ಹಬ್ಬ ಎಂದಾಗ ಆಚರಣೆ ಇರುವ ಮಲೆನಾಡ ಹಬ್ಬಗಳು ಒಂದು ರೀತಿಯ ವಿಭಿನ್ನ. ತಲೆತಲಾಂತರದಿಂದ ನಡೆಸಿಕೊಂಡು ಬಂದ ಪದ್ಧತಿ ನಡೆ ವಿಶೇಷ ಅನುಭವ ಕೊಡುವಂತದ್ದು. ಯುಗಾದಿಯ ವಿಶೇಷದಂದು ಮಲೆನಾಡಿನ ಯುಗಾದಿ ಆಚರಣೆಯ ಬಗ್ಗೆ _ ಸಚಿನ್ ಕೊಳಿಗೆ _ ಅಚ್ಚುಕಟ್ಟಾಗಿ ವಿವರಿಸಿದ್ದಾರೆ, ಓದಿ.. ಹಂಚಿಕೊಳ್ಳಿ
ಗುಡ್ಡದ ಗೇರು ಎಂದು ಕರೆಸಿಕೊಳ್ಳುವ ವಿಶೇಷ ಜಾತಿಯ ಹಸಿಯಾದ ಗೇರುಬೀಜವನ್ನು ಒಣಗಿಸಿ ನಂತರದಲ್ಲಿ ಕುಯ್ದು, ಅದರಿಂದ ಒಸರುವ ಕಪ್ಪು ಡಾಂಬರಿನಂತಹ ರಸವನ್ನು ಮನೆಯಲ್ಲೆಲ್ಲರೂ ಹಣೆಗಿಡುವುದು ನಮ್ಮ ಮಲೆನಾಡಿನ #ಯುಗಾದಿ ಹಬ್ಬದ ಸಂಪ್ರದಾಯಗಳೊಂದು.
ಒಂದೇ ಒಂದು ಸಣ್ಣ ಚುಕ್ಕೆಯಷ್ಟು ಇದನ್ನ ಹಣೆಗಿಡಬೇಕು. ಇಟ್ಟ ಕೂಡಲೇ, ಸಣ್ಣಗೆ ತುರಿಕೆ ಕಡಿತ ಶುರುವಾಗತ್ತೆ, ಅಪ್ಪಿ ತಪ್ಪಿ ಕೆರೆದುಕೊಂಡ್ರೋ, ನಿಮ್ ಕಥೆ ದೇವ್ರೇ ಗತಿ. ಹಣೆ ತುಂಬಾ ಗಾಯ ಆಗೋದ್ ಗ್ಯಾರಂಟಿ. ಏನಾದ್ರೂ ಮಾಡಿ ಸ್ವಲ್ಪ ಹೊತ್ತು ಆ ಕಡಿತವನ್ನ ತಡೆದುಕೊಂಡ್ರೆ ಅದು ನಿಧಾನಕ್ಕೆ ಗೇರಿಟ್ಟ ಆ ಸಣ್ಣ ಜಾಗವನ್ನಷ್ಟೇ ಸುಟ್ಟು ಒಂದು ಕಪ್ಪನೆಯ ಕಲೆಯಾಗಿ ಉಳಿದುಬಿಡುತ್ತೆ. ಇನ್ನು ಅದು ನಮ್ಮ ಹಣೆಯಿಂದ ಹೋಗುವುದು ಹದಿನೈದು ದಿನದಿಂದ ತಿಂಗಳಾದರೂ ಬೇಕು.
ಸಾಮಾನ್ಯವಾಗಿ ಈ ಗೇರು ಮಲೆನಾಡಿನ ಕಡೆ ಸಿಗುವುದಿಲ್ಲವಾದ್ದರಿಂದ ಹಿಂದಿನ ಕಾಲದಲ್ಲಿ ಪ್ರತೀ ವರ್ಷವೂ ಹಾವಾಡಿಗರು ಬಂದಾಗ ಅವರು ಇದನ್ನು ಮಾರಾಟ ಮಾಡಿಕೊಂಡು ಬರುತ್ತಿದ್ದರಂತೆ ಆದರೆ ಈಗೀಗ ಹಾವಾಡಿಗರು ಬರುವುದೂ ನಿಂತಿದೆ ಹಾಗೆಯೇ ಗೇರಿಲ್ಲದೇ ಗೇರಿಡುವುದೂ ನಿಲ್ಲುತ್ತಾ ಬಂದಿದೆ.
