Home ದೆಹಲಿ ಚುನಾವಣಾ ಆಯೋಗದ ಕುರಿತು ಸೋಷಿಯಲ್‌ ಮೀಡಿಯಾ ಪೋಸ್ಟ್: ನಿವೃತ್ತ ಅಧಿಕಾರಿ ಆಶೀಶ್ ಜೋಶಿಯವರನ್ನು 9 ಗಂಟೆಗಳ...

ಚುನಾವಣಾ ಆಯೋಗದ ಕುರಿತು ಸೋಷಿಯಲ್‌ ಮೀಡಿಯಾ ಪೋಸ್ಟ್: ನಿವೃತ್ತ ಅಧಿಕಾರಿ ಆಶೀಶ್ ಜೋಶಿಯವರನ್ನು 9 ಗಂಟೆಗಳ ಕಾಲ ವಿಚಾರಣೆ ಮಾಡಿದ ಪೊಲೀಸರು

0

ದೆಹಲಿ: ಕೇಂದ್ರ ಚುನಾವಣಾ ಆಯೋಗದ (ಇಸಿಐ) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಹಿರಿಯ ಅಧಿಕಾರಿ ಆಶೀಶ್ ಜೋಶಿ ಅವರನ್ನು ದೆಹಲಿ ಪೊಲೀಸರ ಸ್ಪೆಷಲ್ ಸೆಲ್ ಬುಧವಾರ ಬರೋಬ್ಬರಿ ಒಂಬತ್ತು ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆಯ ನಂತರ ಸಂಜೆ ಅವರನ್ನು ಬಿಡುಗಡೆ ಮಾಡಿ, ಪೊಲೀಸರೇ ವಾಹನದಲ್ಲಿ ಮನೆಗೆ ತಲುಪಿಸಿದ್ದಾರೆ.

ದೂರಸಂಪರ್ಕ ಇಲಾಖೆಯಲ್ಲಿ ಕಂಟ್ರೋಲರ್ ಆಫ್ ಕಮ್ಯುನಿಕೇಷನ್ಸ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಜೋಶಿ ಅವರನ್ನು ಚಾಣಕ್ಯಪುರಿಯ ನೆಹರು ಪಾರ್ಕ್‌ನಲ್ಲಿ ಬುಧವಾರ ಬೆಳಗಿನ ವಾಯುವಿಹಾರದ ವೇಳೆ ಸ್ಪೆಷಲ್ ಸೆಲ್‌ನ ಕೌಂಟರ್ ಇಂಟೆಲಿಜೆನ್ಸ್ (ಸಿಐ) ಯುನಿಟ್ ವಶಕ್ಕೆ ಪಡೆದಿತ್ತು. ಗಲಭೆ ಪ್ರಚೋದನೆಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 192ರ ಅಡಿಯಲ್ಲಿ ಎರಡು ದಿನಗಳ ಹಿಂದೆ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿತ್ತು. ಇಸಿಐ ಕುರಿತು ಅವರು ಮಾಡಿದ್ದ ಪೋಸ್ಟ್‌ಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಲಾಗಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿಕೊಂಡು ಪರಿಶೀಲಿಸಿದ ಬಳಿಕ ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬುಧವಾರ ಬೆಳಿಗ್ಗೆ ಈ ವಿಷಯವನ್ನು ಎಕ್ಸ್‌ನಲ್ಲಿ ಬಹಿರಂಗಪಡಿಸಿದ್ದ ಕಾಂಗ್ರೆಸ್ ಮುಖಂಡ ಸಂದೀಪ್ ದೀಕ್ಷಿತ್, ನಿವೃತ್ತ ಅಧಿಕಾರಿಯನ್ನು ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ ಸಿಐ ಕಚೇರಿಯ ಹೊರಗೆ ಸಾರ್ವಜನಿಕರು ಜಮಾಯಿಸಿ ಜೋಶಿ ಬಿಡುಗಡೆಗೆ ಆಗ್ರಹಿಸಿದ್ದರು. ಸಂಜೆ 7 ಗಂಟೆ ಸುಮಾರಿಗೆ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆಶೀಶ್ ಜೋಶಿ, ತಾವು ಸುರಕ್ಷಿತವಾಗಿ ಮನೆ ತಲುಪಿದ್ದು ಉಳಿದ ವಿವರಗಳನ್ನು ಶೀಘ್ರವೇ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

You cannot copy content of this page

Exit mobile version