Friday, June 21, 2024

ಸತ್ಯ | ನ್ಯಾಯ |ಧರ್ಮ

ಸರ್ಕಾರದ ಗ್ಯಾರೆಂಟಿಗಳು ಉಚಿತವೂ ಅಲ್ಲ, ಆತ್ಮಗೌರವಕ್ಕೆ ಧಕ್ಕೆ ತರುವಂತವೂ ಅಲ್ಲ!

ನಿಜವಾದ ಫಲಾನುಭವಿಗಳಾದ ಬಡವರ್ಗದ ಜನರಿಗೆ ಸರಕಾರದ ಯೋಜನೆಗಳನ್ನು ತಲುಪಿಸಲು ಮಧ್ಯಮ ಮತ್ತು ಮೇಲ್ವರ್ಗದ ಜನರು ಸ್ವಯಂಪ್ರೇರಿತರಾಗಿ ಈ ಅನುಕೂಲಗಳನ್ನು ಬಿಟ್ಟುಕೊಡುವುದರಿಂದ ತಮ್ಮ ನೈತಿಕ ಹೊಣೆಗಾರಿಕೆಯನ್ನು ಕಾಪಾಡಿಕೊಳ್ಳಬಹುದು-ಡಾ. ಸುಶಿ ಕಾಡನಕುಪ್ಪೆ, ದಂತ ವೈದ್ಯರು

ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಮತ್ತು ಉಚಿತ ಬಸ್ ಪ್ರಯಾಣದಂತಹ ವ್ಯವಸ್ಥೆಗಳು ಒಂದು ಅಭಿವೃದ್ಧಿಶೀಲ ಸಮಾಜದ ಏಳಿಗೆಗೆ ಅತ್ಯಗತ್ಯವಾಗಿ ಬೇಕಾಗಿರುವ ಸಾಮಾಜಿಕ ಪಾಲಿಸಿ ಕ್ರಮಗಳಾಗಿವೆ. ಬಡತನ ರೇಖೆಯ ಕೆಳಗಿರುವ ಪ್ರಜೆಗಳಿಗೆ ಅವರ ತೆರಿಗೆ ಹಣದ ಸಂಗ್ರಹದಿಂದ ಒದಗಿಸುವ ಸಾಮೂಹಿಕ ಸೌಕರ್ಯಗಳಾದ ರಸ್ತೆ, ಅಣೆಕಟ್ಟು, ಸೇತುವೆ ಮುಂತಾದವುಗಳಷ್ಟೆ ಅಲ್ಲದೆ, ಅವರ ಏಳಿಗೆಗೆ ಬೇಕಾಗುವ ಕೌಟುಂಬಿಕ ಕ್ಷಮತೆಯ ಪರಿಸರವನ್ನು ರೂಪಿಸುವುದೂ ಸರ್ಕಾರದ ಕರ್ತವ್ಯವಾಗಿರುತ್ತದೆ.

