ದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರೊಬ್ಬರ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್, ತನಗೆ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ನೆರವು ನೀಡಿದ್ದರು ಎಂದು ಪಾಡ್‌ಕಾಸ್ಟ್‌ನಲ್ಲಿ ಬಹಿರಂಗವಾಗಿ ಹೇಳಿಕೊಂಡಿರುವ ವಿಡಿಯೋ ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಈ ಕುರಿತು ಸಿಪಿಐ(ಎಂ), ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ (ಆಪ್) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಲ್ಲೆಕೋರನಿಗೆ ರಕ್ಷಣೆ ನೀಡಿದ ಆರೋಪದ ಮೇಲೆ ಕಪಿಲ್ ಮಿಶ್ರಾ ರಾಜೀನಾಮೆಗೆ ಮತ್ತು ಅವರನ್ನು ಸಹ-ಆರೋಪಿಯನ್ನಾಗಿ ಮಾಡಲು ಆಗ್ರಹಿಸಿವೆ.
ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿರುವ ಸ್ವತಂತ್ರ ಭಾರದ್ವಾಜ್, ಜಂತರ್ ಮಂತರ್‌ನಲ್ಲಿ ಪ್ರತಿಭಟನಾನಿರತ ಯುವತಿ ನಿಶು ಆಜಾದ್ ಅವರ ತಂದೆ ಸಂಜಯ್ ಕುಮಾರ್ ಅವರ ತಲೆ ಒಡೆದು ೬೦ ಹೊಲಿಗೆ ಬೀಳುವಂತೆ ಮಾಡಿದ್ದಾಗಿ ದುರಹಂಕಾರದಿಂದ ಒಪ್ಪಿಕೊಂಡಿದ್ದಾನೆ. “ಅದು ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣವಾಗಿತ್ತು. ಆ ವ್ಯಕ್ತಿಯ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ಪೊಲೀಸ್ ವಶದಲ್ಲಿದ್ದ ನನ್ನನ್ನು ಕಪಿಲ್ ಮಿಶ್ರಾ ಅವರ ಒಂದೇ ಫೋನ್ ಕರೆಯಿಂದ ಬಿಡುಗಡೆ ಮಾಡಲಾಯಿತು. ನನಗೆ ಕಪಿಲ್ ಮಿಶ್ರಾ, ಚಿರಾಗ್ ಪಾಸ್ವಾನ್ ಮತ್ತು ಮೋದಿಯವರಂತಹ ದೊಡ್ಡ ನಾಯಕರ ಆಶೀರ್ವಾದವಿದೆ” ಎಂದು ಆತ ಹೇಳಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಡಪಕ್ಷಗಳು ಮತ್ತು ವಿರೋಧ ಪಕ್ಷಗಳು ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರ ವಿರುದ್ಧ ಮುಗಿಬಿದ್ದಿವೆ. “ಒಂದೆಡೆ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ಸಾಮಾನ್ಯ ವಿದ್ಯಾರ್ಥಿಗಳು ಮತ್ತು ನಾಗರಿಕರ ಮೇಲೆ ಲಾಠಿ ಪ್ರಹಾರ ನಡೆಸಿ, ಎಫ್‌ಐಆರ್ ದಾಖಲಿಸಲಾಯಿತು. ಇನ್ನೊಂದೆಡೆ ದಲಿತ ವ್ಯಕ್ತಿಯ ಮೇಲೆ ಕೊಲೆ ಯತ್ನ ನಡೆಸಿದ ಗೂಂಡಾವನ್ನು ಬಿಜೆಪಿ ಮುಖಂಡನ ಮಧ್ಯಪ್ರವೇಶದಿಂದ ರಾಜಾರೋಷವಾಗಿ ಬಿಟ್ಟುಕಳಿಸಲಾಗಿದೆ. ಇದು ಪೊಲೀಸ್ ತನಿಖೆಯಲ್ಲಿನ ನೇರ ಹಾಗೂ ಕಾನೂನುಬಾಹಿರ ಹಸ್ತಕ್ಷೇಪ” ಎಂದು ಮುಖಂಡರು ಕಿಡಿಕಾರಿದ್ದಾರೆ. ಅಪರಾಧಿಗೆ ಆಶ್ರಯ ನೀಡಿದ ಹಾಗೂ ಪ್ರಕರಣ ಹಳ್ಳಹಿಡಿಯಲು ಕಾರಣರಾದ ಕಪಿಲ್ ಮಿಶ್ರಾ ಅವರನ್ನು ಪ್ರಕರಣದಲ್ಲಿ ಸಹ-ಆರೋಪಿಯನ್ನಾಗಿ ಮಾಡಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.
ಮತ್ತೊಂದೆಡೆ, ವಿವಾದ ಭುಗಿಲೇಳುತ್ತಿದ್ದಂತೆ ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸರು, ಗಲಾಟೆಯ ಸಂದರ್ಭದಲ್ಲಿ ಕಡಾ (ಕೈಬಳೆ) ತಗುಲಿ ವ್ಯಕ್ತಿಗೆ ಗಾಯವಾಗಿತ್ತೇ ಹೊರತು ಗಂಭೀರ ಹಲ್ಲೆಯಾಗಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
