ಬೆಂಗಳೂರು: ಸತ್ಯನಾರಾಯಣ ಪೂಜೆ ನೆರವೇರಿಸಲು ಬಂದಿದ್ದ ಅರ್ಚಕನೇ ಮನೆಯಲ್ಲಿ ಕಳ್ಳತನ ಮಾಡಿದ ಅಚ್ಚರಿಯ ಘಟನೆ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ.
ಸತ್ಯನಾರಾಯಣ ಪೂಜೆಗೆ ಆಗಮಿಸಿದ್ದ ಅರ್ಚಕ ರಮೇಶ್ ಶಾಸ್ತ್ರಿ ಅವರು ದೇವರಿಗೆ ಹಾಕಿದ್ದ 44 ಗ್ರಾಂ ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿದ್ದರು. ದಂಪತಿಗಳು ಅರ್ಚಕ ರಮೇಶ್ ವಿರುದ್ಧ ದೂರು ನೀಡಿದ ನಂತರ, ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕಳ್ಳತನಕ್ಕೆ ಗೋವಾ ಕೆಸಿನೋ ಕಾರಣ:
ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಕಳ್ಳತನದ ಹಿಂದಿನ ಕಾರಣ ಮತ್ತು ಅರ್ಚಕನ ‘ಗೋವಾ ಕೆಸಿನೋ’ ಪ್ಲಾನ್ ಬಯಲಾಗಿದೆ.
ಅರ್ಚಕ ರಮೇಶ್ ಶಾಸ್ತ್ರಿ ಅವರು ಕಳವು ಮಾಡಿದ ಚಿನ್ನದ ಸರವನ್ನು ಮುತ್ತೂಟ್ ಫೈನಾನ್ಸ್‌ನಲ್ಲಿ ಗಿರವಿ ಇಟ್ಟು ಹಣ ಪಡೆದಿದ್ದ. ರಮೇಶ್ ಶಾಸ್ತ್ರಿ ಈ ಹಣವನ್ನು ಗೋವಾ ಕೆಸಿನೋದಲ್ಲಿ ಜೂಜಿನಲ್ಲಿ ಕಳೆದುಕೊಂಡಿದ್ದ. ಹೀಗಾಗಿ, ಸಾಲ ಮತ್ತು ಹಣದ ಅವಶ್ಯಕತೆಗಾಗಿ ಆರೋಪಿ ಕಳ್ಳತನಕ್ಕೆ ಇಳಿದಿದ್ದ.
ಆರೋಪಿ ರಮೇಶ್ ಶಾಸ್ತ್ರಿಯನ್ನು ಬಂಧಿಸಿದ ಮಾಗಡಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.