರಿಯೆಯಾಗಿದ್ದರೆ, ಎಸ್ಎಸ್ಆರ್ ಎಂಬುದು ನಿಯಮಿತವಾಗಿ ನಡೆಯುವ ವಾರ್ಷಿಕ ಪ್ರಕ್ರಿಯೆಯಾಗಿದೆ.ಜನವರಿ 1, ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1 ರಂತೆ ವರ್ಷದಲ್ಲಿ ನಾಲ್ಕು ಅರ್ಹತಾ ದಿನಾಂಕಗಳನ್ನು ನೀಡಿ 18 ವರ್ಷ ತುಂಬಿದ ಯುವಜನರು ತಕ್ಷಣವೇ ಮತದಾರರಾಗಿ ನೋಂದಾಯಿಸಿಕೊಳ್ಳಲು ಎಸ್ಎಸ್ಆರ್ ಅವಕಾಶ ಕಲ್ಪಿಸುತ್ತದೆ.
ಆದರೆ 2025 ರಲ್ಲಿ ಬಿಹಾರದಲ್ಲಿ ಎಸ್ಐಆರ್ ಆರಂಭಿಸಿ ನಂತರ ಇತರ ರಾಜ್ಯಗಳಿಗೂ ವಿಸ್ತರಿಸಿದ ಕಾರಣ, 1950 ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 21 ರ ಅಡಿಯಲ್ಲಿ ಕಡ್ಡಾಯವಾಗಿರುವ ವಾರ್ಷಿಕ ಎಸ್ಎಸ್ಆರ್ ನಡೆಸುವ ದಶಕಗಳ ಸಂಪ್ರದಾಯಕ್ಕೆ ಧಕ್ಕೆಯಾಗಿದೆ.ಎಸ್ಐಆರ್ ನಡುವೆ ಎಸ್ಎಸ್ಆರ್ ಅಗತ್ಯವಿದೆಯೇ ಎಂಬ ಬಗ್ಗೆ ಸಿಇಸಿ ಜ್ಞಾನೇಶ್ ಕುಮಾರ್ ಕಾನೂನು ಸಲಹೆಯನ್ನೂ ಪಡೆದಿದ್ದರು ಎನ್ನಲಾಗಿದೆ.
ಪ್ರತಿ ವರ್ಷ 18 ವರ್ಷ ತುಂಬುವ ಯುವಜನರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಅತ್ಯಗತ್ಯವಾಗಿದ್ದು, ಎಸ್ಐಆರ್ ಪ್ರಕ್ರಿಯೆಯು ವಾರ್ಷಿಕ ಎಸ್ಎಸ್ಆರ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯುಕ್ತರಾದ ಸಂಧು ಮತ್ತು ಜೋಶಿ ಪ್ರಬಲವಾಗಿ ಪ್ರತಿಪಾದಿಸಿದ್ದರೂ, ಸಿಇಸಿ ಯಾವುದೇ ಮುಂದಾಳತ್ವ ವಹಿಸಿಲ್ಲ ಎಂದು ವರದಿ ತಿಳಿಸಿದೆ.ಇದರಿಂದಾಗಿ ದೇಶಾದ್ಯಂತ ಲಕ್ಷಾಂತರ ಜೆನ್ಝಡ್ ಯುವಜನರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ.
ಈ ವಿಚಾರವನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಿ ಯುವಜನರಿಗೆ ಮತದಾನದ ಹಕ್ಕು ನೀಡಿದರೆ, ಪ್ರಸ್ತುತ ಪ್ರಧಾನಿ ಮೋದಿ ಅವರು ಎಸ್ಎಸ್ಆರ್ ನಿಲ್ಲಿಸುವ ಮೂಲಕ ಯುವಜನರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ; ನಿರುದ್ಯೋಗ ಮತ್ತು ಆಕಾಂಕ್ಷೆಗಳನ್ನು ಕಸಿದುಕೊಂಡಿರುವ ಕಾರಣ ಮೋದಿಯವರಿಗೆ ಯುವಜನರೆಂದರೆ ಭಯ,” ಎಂದು ಆರೋಪಿಸಿದ್ದಾರೆ.
