ಚೆನ್ನೈ: ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಜೋರಾಗಿದೆ. ಚುನಾವಣಾ ಪ್ರಚಾರದ ಅಂಗವಾಗಿ ಮುಖಂಡರು ಪರಸ್ಪರ ಟೀಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಅಣ್ಣಾಮಲೈ ಮತ್ತು ಕಮಲ್ ಹಾಸನ್ ನಡುವೆ ಮಾತಿನ ಚಕಮಕಿ ನಡೆದಿತ್ತು.
ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ನಟ ಕಮಲ್ ವಿರುದ್ಧ ವಿವಾದಸ್ಪದ ಹೇಳಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅಣ್ಣಾಮಲೈ ಮಾತನಾಡಿ, ದೇಶದ ರಾಜಧಾನಿ ಬದಲಿಸುವ ಇಂತಹ ಆರೋಪಗಳನ್ನು ಯಾರಾದರೂ ಮಾಡಿದರೆ ಕೂಡಲೇ ಅವರನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಬೇಕು. ಅವರ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರೀಕ್ಷಿಸಬೇಕು. ಕಮಲ್ ಮನೋವೈದ್ಯರ ಬಳಿ ಹೋಗಿ ಸಲಹೆ ಪಡೆಯಬೇಕು. ದೇಶದ ರಾಜಧಾನಿಯನ್ನು ನಾಗ್ಪುರಕ್ಕೆ ಹೇಗೆ ಸ್ಥಳಾಂತರಿಸಲಾಗುತ್ತದೆ? ಎಂದು ಅವರು ಕೇಳಿದರು. ಆದರೆ, ಚೆನ್ನೈಯನ್ನು ದೇಶದ ಬೇಸಿಗೆ ಅಥವಾ ಚಳಿಗಾಲದ ರಾಜಧಾನಿಯನ್ನಾಗಿ ಮಾಡಲು ಕಮಲ್ ಮುಂದಾದರೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಅದೇ ಸಮಯದಲ್ಲಿ ಡಿಎಂಕೆಯಿಂದ ರಾಜ್ಯಸಭಾ ಸಂಸದರಾಗುವ ಉದ್ದೇಶದಿಂದ ಕಮಲ್ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಇದೀಗ ಕಮಲ್ ಹಾಸನ್ ಅಭಿಮಾನಿಗಳು ಅಣ್ಣಾಮಲೈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ನಡುವೆ ಚುನಾವಣಾ ಸಂದರ್ಭದಲ್ಲಿ ಡಿಎಂಕೆ-ಎಂಎನ್‌ಎಂ ಮೈತ್ರಿಕೂಟದ ಭಾಗವಾಗಿ ಅಭ್ಯರ್ಥಿ ಕಲಾನಿಧಿ ವೀರಸ್ವಾಮಿ ಪರ ಪ್ರಚಾರದಲ್ಲಿ ಕಮಲ್ ಹಾಸನ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕಮಲ್, ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಾಗ್ಪುರವನ್ನು ಭಾರತದ ಹೊಸ ರಾಜಧಾನಿಯನ್ನಾಗಿ ಮಾಡುತ್ತದೆ. ಬಿಜೆಪಿ ನಾಯಕರು ಆದಾಯ ತೆರಿಗೆ ಇಲಾಖೆ ಮೂಲಕ ಪ್ರತಿಪಕ್ಷಗಳಿಗೆ ಬೆದರಿಕೆ ಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಲದೆ, ರಾಷ್ಟ್ರಧ್ವಜವನ್ನು ತ್ರಿವರ್ಣ ಧ್ವಜದಿಂದ ಒಂದೇ ಬಣ್ಣದ ಧ್ವಜಕ್ಕೆ (ಕೇಸರಿ ಧ್ವಜ) ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದರು. ಇದೇ ವೇಳೆ ಗುಜರಾತ್ ಮಾದರಿಯನ್ನೂ ಕಮಲ್ ಟೀಕಿಸಿದ್ದಾರೆ. ಜನರು ಎಂದಿಗೂ ಗುಜರಾತ್ ಮಾದರಿಯನ್ನು ಬಯಸಲಿಲ್ಲ, ಅದು ಶ್ರೇಷ್ಟ ಮಾದರಿಯಲ್ಲ. ಗುಜರಾತ್ ಮಾದರಿಗಿಂತ ದ್ರಾವಿಡ ಮಾದರಿ ಉತ್ತಮವಾಗಿದೆ. ಅದನ್ನೇ ನಾವು ಅನುಸರಿಸುತ್ತಿದ್ದೇವೆ. ಆದರೆ ಬಿಜೆಪಿ ನಾಯಕರು ದ್ರಾವಿಡ ಮಾದರಿಯನ್ನು ಕಡೆಗಣಿಸುತ್ತಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ.