ಬೆಂಗಳೂರು: ನಗರದ ಪ್ರಮುಖ ಎಲಿವೇಟೆಡ್ ರಸ್ತೆಗಳು ಹಾಗೂ ಡಬಲ್ ಡೆಕ್ಕರ್ ಫ್ಲೈಓವರ್‌ಗಳಲ್ಲಿ ಸಂಚಾರ ದಟ್ಟಣೆ ಮತ್ತು ಸುರಕ್ಷತಾ ಸಮಸ್ಯೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಬೆಂಗಳೂರು ಸಂಚಾರ ಪೊಲೀಸರು ವಾಹನ ಸಂಚಾರಕ್ಕೆ ಹೊಸ ನಿರ್ಬಂಧಗಳನ್ನು ಜಾರಿಗೆ ತಂದಿದ್ದಾರೆ. ಸೆಪ್ಟೆಂಬರ್ 4ರಿಂದಲೇ ಈ ನಿಯಮಗಳು ಜಾರಿಗೆ ಬಂದಿದ್ದು, ನಿರ್ದಿಷ್ಟ ವರ್ಗದ ವಾಹನಗಳು ನಿಗದಿತ ಸಮಯದಲ್ಲಿ ಈ ಮಾರ್ಗಗಳನ್ನು ಬಳಸುವಂತಿಲ್ಲ.
ನಗರದ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಇಂತಹ ವಾಹನಗಳು ದಿನದ ಯಾವುದೇ ಸಮಯದಲ್ಲೂ ಎಲಿವೇಟೆಡ್ ಮಾರ್ಗಗಳಲ್ಲಿ ಸಂಚರಿಸುವಂತಿಲ್ಲ.
ಇನ್ನು ಇತರೆ ಸರಕು ಸಾಗಣೆ ವಾಹನಗಳು ಹಾಗೂ ಮೂರು ಚಕ್ರದ ಗೂಡ್ಸ್ ಆಟೋಗಳಿಗೆ ಸಮಯಾಧಾರಿತ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ಈ ವಾಹನಗಳು ನಿಷೇಧಿತ ಮಾರ್ಗಗಳಲ್ಲಿ ಸಂಚರಿಸಲು ಅವಕಾಶ ಇರುವುದಿಲ್ಲ.
ಡಬಲ್ ಡೆಕ್ಕರ್ ಫ್ಲೈಓವರ್‌ಗೂ ಅನ್ವಯ
ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗೆ ನಿರ್ಮಿಸಲಾಗಿರುವ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿಯೂ ಭಾರಿ ಸರಕು ಸಾಗಣೆ ವಾಹನಗಳಿಗೆ ದಿನದ 24 ಗಂಟೆಯೂ ನಿರ್ಬಂಧ ಮುಂದುವರಿಯಲಿದೆ.
ಇದರೊಂದಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಎಲಿವೇಟೆಡ್ ಕಾರಿಡಾರ್ ಸೇರಿದಂತೆ ಕೆಲ ನಿರ್ದಿಷ್ಟ ಮಾರ್ಗಗಳಲ್ಲಿ ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳ ಸಂಚಾರಕ್ಕೂ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಈ ಮಾರ್ಗಗಳಲ್ಲಿ ದ್ವಿಚಕ್ರ ವಾಹನ ಮತ್ತು ಆಟೋರಿಕ್ಷಾಗಳು ಯಾವುದೇ ಸಮಯದಲ್ಲೂ ಸಂಚರಿಸುವಂತಿಲ್ಲ. ಇತರೆ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಪರ್ಯಾಯ ಮಾರ್ಗ ಬಳಸಲು ಸೂಚನೆ
ಎಲಿವೇಟೆಡ್ ಕಾರಿಡಾರ್‌ಗಳ ಮೇಲೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು ಹಾಗೂ ಅಪಘಾತಗಳ ಸಾಧ್ಯತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನಿರ್ಬಂಧ ಜಾರಿಗೊಳಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ನಿಷೇಧಿತ ಸಮಯದಲ್ಲಿ ಈ ಮಾರ್ಗಗಳನ್ನು ಬಳಸುವ ಬದಲು ವಾಹನ ಸವಾರರು ಪರ್ಯಾಯ ರಸ್ತೆಗಳನ್ನು ಆಯ್ಕೆ ಮಾಡಬೇಕು ಎಂದು ಪೊಲೀಸರು ಸೂಚಿಸಿದ್ದಾರೆ. ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳ ವಿರುದ್ಧ ಸಂಚಾರ ನಿಯಮಗಳ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹೊಸ ನಿಯಮಗಳಿಂದ ಎಲಿವೇಟೆಡ್ ಕಾರಿಡಾರ್‌ಗಳ ಮೇಲೆ ಸರಕು ಸಾಗಣೆ ವಾಹನಗಳು ಹಾಗೂ ಕೆಲವು ಸಾರ್ವಜನಿಕ ಸಾರಿಗೆ ವಾಹನಗಳ ಸಂಚಾರದಲ್ಲಿ ಬದಲಾವಣೆ ಉಂಟಾಗಲಿದ್ದು, ವಾಹನ ಸವಾರರು ಪ್ರಯಾಣಕ್ಕೂ ಮುನ್ನ ಪರ್ಯಾಯ ಮಾರ್ಗಗಳನ್ನು ಹುಡುಕುವುದು ಅಗತ್ಯವಾಗಿದೆ.
