ಕೆಪಿಎಸ್‌ಸಿ ಹಗರಣಕ್ಕೆಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆಯವರನ್ನು ಟಾರ್ಗೆಟ್ ಮಾಡುತ್ತಲೇ ಬಂದ ಹೆಚ್ ಡಿ ಕುಮಾರಸ್ವಾಮಿ ಮೊನ್ನೆಯಷ್ಟೇ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಮೊದಮೊದಲು ಪ್ರಿಯಾಂಕ್ ಖರ್ಗೆ ನೇರವಾಗಿ ಹಗರಣದಲ್ಲಿ ಭಾಗವಹಿಸಿದ್ದಾರೆ ಎನ್ನುವಂತೆ ಮಾತನಾಡಿದ್ದ ಕುಮಾರಣ್ಣ, ಅದನ್ನು ಪ್ರಿಯಾಂಕ್ ಖರ್ಗೆ ಸರಿಯಾಗಿ ಕೌಂಟರ್ ಮಾಡಿದ ನಂತರ ರಾಗ ಬದಲಾಯಿಸಿದ್ದರು.
“ನಾನು ಪ್ರಿಯಾಂಕ್ ಖರ್ಗೆಯವರು ನೇರವಾಗಿ ಹಗರಣದಲ್ಲಿ ಭಾಗವಹಿಸಿದ್ದಾರೆ ಎನ್ನುತ್ತಿಲ್ಲ. ಆದರೆ ಇಲಾಖೆಯ ಮುಖ್ಯಸ್ಥರಾಗಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎನ್ನುವುದು ನನ್ನ ಆಗ್ರಹ” ಎಂದು ಕುಮಾರಸ್ವಾಮಿ ಹೇಳಿದ್ದರ ಹಿಂದೆ ಪ್ರಿಯಾಂಕ್ ಖರ್ಗೆ ಈ ವಿಷಯವನ್ನು ಮಾಧ್ಯಮಗಳ ಎದುರು ಹ್ಯಾಂಡಲ್ ಮಾಡಿದ ರೀತಿಯನ್ನು ಸಾರಿ ಹೇಳುತ್ತಿತ್ತು. ಅವರು ಎಲ್ಲೂ ಕುಮಾರಸ್ವಾಮಿಯವರ ಆರೋಪಗಳಿಂದ ಕುಗ್ಗದೆ ಧೈರ್ಯದಿಂದಲೇ ಮಾಧ್ಯಮಗಳನ್ನು ಎದುರಿಸಿದ್ದರು, ಮತ್ತು ಸಾಕ್ಷಿಗಳನ್ನು ಒದಗಿಸಿದರೆ ನಾನು ರಾಜೀನಾಮೆ ಕೊಡಬಲ್ಲೆ ಎಂದಿದ್ದರು.
ಆದರೆ ಮೊದಲಿನಿಂದಲೂ ನನ್ನ ಬಳಿ ದಾಖಲೆ ಇದೆ, ದಾಖಲೆ ಇದೆ ಎಂದು ಹೇಳುವ ಕುಮಾರಣ್ಣ ಇದುವರೆಗೂ ಒಂದು ಪ್ರಕರಣವನ್ನೂ ದಡ ಮುಟ್ಟಿಸಿದ್ದು ಇಲ್ಲ. ಹೀಗಾಗಿಯೇ ಅವರನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಿಟ್ ಎಂಡ್ ರನ್ ಕುಮಾರಣ್ಣ ಎಂದೇ ಕರೆಯುತ್ತಾರೆ. ಪ್ರಿಯಾಂಕ್ ಖರ್ಗೆ ವಿಷಯದಲ್ಲೂ ಕುಮಾರಸ್ವಾಮಿಯವರು ಮಾಡಿದ್ದು ಇದನ್ನೇ.
ಆದರೆ ಇದ್ದಕ್ಕಿದ್ದ ಹಾಗೆ ಕುಮಾರಸ್ವಾಮಿ ಯಾಕೆ ಖರ್ಗೆಯವರ ಹಿಂದೆ ಬಿದ್ದರು ಎನ್ನುವುದನ್ನು ಕೂಡಾ ಇಲ್ಲಿ ಕೇಳಿಕೊಳ್ಳಬೇಕಿದೆ. ಬಿಜೆಪಿ ಪಾಲಿಗೆ ಜೆಡಿಎಸ್ ಹಳೇ ನೆಂಟನೇ ಆದರೂ, ಹಿಂದುತ್ವದೊಂದಿಗಿನ ಜೆಡಿಎಸ್ ಮತ್ತು ಕುಮಾರಸ್ವಾಮಿಯವರ ನಂಟು ಹೊಸದು. ಹೀಗಾಗಿಯೇ ಕುಮಾರಸ್ವಾಮಿ ಆರ್‌ಎಸ್‌ಎಸ್ ಕುಮ್ಮಕ್ಕಿನಿಂದಲೋ ಅಥವಾ ಸ್ವತಃ ಆರ್‌ಎಸ್‌ಎಸ್ ಜನರನ್ನು ಮೆಚ್ಚಿಲೆಂದೋ, ಸದಾ ಆರ್‌ಎಸ್‌ಎಸ್ ವಿರುದ್ಧ ಮಾತನಾಡುವ ಪ್ರಿಯಾಂಕ್ ಖರ್ಗೆಯವರ ಹಿಂದೆ ಬಿದ್ದಿದ್ದಾರೆ.
