Home ದೇಶ ತ್ರಿಪುರಾ: ದನ ಕದ್ದಿರುವನೆಂದು ಅನುಮಾನಿಸಿ ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಕೊಂದ ಗುಂಪು

ತ್ರಿಪುರಾ: ದನ ಕದ್ದಿರುವನೆಂದು ಅನುಮಾನಿಸಿ ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಕೊಂದ ಗುಂಪು

0

ಅಗರ್ತಲಾ: ಜಾನುವಾರು ಕಳ್ಳತನದ ಶಂಕೆಯ ಮೇಲೆ 45 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಗುಂಪೊಂದು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ತ್ರಿಪುರಾದ ಖೋವಾಯಿ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಗಿಲಾತಲಿ ನಿವಾಸಿ ಜಲೀಲ್ ರೆಹಮಾನ್ ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿಯ ಪ್ರಕಾರ, ಗುರುವಾರ ನಸುಕಿನ ಜಾವ ಸುಮಾರು 4:30 ರಿಂದ 4:45 ರ ಸುಮಾರಿಗೆ ರೆಹಮಾನ್ ಬಾಗ್ಬಾರ್‌ನಿಂದ ತಮ್ಮ ಸ್ವಂತ ಹಣ ನೀಡಿ ಖರೀದಿಸಿದ್ದ ಎರಡು ಹಸುಗಳೊಂದಿಗೆ ಮನೆಗೆ ಹಿಂತಿರುಗುತ್ತಿದ್ದರು. ಆ ಸಂದರ್ಭದಲ್ಲಿ ಅವರ ದಾರಿ ತಡೆದ ಗುಂಪೊಂದು, ಅವರು ಕದ್ದ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಿ ಏಕಾಏಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ತೀವ್ರವಾಗಿ ಗಾಯಗೊಂಡ ರೆಹಮಾನ್ ಹೇಗೋ ತಮ್ಮ ಕುಟುಂಬಸ್ಥರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ, ಅವರನ್ನು ರಕ್ಷಿಸಲು ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರ ಮೇಲೂ ಆ ಗುಂಪು ಹಲ್ಲೆ ನಡೆಸಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕಲ್ಯಾಣಪುರ ಠಾಣಾ ಪೊಲೀಸರು ರಕ್ತದ ಮಡುವಿನಲ್ಲಿದ್ದ ರೆಹಮಾನ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರಾದರೂ, ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ಅವರು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ರೆಹಮಾನ್ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಪೊಲೀಸರೇ ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಂಡು ಹಲ್ಲೆಯಲ್ಲಿ ಭಾಗಿಯಾದ ದುಷ್ಕರ್ಮಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

You cannot copy content of this page

Exit mobile version