Home ದೆಹಲಿ ಪತ್ರಕರ್ತೆಯರ ಮೇಲಿನ ಪೊಲೀಸ್ ಹಲ್ಲೆ ಖಂಡನೀಯ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮಾಧ್ಯಮ ಒಕ್ಕೂಟಗಳಿಂದ ಆಗ್ರಹ

ಪತ್ರಕರ್ತೆಯರ ಮೇಲಿನ ಪೊಲೀಸ್ ಹಲ್ಲೆ ಖಂಡನೀಯ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮಾಧ್ಯಮ ಒಕ್ಕೂಟಗಳಿಂದ ಆಗ್ರಹ

0

ದೆಹಲಿ: ದಕ್ಷಿಣ ದೆಹಲಿಯ ಸಾಕೇತ್‌ನಲ್ಲಿ ಕರ್ತವ್ಯನಿರತ ಸ್ವತಂತ್ರ ಮಹಿಳಾ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ದೆಹಲಿ ಪೊಲೀಸರು ನಡೆಸಿರುವ ಅಮಾನವೀಯ ಹಲ್ಲೆಯನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಸೇರಿದಂತೆ ದೇಶದ ಪ್ರಮುಖ ಪತ್ರಕರ್ತರ ಸಂಘಟನೆಗಳು ಜಂಟಿ ಹೇಳಿಕೆಯಲ್ಲಿ ತೀವ್ರವಾಗಿ ಖಂಡಿಸಿವೆ. ಈ ಕೃತ್ಯದಲ್ಲಿ ಭಾಗಿಯಾದ ಸಾಕೇತ್ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್‌ಎಚ್‌ಒ) ಸೇರಿದಂತೆ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಭಾಗವಹಿಸಿದ್ದ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಯ ನೂತನ ಘಟಕ ಉದ್ಘಾಟನಾ ಸಮಾರಂಭದ ವರದಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳದಲ್ಲೇ ಸಾಕೇತ್ ಠಾಣೆಯ ಪೊಲೀಸ್ ಸಿಬ್ಬಂದಿ ಪತ್ರಕರ್ತೆಯರೊಂದಿಗೆ ಅನುಚಿತವಾಗಿ ವರ್ತಿಸಿ, ಎಳೆದಾಡಿ ಪೊಲೀಸ್ ವಾಹನಕ್ಕೆ ತಳ್ಳಿ ಠಾಣೆಗೆ ಕರೆದೊಯ್ದಿದ್ದಾರೆ.

ಠಾಣೆಗೆ ಕರೆತಂದ ಬಳಿಕ ಎಸ್‌ಎಚ್‌ಒ ಸೂಚನೆಯಂತೆ ಇಬ್ಬರನ್ನೂ ಪ್ರತ್ಯೇಕ ಕೊಠಡಿಗೆ ಕೊಂಡೊಯ್ದು, ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಸೇರಿ ಮನಬಂದಂತೆ ಥಳಿಸಲಾಗಿದೆ. ವಿಚಾರಣೆ ವೇಳೆ ಅವರ ಮುಸ್ಲಿಂ ಧಾರ್ಮಿಕ ಗುರುತನ್ನು ತಿಳಿದುಕೊಂಡ ಪೊಲೀಸರು, ಕೋಮು ಪ್ರಚೋದಕ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಲ್ಲೆಯ ತೀವ್ರತೆಯನ್ನು ಹೆಚ್ಚಿಸಿದ್ದಾರೆ ಹಾಗೂ ಸುಳ್ಳು ಎಫ್‌ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಜಂಟಿ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್ಸ್, ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್, ಪ್ರೆಸ್ ಅಸೋಸಿಯೇಷನ್ ಹಾಗೂ ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ ಸಂಘಟನೆಗಳು, ದೆಹಲಿ ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್ ಅವರು ತಕ್ಷಣವೇ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿವೆ. ಜತೆಗೆ, ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಯತ್ನಿಸಿರುವ ಈ ಪ್ರಕರಣವನ್ನು ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು ಸ್ವತಂತ್ರ ತನಿಖೆಗೆ ಆದೇಶಿಸಬೇಕು ಎಂದು ಜಂಟಿಯಾಗಿ ಮನವಿ ಮಾಡಿವೆ.

You cannot copy content of this page

Exit mobile version