Home ಬೆಂಗಳೂರು ಪಡಿತರ ಕಳ್ಳಸಾಗಣೆದಾರರೊಂದಿಗೆ ಸರ್ಕಾರ ಹೊಂದಾಣಿಕೆ: ಬ್ರಿಜೇಶ್‌ ಕಾಳಪ್ಪ ಆರೋಪ

ಪಡಿತರ ಕಳ್ಳಸಾಗಣೆದಾರರೊಂದಿಗೆ ಸರ್ಕಾರ ಹೊಂದಾಣಿಕೆ: ಬ್ರಿಜೇಶ್‌ ಕಾಳಪ್ಪ ಆರೋಪ

0

ಬೆಂಗಳೂರು: ಬಡವರಿಗೆ ಸೇರಬೇಕಾದ ಅನ್ನಭಾಗ್ಯದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇದು ಪಡಿತರ ಕಳ್ಳಸಾಗಣೆದಾರರೊಂದಿಗೆ ಸರ್ಕಾರ ಮಾಡಿಕೊಂಡಿಕೊಂಡಿರುವ ಹೊಂದಾಣಿಕೆ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ಹಾಗೂ ಹಿರಿಯ ವಕೀಲ ಬ್ರಿಜೇಶ್‌ ಕಾಳಪ್ಪ ಆರೋಪಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬ್ರಿಜೇಶ್‌ ಕಾಳಪ್ಪ ಅವರು, ಅನ್ನಭಾಗ್ಯ ಯೋಜನೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮಗಳಿಗೆ ಸರ್ಕಾರ ಶೀಘ್ರವಾಗಿ ಕಡಿವಾಣ ಹಾಕಬೇಕು. ಇಲ್ಲವಾದರೆ ಆಮ್‌ ಆದ್ಮಿ ಪಾರ್ಟಿಯು ದೊಡ್ಡ ಮಟ್ಟದ ಚಳವಳಿ ನಡೆಸಲಿದೆ ಎಂದು ಎಚ್ಚರಿಸಿದರು.

ಬಡವರಿಗೆ ಸೇರಬೇಕಾದ ಅನ್ನಭಾಗ್ಯದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಟನ್‌ಗಟ್ಟಲೆ ಅನ್ನಭಾಗ್ಯ ಅಕ್ಕಿಯನ್ನು ನೆರೆರಾಜ್ಯಗಳಾದ ಗೋವಾ, ಮಹಾರಾಷ್ಟ್ರಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ. ಸರ್ಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು 40% ಕಮಿಷನ್‌ ತೆಗೆದುಕೊಂಡು ಸುಮ್ಮನಾಗುತ್ತಿದೆ. ಸರ್ಕಾರದ ಕಮಿಷನ್‌ ದಾಹಕ್ಕೆ ಬಡವರು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಹಣಕ್ಕಾಗಿ ಜನರ ಹಿತಾಸಕ್ತಿಯನ್ನು ಬಲಿಕೊಡುತ್ತಿರುವ ಜನವಿರೋಧಿ ಭ್ರಷ್ಟ ಸರ್ಕಾರವಿದು ಎಂದು ಆರೋಪಿಸಿದರು.

ಅನ್ನಭಾಗ್ಯ ಯೋಜನೆಯ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದಕ್ಕೆ ಸಂಬಂಧಿಸಿ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 800ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2020-21ರಲ್ಲಿ 65, 2021-22ರಲ್ಲಿ 472 ಹಾಗೂ 2022-23ರಲ್ಲಿ ಈವರೆಗೆ 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ದಾಖಲಾಗುತ್ತಿದ್ದರೂ ಸರ್ಕಾರ ಮಾತ್ರ ಅಕ್ರಮ ತಡೆಯಲು ವ್ಯವಸ್ಥೆಗೆ ಯಾವುದೇ ಬದಲಾವಣೆ ತಂದಿಲ್ಲ. ಬದಲಾಗಿ, ಕಮಿಷನ್‌ ಲೂಟಿ ಮಾಡಲು ಇದನ್ನು ದಾರಿ ಮಾಡಿಕೊಂಡಿದೆ ಎಂದು ಹೇಳಿದರು.

ಪಡಿತರ ಕಳ್ಳಸಾಗಣೆದಾರರೊಂದಿಗೆ ಸರ್ಕಾರ ಮಾಡಿಕೊಂಡಿಕೊಂಡಿರುವ ಹೊಂದಾಣಿಕೆಯಿಂದಾಗಿ ಕರ್ನಾಟಕದಲ್ಲಿ ಅಪೌಷ್ಟಿಕತೆ ಹಾಗೂ ಮಕ್ಕಳ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ರಾಜ್ಯದ 11,961 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಹಾಗೂ 3,64,614 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೇ ತಿಳಿಸಿದೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನವು 107ಕ್ಕೆ ಕುಸಿದು, ಪಾಕಿಸ್ತಾನಕ್ಕಿಂತಲೂ ಕಳಪೆ ಸ್ಥಾನ ಪಡೆದಿರುವುದರಲ್ಲಿ ಕರ್ನಾಟಕದ ಪಾಲು ದೊಡ್ಡದಿದ್ದು, ಭ್ರಷ್ಟ ಬಿಜೆಪಿ ಸರ್ಕಾರವು ಇದರ ನೈತಿಕ ಹೊಣೆ ಹೊರಬೇಕು ಎಂದು ಸರ್ಕಾರದ ವಿರುದ್ಧ ಬ್ರಿಜೇಶ್‌ ಕಾಳಪ್ಪ ವಾಗ್ದಾಳಿ ನಡೆಸಿದರು.

You cannot copy content of this page

Exit mobile version