ಬೆಂಗಳೂರು : ನಿವೃತ್ತ ಸರಕಾರಿ ನೌಕರರಿಗೆ ರಾಜ್ಯ ಸರಕಾರ ಸಿಹಿ ಸುದ್ದಿಯನ್ನು ನೀಡಿದೆ. ʼಸಂಧ್ಯಾ ಕಿರಣʼ ನಗದುರಹಿತ ಆರೋಗ್ಯ ಯೋಜನೆಗೆ ಅಧಿಕೃತ ಚಾಲನೆಯನ್ನು ನೀಡಲಾಗಿದ್ದು, ಅರ್ಹ ಪಿಂಚಣಿದಾರರು ಹಾಗೂ ಕುಟುಂಬ ಸದಸ್ಯರಿಗೆ ವರ್ಷಕ್ಕೆ ಐದು ಲಕ್ಷದವರೆಗೆ ಕ್ಯಾಶ್‌ಲೆಸ್ ಚಿಕಿತ್ಸಾ ಸೌಲಭ್ಯ ದೊರಕಲಿದೆ. 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪಿಂಚಣಿದಾರರು, ಪತಿ ಅಥವಾ ಪತ್ನಿ ಹಾಗೂ ಅವಲಂಬಿತ ದಿವ್ಯಾಂಗ ಮಕ್ಕಳು ಈ ಪ್ರಯೋಜನಕ್ಕೆ ಅರ್ಹರು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಮಾದರಿಯಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದ್ದು, ಅರ್ಹ ನಿವೃತ್ತ ಸರಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರಿಗೆ ದುಬಾರಿ ಚಿಕಿತ್ಸಾ ವೆಚ್ಚದ ಸಂದರ್ಭದಲ್ಲಿ ಆರ್ಥಿಕ ನೆರವು ದೊರಕಲಿದೆ. ಐದು ಲಕ್ಷದವರೆಗೆ ನಗದುರಹಿತ ಆರೋಗ್ಯ ಸೇವೆ ದೊರೆಯಲಿದೆ. AB-Ark ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳಲ್ಲಿ ರೆಫರಲ್ ಆಧಾರದ ಮೇಲೆ ದ್ವಿತೀಯ, ತೃತೀಯ ಹಾಗೂ ತುರ್ತು ಒಳರೋಗಿ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಲು ಅವಕಾಶವಿರುತ್ತದೆ.
ʼಸಂಧ್ಯಾ ಕಿರಣʼ ಯೋಜನೆಯು ವಂತಿಕೆ ಆಧಾರಿತ ಸಹಭಾಗಿತ್ವದ ಆರೋಗ್ಯ ಯೋಜನೆಯಾಗಿದೆ. ಒಟ್ಟು ವೆಚ್ಚದಲ್ಲಿ ಶೇ.70 ರಷ್ಟು ಮೊತ್ತವನ್ನು ಪಿಂಚಣಿದಾರರ ವಂತಿಕೆಯ ಮೂಲಕ ಹಾಗೂ ಉಳಿದ ಶೇ.30ರಷ್ಟು ಪಾಲನ್ನು ಸರಕಾರ ಭರಿಸಲಿದೆ. ನಿವೃತ್ತರಾಗಿರುವ ಪಿಂಚಣಿದಾರರು ʼಸಂಧ್ಯಾಕಿರಣʼ ಯೋಜನೆಗೆ ಸೇರ್ಪಡೆಯಾಗಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ನಿವೃತ್ತಿಯಾದ ದಿನಾಂಕದಿಂದ ಎರಡು ತಿಂಗಳೊಳಗಾಗಿ ನೋಂದಾಯಿಸಬೇಕು. ನಿಗದಿತ ಅವಧಿಯಲ್ಲಿ ನೋಂದಣಿ ಮಾಡಲು ವಿಫಲರಾದರೆ ಯೋಜನೆಯ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆಯಿದೆ.
