Home ಬೆಂಗಳೂರು ಕೇರಳ ಕರ್ನಾಟಕ, ದಕ್ಷಿಣ ಭಾರತದಲ್ಲಿ ED ಭರ್ಜರಿ ದಾಳಿ – 30 ಕಡೆ ಶೋಧ

ಕೇರಳ ಕರ್ನಾಟಕ, ದಕ್ಷಿಣ ಭಾರತದಲ್ಲಿ ED ಭರ್ಜರಿ ದಾಳಿ – 30 ಕಡೆ ಶೋಧ

0

ಬೆಂಗಳೂರು: ‘ನಶಾ ಮುಕ್ತ ಭಾರತ’ (ಮಾದಕ ವಸ್ತು ಮುಕ್ತ ಭಾರತ) ಅಭಿಯಾನದಡಿ ಜಾರಿ ನಿರ್ದೇಶನಾಲಯ (ED) ಗುರುವಾರ ದಕ್ಷಿಣ ಭಾರತದ ವಿವಿಧ ಪ್ರದೇಶಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಿದೆ.

ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳ ಒಟ್ಟು 30 ಸ್ಥಳಗಳಲ್ಲಿ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಭಾರತದ ವಿವಿಧ ರಾಜ್ಯಗಳ ತನಿಖಾ ಸಂಸ್ಥೆಗಳು ಹಾಗೂ ಮಾದಕ ವಸ್ತು ನಿಯಂತ್ರಣ ಬ್ಯೂರೋ (NCB) ದಾಖಲಿಸಿರುವ ಹಲವು ಮಾದಕ ವಸ್ತು ಸಂಬಂಧಿತ ಪ್ರಕರಣಗಳ ಆರೋಪಿಗಳು ಹಾಗೂ ಶಂಕಿತರೊಂದಿಗೆ ಸಂಪರ್ಕ ಹೊಂದಿರುವ 30 ಸ್ಥಳಗಳಲ್ಲಿ ED ಏಕಕಾಲದಲ್ಲಿ ಶೋಧ ನಡೆಸಿದೆ.

ಈ ಪ್ರಕರಣಗಳನ್ನು 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ED ತನಿಖೆ ನಡೆಸುತ್ತಿದೆ. PMLA ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ಈ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ತಮಿಳುನಾಡಿನ ಚೆನ್ನೈನಲ್ಲಿ 7 ಸ್ಥಳಗಳು, ರಾಮನಾಥಪುರಂನಲ್ಲಿ 2, ನಾಗಪಟ್ಟಿಣಂ ಮತ್ತು ವೇಲಾಂಕಣ್ಣಿಯಲ್ಲಿ 6 ಹಾಗೂ ತಿರುನೆಲ್ವೇಲಿಯಲ್ಲಿ ಒಂದು ಸ್ಥಳದಲ್ಲಿ ಶೋಧ ನಡೆದಿದೆ.

ಕರ್ನಾಟಕದ ಕೋಲಾರ, ಮಾಲೂರು ಮತ್ತು ಹೊಸಕೋಟೆ ಪ್ರದೇಶಗಳಲ್ಲಿ 3 ಸ್ಥಳಗಳಲ್ಲೂ ಕಾರ್ಯಾಚರಣೆ ನಡೆದಿದೆ. ತೆಲಂಗಾಣದ ಕೆಲ ಪ್ರದೇಶಗಳಲ್ಲೂ ಶೋಧ ನಡೆಸಲಾಗಿದೆ. ಕೇರಳದ ಕೊಚ್ಚಿ, ಕೋಯಿಕ್ಕೋಡ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಆರೋಪಿಗಳಿಗೆ ಸಂಬಂಧಿಸಿದ ತಲಾ ನಾಲ್ಕು ಸ್ಥಳಗಳಲ್ಲೂ ED ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗುರುವಾರ ಮುಂಜಾನೆಯೇ ಭದ್ರತಾ ಸಿಬ್ಬಂದಿ ಹಾಗೂ ವಿವಿಧ ರಾಜ್ಯಗಳ ಪೊಲೀಸ್ ಪಡೆಗಳ ಸಹಕಾರದೊಂದಿಗೆ ದಾಳಿ ಆರಂಭಿಸಲಾಯಿತು. PMLA ಅಡಿಯಲ್ಲಿ ED ತನಿಖೆ ನಡೆಸುತ್ತಿರುವ 8 ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಶೋಧ ಕಾರ್ಯಾಚರಣೆ ನಡೆದಿದೆ. ಈ ಪೈಕಿ 4 ಪ್ರಕರಣಗಳು ತಮಿಳುನಾಡಿಗೆ, 2 ಕೇರಳಕ್ಕೆ ಹಾಗೂ ತಲಾ ಒಂದು ಪ್ರಕರಣ ಕರ್ನಾಟಕ ಮತ್ತು ತೆಲಂಗಾಣಕ್ಕೆ ಸಂಬಂಧಿಸಿವೆ.

“ನಶಾ ಮುಕ್ತ ಭಾರತ ಅಭಿಯಾನದಡಿ ದಕ್ಷಿಣ ಭಾರತದ ಎಲ್ಲ ವಲಯಗಳಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ಒಟ್ಟು 30 ಸ್ಥಳಗಳಲ್ಲಿ ED ಏಕಕಾಲದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಕೇರಳ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈ ಸ್ಥಳಗಳು ಹರಡಿಕೊಂಡಿವೆ. PMLA ಅಡಿಯಲ್ಲಿ ತನಿಖೆ ನಡೆಯುತ್ತಿರುವ 8 ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಶೋಧ ನಡೆಯುತ್ತಿದೆ. ತನಿಖೆ ಮುಂದುವರಿದಿದೆ” ಎಂದು ಕಾರ್ಯಾಚರಣೆಗೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.

You cannot copy content of this page

Exit mobile version