ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂನ (ಟಿಟಿಡಿ) ಶ್ರೀವಾರಿ ದೇಗುಲದ ಉಪ ಕಾರ್ಯನಿರ್ವಹಣಾಧಿಕಾರಿ (ಡೆಪ್ಯುಟಿ ಇಒ) ಲೋಕನಾಥಂ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿಕೊಂಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ತಿರುಪತಿಯಲ್ಲಿರುವ ಅವರ ನಿವಾಸ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ಭರ್ಜರಿ ದಾಳಿ ನಡೆಸಿದೆ. ದಾಳಿಯ ವೇಳೆ ಸುಮಾರು ₹5 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿಗಳು ಪತ್ತೆಯಾಗಿವೆ.
ತಿರುಪತಿ ಜಿಲ್ಲೆಯ ಏರ್ಪೇಡು ಮಂಡಲದ ಗುಂಡ್ಲಕಂಡ್ರಿಗ ಗ್ರಾಮದ ಮೂಲದವರಾದ ಲೋಕನಾಥಂ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಸಿಬಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದೆ. ತಿರುಪತಿ ಲಡ್ಡು ಕಲಬೆರಕೆ ಪ್ರಕರಣದ ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದ ಸಿಬಿಐ, ಟಿಟಿಡಿಯ ಹಲವು ನೌಕರರ ಅಕ್ರಮ ಆಸ್ತಿಯ ಕುರಿತು ಆಂಧ್ರಪ್ರದೇಶ ಎಸಿಬಿಗೆ ಮಹತ್ವದ ಮಾಹಿತಿ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ಈ ಹಿಂದೆ ಟಿಟಿಡಿ ಅಧ್ಯಕ್ಷರಾಗಿದ್ದ ವೈ.ವಿ. ಸುಬ್ಬಾರೆಡ್ಡಿ ಅವರ ಆಪ್ತ ಸಹಾಯಕ ಚಿನ್ನ ಅಪ್ಪಣ್ಣ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿತ್ತು. ಆ ತನಿಖೆಯ ಮುಂದುವರಿದ ಭಾಗವಾಗಿ ಸಿಕ್ಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಇದೀಗ ಲೋಕನಾಥಂ ಅವರ ಮೇಲೂ ದಾಳಿ ನಡೆದಿದೆ.
ದಾಳಿಯ ವೇಳೆ ಅಧಿಕಾರಿಯ ಪತ್ನಿಯ ಹೆಸರಿನಲ್ಲಿರುವ ಪಿಕೆ ಲೇಔಟ್‌ನ ಬೃಹತ್ ಕಟ್ಟಡ, ಗೊಲ್ಲವಾನಿಗುಂಟದಲ್ಲಿರುವ ಕಟ್ಟಡ ಸಮೇತ ಎರಡು ನಿವೇಶನಗಳು, ವಡಮಾಲಪೇಟೆಯ ಪಾದಿರೇಡು ಅರಣ್ಯಂನಲ್ಲಿರುವ ಒಂದು ನಿವೇಶನ ಹಾಗೂ ಪುತ್ರನ ಹೆಸರಿನಲ್ಲಿ ಶ್ರೀನಿವಾಸ ನಗರದಲ್ಲಿರುವ ನಿವೇಶನದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಇದಲ್ಲದೆ ಅಧಿಕಾರಿ ಮತ್ತು ಅವರ ಪುತ್ರನ ಹೆಸರಿನಲ್ಲಿದ್ದ ನಾಲ್ಕು ಫಿಕ್ಸೆಡ್ ಡೆಪಾಸಿಟ್‌ಗಳು, ಬಾವ-ಮೈದುನರ ಮನೆಗಳಲ್ಲಿ ನಡೆಸಿದ ಶೋಧದ ವೇಳೆ ಪತ್ತೆಯಾದ ₹31.98 ಲಕ್ಷ ಮೌಲ್ಯದ ಜಂಟಿ ಆಸ್ತಿ ಪತ್ರಗಳು, 2 ಕೆಜಿ ಚಿನ್ನ, 6.5 ಕೆಜಿ ಬೆಳ್ಳಿ ಹಾಗೂ ₹12.5 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳ ಶೋಧ ಕಾರ್ಯ ಮುಂದುವರಿದಿದೆ.
