ದೆಹಲಿ: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ತಾವು ಭಾಗವಹಿಸಿದ್ದ ಸಾರ್ವಜನಿಕ ಸಭೆಯ ನಂತರ ನಡೆದಿದೆ ಎನ್ನಲಾದ ‘ಶುದ್ಧೀಕರಣ’ ಕೃತ್ಯವು ನೇರವಾಗಿ ಅಸ್ಪೃಶ್ಯತೆ ಆಚರಣೆಯ ಪ್ರಕರಣವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಲಿತರನ್ನು ಕೀಳಾಗಿ ಕಾಣಲು ಮತ್ತು ತಾವೇ ಶ್ರೇಷ್ಠರು ಎಂಬ ಜಾತಿವಾದಿ ಅಹಂಕಾರದ ಸಂದೇಶ ರವಾನಿಸಲು ಈ ಕೃತ್ಯ ಎಸಗಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಹೊಸದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಬಿ. ಆರ್. ಅಂಬೇಡ್ಕರ್ ಅವರ ಮಹಾಡ್ ಸತ್ಯಾಗ್ರಹವನ್ನು ಸ್ಮರಿಸಿದರು. “ಅಂದು ದಲಿತರಿಗೆ ಕುಡಿಯುವ ನೀರಿನ ಹಕ್ಕನ್ನು ನಿರಾಕರಿಸಿದಾಗ ಬಾಬಾಸಾಹೇಬರು ಮಹಾಡ್ ಕೆರೆಯ ಚಳವಳಿ ನಡೆಸಬೇಕಾಯಿತು. ಅಂತಹ ತಾರತಮ್ಯ ಮತ್ತು ಅಮಾನವೀಯ ಆಚರಣೆಯನ್ನು ದೇಶದಿಂದ ಸಂಪೂರ್ಣವಾಗಿ ತೊಡೆದುಹಾಕುವ ಉದ್ದೇಶದಿಂದಲೇ ಸಂವಿಧಾನದಲ್ಲಿ 17ನೇ ವಿಧಿಯನ್ನು (ಅಸ್ಪೃಶ್ಯತಾ ನಿವಾರಣೆ) ಸೇರಿಸಲಾಯಿತು. ನಮ್ಮ ಸಂವಿಧಾನದಲ್ಲಾಗಲಿ ಅಥವಾ ಭಾರತೀಯ ದಂಡ ಸಂಹಿತೆಯಲ್ಲಾಗಲಿ ‘ಶುದ್ಧೀಕರಣ’ ಎಂಬ ಶಬ್ದಕ್ಕೆ ಯಾವುದೇ ಮಾನ್ಯತೆಯಿಲ್ಲ” ಎಂದು ಖರ್ಗೆ ಪ್ರತಿಪಾದಿಸಿದರು.
ಉತ್ತರಾಖಂಡದ ಬಿಜೆಪಿ ಸರ್ಕಾರದ ಮೂಗಿನ ಕೆಳಗೆ, ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಭಾಗವಹಿಸಿದ ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಹೇಯ ಘಟನೆ ನಡೆದಿದ್ದರೂ ಆಡಳಿತವು ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಆತಂಕಕಾರಿ ಎಂದರು. “ರಾಷ್ಟ್ರ ಮಟ್ಟದ ಪ್ರಮುಖ ವಿರೋಧ ಪಕ್ಷದ ನಾಯಕನಿಗೆ ನಡೆದ ಇಂತಹ ಘಟನೆಯ ಬಗ್ಗೆಯೇ ಸರ್ಕಾರ ಕಣ್ಣುಮುಚ್ಚಿ ಕುಳಿತಿರುವಾಗ, ಇನ್ನು ಹಳ್ಳಿಗಳಲ್ಲಿ ಮತ್ತು ಕುಗ್ರಾಮಗಳಲ್ಲಿ ಬದುಕುತ್ತಿರುವ ಅಮಾಯಕ ಬಡ ದಲಿತರ ಪರಿಸ್ಥಿತಿ ಏನಾಗಬೇಡ? ಅವರ ಮೇಲೆ ನಡೆಯುವ ಇಂತಹ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವವರು ಯಾರು?” ಎಂದು ಖರ್ಗೆ ಖಾರವಾಗಿ ಪ್ರಶ್ನಿಸಿದರು.
