Thursday, September 5, 2024

ಸತ್ಯ | ನ್ಯಾಯ |ಧರ್ಮ

“ಗೋ” ರಕ್ಕಸರು!

“ಬಾಂಬ್ ಹಾಕಿ ಅಮಾಯಕರನ್ನ ಬಲಿ ಪಡೆಯುವ ಭಯೋತ್ಪಾದಕರಿಗೂ ಮತ್ತೆ ಗೋ ರಕ್ಷಣೆ ಹೆಸರಲ್ಲಿ ಅಮಾಯಕರ ಜೀವ ತೆಗೆಯುವ ಇವರಿಗೂ ಯಾವುದೇ ತರಹದ ವ್ಯತ್ಯಾಸವಿಲ್ಲ. ಇಬ್ರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾಜದ ಸ್ವಾಸ್ತ್ಯಕ್ಕೆ ತುಂಬಾ ಮಾರಕ!!”.. ಅಭಿ ತೀರ್ಥಹಳ್ಳಿ ಬರೆದಿದ್ದಾರೆ..

ನಮ್ಮ ದೇಶದಲ್ಲಿ ಹಲವಾರು ಧರ್ಮದ ಜನ ಇರುವುದು ಎಲ್ಲರಿಗೂ ತಿಳಿದೇ ಇದೆ. ಅದರಲ್ಲಿ ಕೆಲವರು ಸಸ್ಯಹಾರಿಗಳಾಗಿದ್ರೆ ಇನ್ನೂ ಕೆಲವರು ಮಾಂಸಹಾರಿಗಳಾಗಿರ್ತಾರೆ. ಇಂತಹದರಲ್ಲಿ ಪ್ರತಿಯೊಂದು ಧರ್ಮದ ಕೆಲ ಕಾಲ್ಪನಿಕ ಕತೆಗಳಿಗನ್ವಯ ಒಂದೊಂದಿಷ್ಟು ಪದಾರ್ಥಗಳನ್ನು ತಿನ್ನುವುದು ತಿನ್ನದೆ ಇರುವುದು ಮಾಮೂಲಿ. ಪ್ರಸ್ತುತ ಭಾರತದಲ್ಲಿ ತುಂಬಾ ಅಹಿತಕಾರಿ ಬೆಳವಣಿಗೆ ಆದದ್ದರಲ್ಲಿ ಈ ಗೋ ರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳೂ ಸಹ ಒಂದು.

ಹೌದು ಈಗಿನ ಕೆಲ ನಕಲಿ ಹಿಂದೂಗಳು ಅಂತನಿಸಿಕೊಂಡವರು ಹಾಗೂ ಚಡ್ಡಿ ಸಂಘದ ಸದಸ್ಯರುಗಳು ಈ ಗೋ ರಕ್ಷಣೆ ಹೆಸರಿನಲ್ಲಿ ಮಾಡುತ್ತಿರುವ ಉಪಟಳ ಮತ್ತು ಹೇಸಿಗೆ ರಾಜಕಾರಣ ಹಲವು! ಜನರಲ್ಲಿ, ಅದರಲ್ಲೂ ಯುವ ಜನತೆಯಲ್ಲಿ ಧರ್ಮದ ಅಮಲೇರಿಸಿ ದೇಶವನ್ನ ಮತ್ತೆ ಗತಕಾಲದ ಮೇಲು ಕೀಳೆಂಬ ವ್ಯವಸ್ಥೆಯೆಡೆಗೆ ಕೊಂಡೋಯ್ಯುವ ಕುತಂತ್ರವನ್ನ ಸದ್ದಿಲ್ಲದೇ ನಡೆಸುತ್ತಿದ್ದಾರೆ ಇವರು. ಇಂತಹವರನ್ನ ಇಷ್ಟರ ಮಟ್ಟಿಗೆ ಬೆಳೆಯಲು ಬಿಟ್ಟಿದ್ದೆ ದುರಂತ!

