ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮದ ಆರೋಪ ಎದುರಿಸದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ತಕ್ಷಣವೇ ನೇಮಕಾತಿ ಆದೇಶ ನೀಡುವಂತೆ ಆಯ್ಕೆಯಾದ ಅಭ್ಯರ್ಥಿಗಳ ಸಮಿತಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಅಕ್ರಮದ ಆರೋಪ ಎದುರಿಸುತ್ತಿರುವವರನ್ನು ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ಪ್ರಾಮಾಣಿಕರಿಗೆ ಶೀಘ್ರ ನೇಮಕಾತಿ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿನ 400 ಪಶುವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ 2024ರ ಜುಲೈನಲ್ಲಿ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು. 2026ರ ಜುಲೈ 17ರಂದು ಪ್ರಕಟಗೊಂಡ ಅಂತಿಮ ಆಯ್ಕೆ ಪಟ್ಟಿಯಲ್ಲಿ 329 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಸೂಕ್ತ ಅಭ್ಯರ್ಥಿಗಳಿಲ್ಲದೆ 71 ಹುದ್ದೆಗಳು ಖಾಲಿ ಉಳಿದಿದ್ದವು. ಆದರೆ, ಅಕ್ರಮದ ಶಂಕೆಯ ಹಿನ್ನೆಲೆಯಲ್ಲಿ 29 ಅಭ್ಯರ್ಥಿಗಳ ಹೆಸರುಗಳನ್ನು ಒಳಗೊಂಡ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದ್ದು, ಇಡೀ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ.
ತನಿಖೆಯನ್ನು ಸ್ವಾಗತಿಸಿರುವ ಅಭ್ಯರ್ಥಿಗಳು, ಸುಪ್ರೀಂ ಕೋರ್ಟ್‌ನ ‘ಜೋಗಿಂದರ್ ಪಾಲ್ ವಿರುದ್ಧ ಪಂಜಾಬ್ ಸರ್ಕಾರ (2015)’ ತೀರ್ಪನ್ನು ಉಲ್ಲೇಖಿಸಿ, “ನ್ಯಾಯಾಲಯದ ಮಾರ್ಗಸೂಚಿಯಂತೆ ಅಕ್ರಮವೆಸಗಿದವರನ್ನು ಮತ್ತು ಪ್ರಾಮಾಣಿಕರನ್ನು ಪ್ರತ್ಯೇಕಿಸಿ ನೇಮಕಾತಿ ಪ್ರಕ್ರಿಯೆ ಮುಂದುವರಿಸಬೇಕು. ತನಿಖೆಯ ನೆಪದಲ್ಲಿ ತನಿಖಾ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಸುಮಾರು 300 ನಿರಪರಾಧಿ ಅಭ್ಯರ್ಥಿಗಳ ಭವಿಷ್ಯವನ್ನು ಅತಂತ್ರಗೊಳಿಸುವುದು ಸರಿಯಲ್ಲ” ಎಂದು ಪ್ರತಿಪಾದಿಸಿದ್ದಾರೆ. ರಾಜ್ಯದಲ್ಲಿ 2016-17ರ ನಂತರ ಯಾವುದೇ ಹೊಸ ನೇಮಕಾತಿ ನಡೆದಿಲ್ಲ.
ಮಂಜೂರಾದ 3,432 ಹುದ್ದೆಗಳ ಪೈಕಿ 1,449 ಹುದ್ದೆಗಳು ಖಾಲಿ ಇದ್ದು, ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆ ಮತ್ತು ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಸಿಐಡಿಯಿಂದ ಒಂದು ತಿಂಗಳೊಳಗೆ ಮಧ್ಯಂತರ ವರದಿ ಪಡೆದು, ಕ್ಲೀನ್‌ಚಿಟ್ ಪಡೆದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸಬೇಕೆಂದು ಅಭ್ಯರ್ಥಿಗಳು ಸರ್ಕಾರವನ್ನು ಕೋರಿದ್ದಾರೆ.
