ರಾಯಚೂರು: ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಕೃಷಿ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಅನ್ನದಾತರ ನೆರವಿಗೆ ಧಾವಿಸಿ, ₹5 ಲಕ್ಷದವರೆಗಿನ ಕೃಷಿ ಸಾಲವನ್ನು ಸರ್ಕಾರ ತಕ್ಷಣವೇ ಮನ್ನಾ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ.
ಸಿಂಧನೂರಿನಲ್ಲಿ ‘ಬಳ್ಳಾರಿ ಚಲೋ’ ಪಾದಯಾತ್ರೆಯ ೩ನೇ ದಿನದ ಸಮಾರೋಪದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಳೆ ಕೊರತೆಯಿಂದಾಗಿ ರೈತರು ಎದುರಿಸುತ್ತಿರುವ ತೀವ್ರ ಸಂಕಷ್ಟಗಳ ಬಗ್ಗೆ ಚರ್ಚಿಸಲು ಸರ್ಕಾರ ಕೂಡಲೇ ವಿಶೇಷ ವಿಧಾನಮಂಡಲ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿದರು. ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ಹೂಳು ತುಂಬಿರುವ ಹಿನ್ನೆಲೆಯಲ್ಲಿ, ನೀರು ಸಂಗ್ರಹಕ್ಕಾಗಿ ನವಲಿ ಸಮತೋಲನ ಜಲಾಶಯ (ಬ್ಯಾಲೆನ್ಸಿಂಗ್ ರಿಸರ್ವಾಯರ್) ನಿರ್ಮಾಣಕ್ಕೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ₹14 ಕೋಟಿ ಬಿಡುಗಡೆ ಮಾಡಲಾಗಿತ್ತು; ಆದರೆ ಹಾಲಿ ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು. ಈ ಸಂಬಂಧ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆದಿದ್ದರೂ ಯಾವುದೇ ಪ್ರಗತಿಯಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಅವರು, ನವಲಿ ಜಲಾಶಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಪಟ್ಟುಹಿಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಟ್ಟು 3,655 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿದ ವಿಜಯೇಂದ್ರ, ಕಲ್ಯಾಣ ಕರ್ನಾಟಕ ಭಾಗವೊಂದರಲ್ಲೇ ಕಳೆದ ಮೂರು ವರ್ಷಗಳಲ್ಲಿ 936 ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂದರು. ಕಲ್ಬುರ್ಗಿಯಲ್ಲಿ 294, ಬೀದರ್‌ನಲ್ಲಿ 220, ರಾಯಚೂರಿನಲ್ಲಿ 160 ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ೮೦ಕ್ಕೂ ಹೆಚ್ಚು ರೈತರು ಬೆಳೆ ನಷ್ಟದಿಂದ ಸಾವನ್ನಪ್ಪಿದ್ದರೂ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡರು.
ಅಲ್ಲದೆ, ಬೆಂಬಲ ಬೆಲೆಯಡಿ ಬಿಳಿ ಜೋಳ ಖರೀದಿಸಿದ ಬಾಕಿ ಹಣ ₹145 ಕೋಟಿಯನ್ನು ಸರ್ಕಾರ ಈವರೆಗೂ ರೈತರಿಗೆ ಪಾವತಿಸದೆ ಸತಾಯಿಸುತ್ತಿದೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಡಾ. ಶಿವರಾಜ್ ಪಾಟೀಲ್, ದೊಡ್ಡನಗೌಡ ಪಾಟೀಲ್, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎಸ್. ಎಸ್. ಪಾಟೀಲ್ ನಡಹಳ್ಳಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