ಬೀಳುವುದೇನೋ ಬಿದ್ದರು, ಆದರೆ ಎಂದಿನಂತೆ ಸರಿಯಾದ ತಯಾರಿಯಿಲ್ಲದೆ ಹಿಟ್ ಎಂಡ್ ರನ್ ಮಾದರಿಯಲ್ಲಿ ಆರೋಪಗಳನ್ನು ಮಾಡುತ್ತಾ ಕಾಲ ಕಳೆದರು ಬಿಟ್ಟರೆ, ಸಾಕ್ಷ್ಯಗಳನ್ನೇ ಕೊಡಲಿಲ್ಲ. ಹಿಂದೆಯೂ ನನ್ನ ಬಳಿ ಪೆನ್‌ಡ್ರೈವ್ ಇದೆ ಅದರಲ್ಲಿ ಹಗರಣಗಳ ಸಾಕ್ಷಿಯಿದೆ ಎನ್ನುತ್ತಿದ್ದ ಕುಮಾರಸ್ವಾಮಿಯವರು ಕೊನೆಗೂ ಆ ಪೆನ್‌ಡ್ರೈವನ್ನು ಬಿಡುಗಡೆ ಮಾಡಲಿಲ್ಲ. ಆದರೆ ಬೇರೆಯವರು ಇನ್ಯಾವುದೋ ಪೆನ್‌ಡ್ರೈವ್ ಬಿಡುಗಡೆ ಮಾಡಿ ಹಾಸನ ರಾಜಕೀಯದ ದಿಕ್ಕನ್ನೇ ಬದಲಾಯಿಸಿದ್ದು ಬೇರೆಯದೇ ಕತೆ.
ಇದೆಲ್ಲದರ ನಡುವೆಯೂ ಅಚ್ಚರಿ ಮೂಡಿಸುವುದು ಕಾಂಗ್ರೆಸ್ಸಿನ ಇತರ ನಾಯಕರ ನಡೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಕಾಂಗ್ರೆಸ್ ನಾಯಕರು ಪ್ರಿಯಾಂಕ್ ಖರ್ಗೆಯವರ ಪರ ನಿಲ್ಲಲಿಲ್ಲ. ನಾಗೇಂದ್ರ ಅವರಿಗೆ ಸಿಕ್ಕ ಬೆಂಬಲ ಇಂದಿಗೂ ಪ್ರಿಯಾಂಕ್ ಖರ್ಗೆಯವರಿಗೆ ಪಕ್ಷದ ಒಳಗಿನಿಂದ ಸಿಗುತ್ತಿಲ್ಲ. ಅದು ಆರ್‌ಎಸ್‌ಎಸ್ ವಿಚಾರದಲ್ಲಿರಬಹುದು ಅಥವಾ ಕುಮಾರಣ್ಣನ ರಾಜಕೀಯದ ವಿಷಯದಲ್ಲಿರಬಹುದು.
ಇಲ್ಲಿ ಹಲ್ದ್ವಾನಿ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರಸ್ ಸಭೆಯಲ್ಲಿ ಪಕ್ಷದ ನಾಯಕರು ದನಿಯೆತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಕೂಡಾ ನೆನಪಿಸಿಕೊಳ್ಳಬಹುದು.
ಆರ್‌ಎಸ್‌ಎಸ್ ವಿಚಾರ ಬಂದಾಗಲೆಲ್ಲ ಕಾಂಗ್ರೆಸ್ ಒಂದು ಬಗೆಯ ಮೌನಕ್ಕೆ ಜಾರುವುದು ಹೊಸದೂ ಅಲ್ಲ. ಅದರ ನಾಯಕ ಸದಾ ಆರ್‌ಎಸ್‌ಎಸ್ ವಿರುದ್ಧ ಕಿಡಿಕಾರುತ್ತಿದ್ದರೆ, ಪಕ್ಷದೊಳಗಿನ ನಾಯಕರು ಅದರ ಕುರಿತು ಸಾಫ್ಟ್ ಕಾರ್ನರ್ ಹೊಂದಿರುವುದು ನಿಜಕ್ಕೂ ವೈರುಧ್ಯವಾಗಿ ಕಾಣುತ್ತದೆ.