ಸುಮಾರು ಐದುನೂರು ವರ್ಷಗಳ ಹಿಂದಿದ್ದ ಹರಪ್ಪ ನಾಗರಿಕತೆಯವರು ಸಹ ದನದ ಮಾಂಸ ಪ್ರಿಯರು ಅನ್ನುವುದಕ್ಕೆ ನಡೆದ ಕೆಲವು ಅಧ್ಯಾಯನಗಳೆ ಸಾಕ್ಷಿ. ಅಷ್ಟೇ ಅಲ್ಲದೆ ಹಿಂದೂಗಳ ವೇದ ಉಪನಿಷತ್ ಗಳಲ್ಲೂ ಈ ಗೋ ಮಾಂಸ ಭಕ್ಷಣೆಯ ಉಲ್ಲೇಖವಿರುವುದು ಅದನ್ನ ಓದಿದರೆ ತಿಳಿಯುತ್ತೆ. ಹಾಗೂ ಈಗ ರಾಮನ ಹೆಸರಲ್ಲಿ ರಾಜಕಾರಣ ಮಾಡುವುದು ಸಹ ಮಾಮೂಲಿಯಾಗಿದೆ. ಸ್ವತಹ ಆ ರಾಮ ಸೀತೆಯರು ವನವಾಸದಲ್ಲಿದ್ದಾಗಲೂ ಗೋ ಮಾಂಸದ ಭಕ್ಷಣೆಯ ಬಗೆಗೆ ಮಾತನಾಡಿರುವ ಉಲ್ಲೇಖಗಳೂ ಸಹ ನಾವು ವಾಲ್ಮಿಕಿ ರಾಮಾಯಣದಲ್ಲಿ ನೋಡಬಹುದು.‌ ಕೆದಕುತ್ತಾ ಹೋದರೆ ಹಲವಾರು ಬಗೆಯ ಆದಾರಗಳು ಸಿಗುತ್ತವೆ. ಆದರೆ ಈ ಗೋವುಗಳನ್ನ ದೇವರಾಗಿಸಿ ಜನರಲ್ಲಿ ದ್ವೇಷ ಹಾಗೂ ಧರ್ಮಾಂಧತೆಯನ್ನ ತುಂಬಿದವರು ಯಾರು ಅಂತ ಕಂಡುಕೊಳ್ಳುವುದು ಮುಖ್ಯ!.

ಹರಿಯಾಣದಲ್ಲಿ ಗೋ ಮಾಂಸ ಸಾಗಾಣಿಕೆ ಮಾಡುವವನೆಂದು ತಪ್ಪಾಗಿ ಭಾವಿಸಿ ೧೯ ವರ್ಷದ ಧ್ವಿತಿಯ ಪಿಯುಸಿ ಓದುತ್ತಿರುವ ಹುಡುಗನೊಬ್ಬನನ್ನು ೨೫ಕಿಲೋ ಮೀಟರ್ ಕಾರಿನಲ್ಲಿ ಬೆನ್ನಟ್ಟಿ ನಕಲಿ ಗೋ ರಕ್ಷಣೆಯ ಹೆಸರನ್ನಿಟ್ಟುಕೊಂಡ ಕೆಲ ಭಯೋತ್ಪಾದಕರು ಕೊಂದು ತೇಗಿದ್ದಾರೆ! ಇದಾದ ಬಳಿಕ ಅವರ ಉಹೆ ತಪ್ಪಾಗಿದೆ ಅಂತ ತಿಳಿದು ಬಂದಿದೆ. ಇಷ್ಟರ ಮಟ್ಟಿಗೆ ದಬ್ಬಾಳಿಕೆ ದೇಶದಲ್ಲಿ ನಡೆಯುತ್ತಿದೆ ಅಂತಂದ್ರೆ ಯೋಚಿಸಬೇಕಾದದ್ದು ನಮ್ಮ ದೇಶವನ್ನ ಆಳುವವರು ಇನ್ನೆಂತಹ __ಗಳಿರಬಹುದು ಅಂತ!!

