ಹೊಸದೆಹಲಿ: ದಕ್ಷಿಣ ದೆಹಲಿಯ ಸಾಕೇತ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯನಿರತ ಮಹಿಳಾ ಪತ್ರಕರ್ತೆಯರ ಮೇಲೆ ದೆಹಲಿ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿ, ಅವರ ಮುಸ್ಲಿಂ ಧಾರ್ಮಿಕ ಗುರುತನ್ನು ತಿಳಿದ ಬಳಿಕ ದೌರ್ಜನ್ಯವನ್ನು ತೀವ್ರಗೊಳಿಸಿದ್ದಾರೆ ಎಂಬ ಆರೋಪ ಭಾರೀ ರಾಜಕೀಯ ಹಾಗೂ ಸಾರ್ವಜನಿಕ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ‘4PM ನ್ಯೂಸ್ ನೆಟ್‌ವರ್ಕ್’ ಡಿಜಿಟಲ್ ಸುದ್ದಿ ಸಂಸ್ಥೆಯ ಪತ್ರಕರ್ತೆಯರಾದ ನಫೀಸಾ ಖಾನ್ ಹಾಗೂ ಶಾಹೀನ್ ಖಾನ್ ಈ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಭಾಗವಹಿಸಿದ್ದ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಯ ನೂತನ ಘಟಕ ಉದ್ಘಾಟನಾ ಸಮಾರಂಭದ ವರದಿಗೆ ತೆರಳಿದ್ದ ವೇಳೆ, ಮುಖ್ಯಮಂತ್ರಿಗೆ ಪ್ರಶ್ನೆ ಕೇಳಲು ಯತ್ನಿಸಿದಾಗ ಪೊಲೀಸರು ತಮ್ಮನ್ನು ಬಲವಂತವಾಗಿ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು ಎಂದು ಪತ್ರಕರ್ತೆಯರು ತಿಳಿಸಿದ್ದಾರೆ.
ಠಾಣೆಯ ಒಳಗಿನಿಂದಲೇ ವಿಡಿಯೋ ಮೂಲಕ ತಮ್ಮ ಮೇಲಾದ ದೌರ್ಜನ್ಯವನ್ನು ವಿವರಿಸಿದ ನಫೀಸಾ ಖಾನ್, ಕಣ್ಣೀರು ಹಾಕುತ್ತಾ, “ದೆಹಲಿ ಪೊಲೀಸರು ನಮ್ಮ ಮೇಲೆ ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ, ಧರ್ಮ ಕೇಳಿ ಥಳಿಸಿದ್ದಾರೆ. ನಾವು ಮುಸ್ಲಿಮರು, ನಮ್ಮ ಹೆಸರಿನಲ್ಲಿ ‘ಖಾನ್’ ಇದೆ ಎಂದು ತಿಳಿದ ನಂತರ ಎರಡು-ಮೂರು ಪಟ್ಟು ಹೆಚ್ಚು ಲಾಠಿಗಳಿಂದ ಹೊಡೆದರು.
‘ಮುಸ್ಲಿಮರಾಗಿದ್ದಕ್ಕೆ ಇನ್ನೂ ಮೂರು-ನಾಲ್ಕು ಲಾಠಿ ಏಟು ಹೆಚ್ಚಿಗೆ ಬೀಳುತ್ತವೆ’ ಎಂದು ನಿಂದಿಸಿ, ಬೆದರಿಕೆ ಹಾಕಿದರು. ಇವೆಲ್ಲವೂ ಸಾಕೇತ್ ಎಸ್‌ಎಚ್‌ಒ ದಿನೇಶ್ ಅವರ ಸಮ್ಮುಖದಲ್ಲೇ ನಡೆದಿದ್ದು, ಅವರು ನಗುತ್ತಾ ನಮ್ಮ ವಿರುದ್ಧ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದರು” ಎಂದು ಆಕ್ರೋಶ ಹೊರಹಾಕಿದ್ದಾರೆ. ಹಲ್ಲೆಯ ತೀವ್ರತೆಯಿಂದಾಗಿ ನಫೀಸಾ ತಾವಾಗಿಯೇ ನಡೆದಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದು, ಇತರರು ಅವರನ್ನು ಹಿಡಿದುಕೊಂಡು ಕರೆದೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಘಟನೆಯನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್ಸ್ ಸೇರಿದಂತೆ ಪ್ರಮುಖ ಪತ್ರಕರ್ತರ ಸಂಘಟನೆಗಳು ಹಾಗೂ ಕಾಂಗ್ರೆಸ್, ಆಪ್ ಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆಗ್ರಹಿಸಿವೆ. ಆದರೆ, ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ದೆಹಲಿ ಪೊಲೀಸರು, ವಿವಿಐಪಿ ಸಂಚಾರ ಮಾರ್ಗದಲ್ಲಿ ಸ್ಕೂಟರ್ ನಿಲ್ಲಿಸಿ ಅಡ್ಡಿಪಡಿಸಿದ್ದರಿಂದ ಅವರನ್ನು ವಿಚಾರಣೆಗೆ ಕರೆತರಲಾಯಿತೇ ಹೊರತು, ಹಲ್ಲೆ ನಡೆಸಲಾಗಿದೆ ಎಂಬುದು ಆಧಾರರಹಿತ ಮತ್ತು ಸುಳ್ಳು ಎಂದು ಸಮರ್ಥಿಸಿಕೊಂಡಿದ್ದಾರೆ.
