ಕೊಪ್ಪಳ: ಲೋಕಸಭಾ ಚುನಾವಣೆಗೆ ನನಗೆ ಟಿಕೆಟ್ ತಪ್ಪಿಸಿರುವುದಕ್ಕೆ ಸಮರ್ಥ ಕಾರಣ ಕೊಡಿ. ನನ್ನನ್ನೇನು ಗುಜರಿ ರಾಜಕಾರಣಿ ಅಂದುಕೊಂಡಿರುವಿರಾ ಎಂದು ಕೊಪ್ಪಳ ಕ್ಷೇತ್ರದ ಸಂಸದ ಸಂಗಣ್ಣ ಕರಡಿ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಗಿಣಿಗೇರಿ ಗ್ರಾಮದಲ್ಲಿ ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದ ಒಬ್ಬ ನಾಯಕ ಕೂಡ ಸೌಜನ್ಯಕ್ಕೂ ಫೋನ್ ಕರೆ ಮಾತನಾಡಲಿಲ್ಲ. ಯಾಕೆ ಟಿಕೇಟ್ ತಪ್ಪಿತು ಎಂದು ಸಮಾಧಾನಕ್ಕೂ ಯಾರೂ ತಿಳಿಸುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ಯಾರು ನನಗೆ ಟಿಕೆಟ್ ತಪ‍್ಪಿಸಿದರು ಮತ್ತು ಯಾಕೆ ತಪ್ಪಿಸಿದರು ಎನ್ನುವ ಪ್ರಶ್ನೆಗಳಿಗೆ ನನಗೆ ಉತ್ತರ ಬೇಕೇ ಬೇಕು. ಉತ್ತರ ಬಂದ ಬಳಿಕವಷ್ಟೇ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುವೆ. ರಾಜಕೀಯವಾಗಿ ನಿವೃತ್ತಿಯಾಗುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿಯೇ ಇರುವೆ. ಮಾಡಬೇಕಾದ ಸಾಕಷ್ಟು ಕೆಲಸಗಳು ಬಾಕಿ ಇವೆ’ ಎಂದು ಅವರು ಮಾರ್ಮಿಕವಾಗಿ ನುಡಿದರು.
ಟಿಕೆಟ್ ಕೈ ತಪ್ಪಿದ ಬಳಿಕ ಸಂಗಣ್ಣ ಅಸಮಾಧಾನಗೊಂಡ ವಿಷಯ ತಿಳಿದ ಸ್ಥಳೀಯ ಬಿಜೆಪಿಯ ಕೆಲ ನಾಯಕರು ಶುಕ್ರವಾರ ಅವರಿಗೆ ಫೋನ್ ಕರೆ ಮಾಡಿದರೂ ಸಂಗಣ್ಣ ಸ್ವೀಕರಿಸಲಿಲ್ಲ. ಪಕ್ಷದ ಜಿಲ್ಲಾಧ್ಯಕ್ಷರೂ ಆದ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಅವರು ಮುನಿಸು ಮರೆತು ಪ್ರಚಾರಕ್ಕೆ ಬನ್ನಿ ಕೇಳಿಕೊಂಡರು. ಆದರೆ, ಸಂಗಣ್ಣ ಅವರು ಪ್ರಶ್ನೆಗಳಿಗೆ ಉತ್ತರ ಸಿಕ್ಕ ಬಳಿಕವೇ ಬರುವೆ ಎಂದು ಕಡಾಖಂಡಿತವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಸಂಪರ್ಕ: ಸಂಗಣ್ಣ ಕರಡಿಯವರ ಜೊತೆ ಕಾಂಗ್ರೆಸ್ ಕೆಲ ನಾಯಕರು ಸಂಪರ್ಕದಲ್ಲಿದ್ದಾರೆ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಹೀಗಾಗಿ ಕ್ಷೇತ್ರದ ಮತದಾರರಲ್ಲಿ ಕುತೂಹಲ ಮನೆ ಮಾಡಿದೆ. ಸದ್ಯ ಮುನಿಸಿಕೊಂಡಿರುವ ಸಂಗಣ್ಣ ಅವರು ಕಾಂಗ್ರೆಸ್ ಕಡೆ ವಾಲಬಹುದು ಎನ್ನಲಾಗುತ್ತಿದೆ.