ಇದಕ್ಕೆ ತೇಜಸ್ವಿಯವರು ಹಿಂದೊಮ್ಮೆ ಈಟಿವಿ ವಾಹಿನಿಯ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದು; “ಎಲ್ಲ ಮೈಂಡ್ಫ್ಲೋ, ಅವರ ಬೌದ್ಧಿಕತೆ, ಅವರ ರೂಪ.. ಎಲ್ಲಾ ಒಂದೇ ತರದೋರು ಕಂಡ್ರಿ ಇವರು. ಇವರನ್ನೆಲ್ಲಾ ಮೆರೆಸ್ಕೊಂಡು.. ಇವರು ರಾಜಕಾರಣವನ್ನು ನಿಯಂತ್ರಿಸುವಷ್ಟು ಬಲವಾದ ಶಕ್ತಿಗಳಾಗ್ತಿರೋದನ್ನು ನೋಡಿದಾಗ, ಮುಂದೆ ಏನಪ್ಪ ನಮ್ಮ ಮಕ್ಕಳ ಭವಿಷ್ಯ ಅಂತ ಹೆದರಿಕೆ ಆಗುತ್ತೆ. ಯಾಕೆಂದರೆ ಮುಲ್ಲಾಗಳು ಮತ್ತು ಮೌಲ್ವಿಗಳ ಕೈಗೆ ರಾಜಕೀಯ ಕೊಟ್ಟು ಆಗಿರುವಂತಹ ಅನಾಹುತವನ್ನು ನಾವು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ನೋಡ್ತಾ ಇದ್ದೀವಿ. ಮನುಷ್ಯ ಚರಿತ್ರೆಯಿಂದ ಏನಾದರೂ ಕಲಿತಾನೆ ಅನ್ನೊ ಹಾಗಿದ್ದರೆ, ಇವರನ್ನ ನಾವು ಯಾವ ರೀತಿ ನಡೆಸ್ಕೋಬೇಕು ಅನ್ನೋದನ್ನ ತಿಳೀಬೇಕಾಗುತ್ತೆ. ಯಾಕೆಂದರೆ, ಇವರು ಬೇರೆ ಹೆಸರು ಇಟ್ಟುಕೊಂಡಿರ್ಬೋದು, ಅವರು ಬೇರೆ ಹೆಸರು ಇಟ್ಟುಕೊಂಡಿರ್ಬೋದು. ಮಾಡ್ತಾ ಇರೋದು ಎಲ್ಲಾ ಒಂದೇನೆ! ಅವಕಾಶ ಸಿಕ್ಕರೆ, ಒಸಾಮಾ ಬಿನ್ ಲಾಡೆನ್ ಗಿಂತ ಕ್ರೂರಿಗಳಾಗೋದಿಕ್ಕೆ ನಮ್ಮವರು ಕೂಡ ಹೇಸೋದಿಲ್ಲ ಅಂತ ಚೆನ್ನಾಗಿ ಗೊತ್ತಾಗುತ್ತೆ. ಕೊಲ್ಲೋದು, ಆ ಮನಸ್ಸು, ಆ ಮನಸ್ಥಿತಿ ಇದೆಯಲ್ಲ, ಇಟ್ಸ್ ಆಲ್ವೇಸ್ ಸೇಮ್!” ಅಂತ.

ಒಟ್ನಲ್ಲಿ ಅಲ್ಲೇಲೋ ಕೂತು ಧರ್ಮದ ಹೆಸರಲ್ಲೋ, ಜಿಯಾದ್ ಹೆಸರಲ್ಲೋ, ಸ್ವರ್ಗ ಪ್ರಾಪ್ತಿಯಾಗುವ ಹೆಸರಲ್ಲೋ ಬಾಂಬ್ ಹಾಕಿ ಅಮಾಯಕರನ್ನ ಬಲಿ ಪಡೆಯುವ ಭಯೋತ್ಪಾದಕರಿಗೂ ಮತ್ತೆ ಗೋ ರಕ್ಷಣೆ ಹೆಸರಲ್ಲಿ ಅಮಾಯಕರ ಜೀವ ತೆಗೆಯುವ ಇವರಿಗೂ ಯಾವುದೇ ತರಹದ ವ್ಯತ್ಯಾಸವಿಲ್ಲ. ಇಬ್ರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಹಾಗೂ ಸಮಾಜದ ಸ್ವಾಸ್ತ್ಯಕ್ಕೆ ತುಂಬಾ ಮಾರಕವೆ!!

-ಅಭಿ ತೀರ್ಥಹಳ್ಳಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page