Home Uncategorized ಜಂತರ್ ಮಂತರ್ ಹಲ್ಲೆ ಪ್ರಕರಣ: ಕೊಲೆ ಯತ್ನ, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಿಜೆಪಿ ನಾಯಕರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಕೊಲೆ ಯತ್ನ, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಿಜೆಪಿ ನಾಯಕರ ಆಗ್ರಹ

0

ದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ತಮ್ಮ ಬೆಂಬಲಿಗರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಸೆಕ್ಷನ್‌ಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಕ್ತಾರ ಸೌರವ್ ದಾಸ್ ಹಾಗೂ ಸಂಯೋಜಕ ಅಶುತೋಷ್ ರಾಂಕಾ ನೇತೃತ್ವದ ನಿಯೋಗ ಪಟೇಲ್ ಚೌಕ್‌ನಿಂದ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟನಾ ಪೂರ್ವಕ ದೂರು ಸಲ್ಲಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿಜೆಪಿ ವಕ್ತಾರ ಸೌರವ್ ದಾಸ್, “ಪ್ರತಿಭಟನೆಯ ಮೊದಲ ದಿನದಿಂದಲೂ ಅಪ್ರಾಪ್ತ ಬಾಲಕಿಯೊಬ್ಬಳು ಹಾಗೂ ಆಕೆಯ ತಂದೆ ಸಂಜಯ್ ಕುಮಾರ್ ನಮ್ಮೊಂದಿಗೆ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ನಾವು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ವೇಳೆ ಅಪರಾಧ ಹಿನ್ನೆಲೆಯುಳ್ಳ ಗ್ಯಾಂಗ್ ಒಳನುಗ್ಗಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಎಫ್‌ಐಆರ್ ದಾಖಲಾದ ಬಳಿಕವೂ, ಇದು ಕೊಲೆ ಯತ್ನದ ಪ್ರಕರಣವಾದ್ದರಿಂದ ಅದಕ್ಕೆ ತಕ್ಕ ಸೆಕ್ಷನ್‌ಗಳನ್ನು ಸೇರಿಸಬೇಕು ಎಂದು ನಾವು ಪೊಲೀಸರ ಮೇಲೆ ನಿರಂತರ ಒತ್ತಡ ಹೇರುತ್ತಲೇ ಬಂದಿದ್ದೇವೆ” ಎಂದು ತಿಳಿಸಿದರು.

ಸಂತ್ರಸ್ತರು ದಲಿತ ಕುಟುಂಬಕ್ಕೆ ಸೇರಿದವರಾಗಿದ್ದು, ಈ ಕೃತ್ಯದ ಹಿಂದೆ ಸ್ಪಷ್ಟವಾಗಿ ಜಾತಿ ತಾರತಮ್ಯದ ಆಯಾಮವಿದೆ; ಹೀಗಾಗಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿಯೂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಆದರೆ ದೆಹಲಿ ಪೊಲೀಸರು ಈವರೆಗೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದ ಅವರು, “ನಾವು ತನಿಖಾಧಿಕಾರಿಗಳನ್ನು ಪ್ರಶ್ನಿಸಿದಾಗ, ನ್ಯಾಯಾಲಯಕ್ಕೆ ಹೋಗಿ ಆದೇಶ ತರುವಂತೆ ಪೊಲೀಸರು ಉಡಾಫೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.

You cannot copy content of this page

Exit mobile version