ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಯಿಂದ ಈಗಾಗಲೇ ಕಂಗೆಟ್ಟಿರುವ ಸಾರ್ವಜನಿಕರಿಗೆ ಶೀಘ್ರದಲ್ಲೇ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು (Bus Price) ಶೀಘ್ರವೇ ಪರಿಷ್ಕರಣೆ (Big Shocking News) ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಾರಿಗೆ ಸಚಿವ ಭೈರತಿ ಸುರೇಶ್ (Byrathi Suresh) ದರ ಏರಿಕೆಯ ಸುಳಿವು ನೀಡಿದ್ದಾರೆ.
ಸಾರಿಗೆ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿ ನಷ್ಟ
ಕಳೆದ ಎಂಟು ತಿಂಗಳಿನಿಂದ ಕೇಂದ್ರ ಸರ್ಕಾರವು ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳ ದರವನ್ನು ಸತತವಾಗಿ ಏರಿಸುತ್ತಾ ಬಂದಿದ್ದರೂ, ರಾಜ್ಯ ಸರ್ಕಾರವು ಬಸ್ ಪ್ರಯಾಣ ದರವನ್ನು ಹೆಚ್ಚಿಸದೆ ಹಾಗೆಯೇ ಕಾಯ್ದುಕೊಂಡಿತ್ತು. ಇದರಿಂದಾಗಿ ರಾಜ್ಯದ ಸಾರಿಗೆ ನಿಗಮಗಳು ಸಾವಿರಾರು ಕೋಟಿ ರೂಪಾಯಿಗಳ ಭಾರಿ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಈ ನಷ್ಟದ ಹೊರೆಯನ್ನು ಸರಿದೂಗಿಸಲು ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಅತುಲ್ ತಿವಾರಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ದರ ಪರಿಷ್ಕರಣೆಯ ಕುರಿತು ಅಧ್ಯಯನ ನಡೆಸುತ್ತಿರುವ ಈ ಸಮಿತಿಯು ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ರಾಜ್ಯದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರಿಗೆ ಅತಿಯಾದ ಹೊರೆಯಾಗದಂತೆ ಅಲ್ಪ ಪ್ರಮಾಣದಲ್ಲಿ ಪ್ರಯಾಣ ದರ ಪರಿಷ್ಕರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಸರ್ಕಾರದ ಪ್ರಮುಖ ‘ಶಕ್ತಿ’ ಯೋಜನೆಯ ಕುರಿತು ಮಾತನಾಡಿದ ಅವರು, ರಾಜ್ಯದ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಕಲ್ಪಿಸಲಾಗಿರುವ ಉಚಿತ ಪ್ರಯಾಣ ಸೌಲಭ್ಯವನ್ನು ಇನ್ನಷ್ಟು ಸರಳಗೊಳಿಸಲು ಮೊದಲ ಹಂತದಲ್ಲಿ ಒಂದು ಕೋಟಿಗೂ ಅಧಿಕ ಮಹಿಳಾ ಫಲಾನುಭವಿಗಳಿಗೆ ಉಚಿತ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಗುವುದು. ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಈ ಸ್ಮಾರ್ಟ್ ಕಾರ್ಡ್ ವಿತರಣಾ ಪ್ರಕ್ರಿಯೆಗೆ ಶೀಘ್ರದಲ್ಲೇ ಅಧಿಕೃತ ಚಾಲನೆ ಸಿಗಲಿದೆ.
BMTC ಟೀಮ್ ಸೇರಲಿದೆ 4,500 ಇ-ಬಸ್‌ಗಳು
ಇನ್ನೊಂದೆಡೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಇತಿಹಾಸದಲ್ಲೇ ಪ್ರಥಮ ಬಾರಿಗೆ ಬೃಹತ್ ಪ್ರಮಾಣದ ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆಗೊಳಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಕೇಂದ್ರ ಸರ್ಕಾರದ ‘ಪಿಎಂ ಇ-ಡ್ರೈವ್’ ಯೋಜನೆಯಡಿ ಒಟ್ಟು 4,500 ಪರಿಸರ ಸ್ನೇಹಿ ಇ-ಬಸ್‌ಗಳು ಬಿಎಂಟಿಸಿ ಪಡೆ ಸೇರಲಿವೆ. ಈ ಯೋಜನೆಗಾಗಿ ರಾಜ್ಯ ಸರ್ಕಾರವು ವರ್ಷಕ್ಕೆ 600 ಕೋಟಿ ರೂಪಾಯಿಯಂತೆ, ಮುಂದಿನ 20 ವರ್ಷಗಳಲ್ಲಿ ಒಟ್ಟು 12,000 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಿದೆ. ಈ ಬಸ್‌ಗಳಲ್ಲಿ 12 ಮೀಟರ್ ಉದ್ದದ 3,800 ಬಸ್‌ಗಳು ಹಾಗೂ 9 ಮೀಟರ್ ಉದ್ದದ 900 ಬಸ್‌ಗಳಿರಲಿದ್ದು, ಇವುಗಳಲ್ಲಿ 400 ಎಸಿ ಇ-ಬಸ್‌ಗಳು ಸೇರಿವೆ. ಈ ಇ-ಬಸ್‌ಗಳ ಆಗಮನದಿಂದ ಸಿಲಿಕಾನ್ ಸಿಟಿಯಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲಿದೆ. ಜೊತೆಗೆ, ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರದಿಂದ 2,000 ಕೋಟಿ ರೂಪಾಯಿ ಸಾಲ ಪಡೆದು, ರಾಜ್ಯಾದ್ಯಂತ ಹೊಸ ಬಸ್ ಡಿಪೋಗಳ ನಿರ್ಮಾಣ ಹಾಗೂ ಹಳೆಯ ನಿಲ್ದಾಣಗಳ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