ಯಾರದ್ದಾದರೂ ಹಣೆಯಲ್ಲಿ ಗೇರಿಲ್ಲಾ ಅಂದರೆ ಅವರ ಮನೆಯಲ್ಲಿ ಈ ಸಲ ಹಬ್ಬ ಕ್ಯಾನ್ಸಲ್ ಆಗಿರಬಹುದು ಎಂಬ ಊಹೆ ಆಗ. ಗೇರಿಟ್ಟಿದ್ದೇವೆ ಎಂದರೆ ಇವರ ಮನೇಲಿ ಪೂಜೆ ಮುಗಿದಿದೆ ಅಂತ ಅರ್ಥ. ಪೂಜೆಯೆಲ್ಲಾ ಮುಗಿದ ಮೇಲೆ ಗೇರಿಟ್ಟು ‘ಪುಟಾಣಿ’ ತಿಂದರೆ ಆಮೇಲೆಯೇ ಹಬ್ಬದೂಟ.
ಪುಟಾಣಿ ತಿನ್ನೋದಾ? ಹಾಗಂದ್ರೆ ನಮ್ಮ ಕಡೆ ಬೇವು ಬೆಲ್ಲ ಮಾತ್ರ ತಿನ್ನದೇ, ಹುರಿಗಡಲೆಗೆ ಬೇವು ಮತ್ತೆ ಬೆಲ್ಲ ಸೇರಿಸಿ ಪುಡಿ ಮಾಡಲಾಗತ್ತೆ. ಅದನ್ನೇ ‘ಪುಟಾಣಿ ಪುಡಿ’ ಅನ್ನೋದು. ಚಿಕ್ಕಮಕ್ಕಳಿಗಂತೂ ಅದನ್ನ ತಿನ್ನೋದೇ ದೊಡ್ಡ ಹಬ್ಬ. ಪುಟಾಣಿ ಪುಡಿಯನ್ನ ಬಾಯಲ್ಲಿ ಹಾಕಿಕೊಂಡು ಮತ್ತೊಬ್ಬರೊಡನೆ ಮಾತನಾಡಲು ಹೋದರೆ ಎದುರಿನವರ ಮುಖತುಂಬಾ ಪುಟಾಣಿ ಪುಡಿಯ ಪ್ರೋಕ್ಷಣೆ. ಮಕ್ಕಳು ಒಬ್ಬರ ಮುಖದಮೇಲೊಬ್ಬರು ಪುಟಾಣಿ ಹಾರಿಸಿಕೊಂಡು ಓಡುತ್ತಿದ್ದರೆ, ‘ಅಯ್ಯೋ ಮನೀಯೆಲ್ಲಾ ಪುಟಾಣಿ ಚೆಲ್ಬ್ಯಾಡ್ರೋ’ ಅಂತ ದೊಡ್ಡೋರಾ ಕೂಗಾಟವೇ ಹಬ್ಬದ ಗೌಜು ಗದ್ದಲ. ಆಮೇಲೆ ಯುಗಾದಿ ನಂತರ ಮನೆಗೆ ನೆಂಟರು ಬಂದ್ರೂ ಆತಿಥ್ಯಕ್ಕೆ ಅದೇ ಪುಟಾಣಿ, ನೆಂಟರ ಮನೆಗೆ ಹೊರಟವರ ಕೈಯಲ್ಲೂ ಅದೇ ಪುಟಾಣಿ. ಇಷ್ಟೆಲ್ಲಾ ಸಂಭ್ರಮ ಮುಗಿದ ಮೇಲೆಯೇ ನಮ್ಮ ಹಬ್ಬ ಮುಗಿದಂತೆ.
ಅಂದಹಾಗೆ “ನಾ ಗೇರಿಟ್ಟೆ, ನಿಮ್ದು ಗೇರಿಟ್ಟಾತನ್ರೋ?!”
ಸಚಿನ್ ಕೊಳಿಗೆ