Home ರಾಜಕೀಯ ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಆರ್‌ಎಸ್‌ಎಸ್ ತಂತ್ರ: ಫಡ್ನವೀಸ್‌ಗೆ ಮಣೆ? ಮೋದಿ, ಶಾ ಓಟಕ್ಕೆ ಲಗಾಮು...

ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಆರ್‌ಎಸ್‌ಎಸ್ ತಂತ್ರ: ಫಡ್ನವೀಸ್‌ಗೆ ಮಣೆ? ಮೋದಿ, ಶಾ ಓಟಕ್ಕೆ ಲಗಾಮು ಹಾಕಲು ಸಂಘದ ತೀರ್ಮಾನ?

0

ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನಾರಚನೆಯ ಕುರಿತ ಊಹಾಪೋಹಗಳು ಮತ್ತೆ ತೀವ್ರಗೊಂಡಿವೆ. ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳು ಮೋದಿ-ಶಾ ಜೋಡಿಯ ವರ್ಚಸ್ಸಿಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಮೇಲಿನ ತನ್ನ ಹಿಡಿತವನ್ನು ಮರಳಿ ಸ್ಥಾಪಿಸಲು ಆರ್‌ಎಸ್‌ಎಸ್ ಈ ಸಂಪುಟ ಪುನಾರಚನೆಯನ್ನು ಪ್ರಮುಖ ಅವಕಾಶವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ ಎಂಬ ವರದಿಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ.

ಮರಾಠಿ ಪತ್ರಿಕಾ ವರದಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಬಿಜೆಪಿ ವರಿಷ್ಠರ ನಾಯಕತ್ವ ಮೊದಲಿನಷ್ಟು ಪ್ರಬಲವಾಗಿಲ್ಲ ಎಂಬ ಭಾವನೆ ಮೂಡಿರುವ ಬೆನ್ನಲ್ಲೇ ಸಂಘ ಪರಿವಾರ ಸಕ್ರಿಯವಾಗಿದೆ. ಈ ಬೆಳವಣಿಗೆಯ ಭಾಗವಾಗಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮೋದಿ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.

ದೆಹಲಿಯಲ್ಲಿ ಸಂಘದ ಹಿತಾಸಕ್ತಿಗಳನ್ನು ಸಮರ್ಥವಾಗಿ ಮುನ್ನಡೆಸಲು ನಾಗ್ಪುರ ಮೂಲದ ಫಡ್ನವೀಸ್ ಸೂಕ್ತ ಆಯ್ಕೆ ಎಂಬ ಅಭಿಪ್ರಾಯ ಆರ್‌ಎಸ್‌ಎಸ್ ವಲಯದಲ್ಲಿದ್ದು, ಫಡ್ನವೀಸ್ ಕೂಡ ದೆಹಲಿ ರಾಜಕಾರಣಕ್ಕೆ ಕಾಲಿಡಲು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಕೇಂದ್ರ ಸಂಪುಟ ಪುನಾರಚನೆಯಾದರೆ ಫಡ್ನವೀಸ್‌ಗೆ ಬಡ್ತಿ ಸಿಗಲಿದೆ ಎಂದು ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವತ್ ಹೇಳಿದ್ದು, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಅವರಿಗೂ ಸಂಪುಟದಲ್ಲಿ ಸ್ಥಾನ ದೊರೆಯಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಇನ್ನೊಂದೆಡೆ, ಸಂಪುಟಕ್ಕೆ ಮೇಜರ್ ಸರ್ಜರಿ ಮಾಡುವ ಭಾಗವಾಗಿ ಹಿರಿಯ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಜುವಲ್ ಓರಂ ಅವರಿಗೆ ತಮ್ಮ ಸಚಿವ ಸ್ಥಾನಗಳಿಂದ ಕೆಳಗಿಳಿಯುವಂತೆ ಸೂಚಿಸಲಾಗಿತ್ತು ಎಂದು ಮರಾಠಿ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಹಿರಿಯ ನಾಯಕರೆಲ್ಲರೂ ರಾಜೀನಾಮೆ ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಇನ್ನು ನವೆಂಬರ್‌ನಲ್ಲಿ ರಾಜ್ಯಸಭಾ ಸದಸ್ಯತ್ವದ ಅವಧಿ ಮುಕ್ತಾಯಗೊಳ್ಳಲಿರುವ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಗಳಿದ್ದರೂ, ಅವರಿಗೆ ಮತ್ತೆ ಅವಕಾಶ ನೀಡಬೇಕೇ ಬೇಡವೇ ಎಂಬ ಬಗ್ಗೆ ವರಿಷ್ಠರು ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಪ್ರಭಾವಿ ನಾಯಕರಾದ ಗಡ್ಕರಿ ಮತ್ತು ರಾಜನಾಥ್ ಸಿಂಗ್ ಅವರಂತಹ ದಿಗ್ಗಜರಿಗೆ ಪಕ್ಷದ ಸಂಘಟನೆಯ ಬೇರೆ ಜವಾಬ್ದಾರಿ ನೀಡಲಾಗುತ್ತದೆಯೇ ಅಥವಾ ಯಥಾಸ್ಥಿತಿ ಮುಂದುವರಿಯುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

You cannot copy content of this page

Exit mobile version