ಚಂಡೀಗಢ: ಪಂಜಾಬ್‌ನಲ್ಲಿ ಚುನಾವಣಾ ಆಯೋಗ ನಡೆಸಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಕರಡು ಪಟ್ಟಿಯಿಂದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಕೈಬಿಡಲಾಗಿದ್ದು, ಇದು ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಆಮ್ ಆದ್ಮಿ ಪಾರ್ಟಿ (ಆಪ್) ತೊರೆದು ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದ ತಮ್ಮ ವಿರುದ್ಧ ಪಂಜಾಬ್‌ನ ಭಗವಂತ್ ಮಾನ್ ನೇತೃತ್ವದ ಆಪ್ ಸರ್ಕಾರ ರಾಜಕೀಯ ಸೇಡಿನ ತಂತ್ರ ಅನುಸರಿಸಿದೆ ಎಂದು ಚಡ್ಡಾ ಗಂಭೀರ ಆರೋಪ ಮಾಡಿದ್ದಾರೆ.
ಆಗಸ್ಟ್ 13ರಂದು ಚುನಾವಣಾ ಆಯೋಗ ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ ರಾಘವ್ ಚಡ್ಡಾ ಅವರ ಹೆಸರಿನ ಮುಂದೆ ‘ಖಾಯಂ ಆಗಿ ಸ್ಥಳಾಂತರಗೊಂಡಿದ್ದಾರೆ’ (ಪರ್ಮನೆಂಟ್ಲಿ ಶಿಫ್ಟೆಡ್) ಎಂದು ನಮೂದಿಸಿ ಪಟ್ಟಿಯಿಂದ ತೆಗೆದುಹಾಕಲಾಗಿದೆ. 2022ರಲ್ಲಿ ಆಪ್ ಸಂಸದರಾಗಿ ಆಯ್ಕೆಯಾಗಿದ್ದ ಚಡ್ಡಾ, ಈ ವರ್ಷದ ಏಪ್ರಿಲ್‌ನಲ್ಲಿ ಬಿಜೆಪಿ ಸೇರಿದ್ದರು.
ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಜನಪ್ರತಿನಿಧಿಗಳು, ಸಾಂವಿಧಾನಿಕ ಹುದ್ದೆಗಳಲ್ಲಿರುವವರು ಹಾಗೂ ಸಾರ್ವಜನಿಕ ಗಣ್ಯರ ಹೆಸರುಗಳನ್ನು ಕರಡು ಪಟ್ಟಿಯಲ್ಲಿ ಉಳಿಸಿಕೊಳ್ಳಬೇಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ದಾಖಲೆ ಸಂಗ್ರಹಿಸಬೇಕು ಎಂಬ ನಿಯಮವಿದ್ದರೂ ಅದನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂದು ಚಡ್ಡಾ ಕಿಡಿಕಾರಿದ್ದಾರೆ.
ಕರಡು ಮತದಾರರ ಪಟ್ಟಿ ಆಪ್ ಸರ್ಕಾರದ ಖಾಸಗಿ ಸ್ವತ್ತಲ್ಲ ಎಂದಿರುವ ಅವರು, ಅಕ್ಟೋಬರ್‌ನಲ್ಲಿ ಪ್ರಕಟವಾಗಲಿರುವ ಅಂತಿಮ ಪಟ್ಟಿಯಲ್ಲಿ ಈ ತಪ್ಪನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಪಂಜಾಬ್ ಸರ್ಕಾರ ಮತ್ತು ಆಪ್ ಮುಖಂಡರು, ಮತದಾರರ ಪಟ್ಟಿ ಪರಿಷ್ಕರಣೆಯನ್ನು ಕೇಂದ್ರ ಚುನಾವಣಾ ಆಯೋಗವು ನೇಮಿಸಿದ ಮುಖ್ಯ ಚುನಾವಣಾಧಿಕಾರಿ (ಸಿಇಒ) ನಿರ್ವಹಿಸುತ್ತಾರೆಯೇ ವಿನಃ ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಘವ್ ಚಡ್ಡಾ ವಾಸ್ತವವಾಗಿ ದೆಹಲಿಯಲ್ಲಿ ವಾಸಿಸುತ್ತಿದ್ದಾರೆಯೇ ಹೊರತು ಪಂಜಾಬ್‌ನಲ್ಲಲ್ಲ; ಅವರು ತಮ್ಮ ಮತದಾರ ನೋಂದಣಿಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಅದಕ್ಕೆ ರಾಜ್ಯ ಸರ್ಕಾರವನ್ನು ಹೊಣೆ ಮಾಡುವುದು ಹಾಸ್ಯಾಸ್ಪದ ಎಂದು ಆಪ್ ವಕ್ತಾರರು ತಿರುಗೇಟು ನೀಡಿದ್ದಾರೆ.
ದೇಶಾದ್ಯಂತ ಎಸ್‌ಐಆರ್ ಪ್ರಕ್ರಿಯೆಯಡಿ ಸುಮಾರು 13.37 ಕೋಟಿ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದ್ದು, ಪಂಜಾಬ್ ಒಂದರಲ್ಲೇ ಶೇ. 9.7ರಷ್ಟು (ಸುಮಾರು 20.66 ಲಕ್ಷ) ಹೆಸರುಗಳನ್ನು ತೆಗೆದುಹಾಕಲಾಗಿದೆ. ಅಕ್ಟೋಬರ್ 12ರಂದು ಅಂತಿಮ ಪಟ್ಟಿ ಪ್ರಕಟವಾಗಲಿದ್ದು, ಸೆಪ್ಟೆಂಬರ್ 12ರವರೆಗೆ ಆಕ್ಷೇಪಣೆ ಮತ್ತು ತಿದ್ದುಪಡಿಗೆ ಕಾಲಾವಕಾಶವಿದೆ.