ಕೆಳ ಮಧ್ಯಮ ಆದಾಯದ ವರ್ಗಕ್ಕೆ ಸೇರುವ ನಮ್ಮಂತಹ ದೇಶಗಳಲ್ಲಿ ಪ್ರಜೆಗಳ ಕಿಸೆಗೆ ನೇರ ಹಣ ವರ್ಗಾವಣೆ ಮಾಡುವ ಕ್ರಮವನ್ನು ಪ್ರಯೋಗಿಸಿದ ಹಲವು ಸಮುದಾಯ ಆರೋಗ್ಯ ವಿಜ್ಞಾನದ ಅಧ್ಯಯನಗಳಿವೆ. ನಿಕಾರಾಗುವ, ಮಲಾವಿ, ಫಿಲಿಫೈನ್ಸ್, ಆಫ್ಘಾನಿಸ್ತಾನ ಮತ್ತು ಕೆನ್ಯಾದಲ್ಲಿ ನಡೆಸಿದ ಅಧ್ಯಯನಗಳು ಸ್ವಲ್ಪ ಪ್ರಮಾಣದ ನೇರ ಹಣ ಸಂದಾಯದ ಉಪಯೋಗಗಳನ್ನು ದಾಖಲಿಸಿವೆ. ಈ ಅಧ್ಯಯನಗಳ ಆಧಾರದ ಮೇಲೆ ವಿಶ್ವ ಬ್ಯಾಂಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ನೇರ ಹಣ ಸಂದಾಯದ ಕ್ರಮಗಳನ್ನು ಕೆಳ ಮತ್ತು ಕೆಳ-ಮಧ್ಯಮ ವರ್ಗದ ದೇಶಗಳಲ್ಲಿನ ಬಡತನ ನಿರ್ಮೂಲನೆಯ ಒಂದು ಕ್ರಮವನ್ನಾಗಿ ಗುರುತಿಸಿವೆ. ಈ ರೀತಿಯ ನಿರಂತರ ಅಧ್ಯಯನಗಳ ಫಲಿತಾಂಶಗಳು ಈ ಕ್ರಮಗಳ ಬಗ್ಗೆ ಸಮಾಜದಲ್ಲಿ ಚಾಲ್ತಿಯಲ್ಲಿದ್ದ ಟೀಕೆಗಳನ್ನು (‘ಬಿಟ್ಟಿ ಭಾಗ್ಯ’, ‘ಜನ ಸೋಮಾರಿಗಳಾಗುತ್ತಾರೆ’ ಇತ್ಯಾದಿ) ಸುಳ್ಳಾಗಿಸಿದವು. ಉದ್ಯೋಗ ಖಾತ್ರಿ, ವಿಮೆ, ಇತರ ಸರ್ಕಾರದ ನೇರವಾಗಿ ಹಣದ ರೂಪದಲ್ಲಿ ಸಂದಾಯವಾಗದ ಯೋಜನೆಗಳ ಜೊತೆಗೆ ಹಣ ಸಂದಾಯದ ಕ್ರಮವು ಹೆಚ್ಚು ಪರಿಣಾಮಕಾರಿಯಾಗಿದ್ದವು ಎಂಬುದನ್ನು ತಿಳಿಸುತ್ತವೆ. ಅದರಲ್ಲೂ ಮನೆಯನ್ನು ನಡೆಸುವ ಹೆಣ್ಣು ಮಕ್ಕಳಿಗೆ ನೇರ ಹಣ ಸಂದಾಯದಿಂದ ಅತಿ ಹೆಚ್ಚು ಅನುಕೂಲವಾಗಿರುವುದು ಸಾಬೀತಾಗಿದೆ. ಇದರಿಂದ ಕುಟುಂಬಕ್ಕೆ ತಕ್ಷಣದ, ಮಧ್ಯಂತರ ಕಾಲದ ಮತ್ತು ದೀರ್ಘಕಾಲದ ಅನುಕೂಲಗಳಾಗುತ್ತವೆ ಎಂದು ಸಮುದಾಯ ಆರೋಗ್ಯ ವಿಜ್ಞಾನದ ಅಧ್ಯಯನಗಳು ತಿಳಿಸುತ್ತವೆ. ಮುಖ್ಯವಾಗಿ ಬಡತನ ಸ್ವಲ್ಪಮಟ್ಟಿಗಾದರೂ ಸುಧಾರಿಸುವುದು, ಮಕ್ಕಳ ಶಾಲಾ ಹಾಜರಾತಿ ಮತ್ತು ದಾಖಲಾತಿಯಲ್ಲಿ ಸುಧಾರಣೆ, ಬಾಲ ಕಾರ್ಮಿಕ ಪದ್ಧತಿಯ ಇಳಿಕೆ, ಮಕ್ಕಳ ಅಪೌಷ್ಟಿಕತೆಯ ನಿವಾರಣೆ ಮತ್ತು ಕುಟುಂಬದ ಸಮತೋಲಿತ ಆಹಾರ ಸೇವನೆಯ ಹೆಚ್ಚಳಿಕೆ ಕಂಡುಬಂದಿದೆ. ಇದರ ಪರಿಣಾಮವಾಗಿ ಆ ಸಮುದಾಯದ, ಅದರ ಮೂಲಕ ಆ ಸಮಾಜದ ಅಭಿವೃದ್ಧಿಯಲ್ಲಿ ಗಣನೀಯ ಸುಧಾರಣೆಯನ್ನು ಕಾಣಬಹುದು.

ಯಾವುದೇ ಪಾಲಿಸಿ ಕ್ರಮಗಳ ಯಶಸ್ಸು ಅವುಗಳ ಅನುಷ್ಟಾನದ ಕ್ಷಮತೆಯ ಮೇಲೆ ಅವಲಂಬಿತವಾಗಿರುತ್ತದೆ. ನಾವು ಇಂತಹ ಅತ್ಯಗತ್ಯವಾದ ಕ್ರಮಗಳ ಬಗ್ಗೆ ನಮ್ಮ ಅಜ್ಞಾನವನ್ನು ಪ್ರದರ್ಶನ ಮಾಡದೆ, ಕುಹಕ ನುಡಿಗಳನ್ನು ಬದಿಗಿರಿಸಿ, ಸರ್ಕಾರವು ಇದರ ಅನುಷ್ಟಾನವನ್ನು ಸಮರ್ಪಕವಾಗಿ ಮಾಡುತ್ತಿದೆಯೇ ಎಂದು ಹದ್ದಿನ ಕಣ್ಣಿಡೋಣ. ನಿಜವಾದ ಫಲಾನುಭವಿಗಳಾದ ಬಡವರ್ಗದ ಜನರಿಗೆ ಈ ಯೋಜನೆಗಳನ್ನು ತಲುಪಿಸಲು ಮಧ್ಯಮ ಮತ್ತು ಮೇಲ್ವರ್ಗದ ಜನರು ಸ್ವಯಂಪ್ರೇರಿತರಾಗಿ ಈ ಅನುಕೂಲಗಳನ್ನು ಬಿಟ್ಟುಕೊಡುವುದರಿಂದ ತಮ್ಮ ನೈತಿಕ ಹೊಣೆಗಾರಿಕೆಯನ್ನು ಕಾಪಾಡಿಕೊಳ್ಳಬಹುದು.

ಡಾ. ಸುಶಿ ಕಾಡನಕುಪ್ಪೆ, MDS

ಬೆಂಗಳೂರಿನ ವಿ.ಎಸ್.ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಾರ್ವಜನಿಕ ಆರೋಗ್ಯ ದಂತವೈದ್ಯಕೀಯ ವಿಭಾಗದಲ್ಲಿ  ಸಹ ಪ್ರಾಧ್ಯಾಪಕಿಯಾಗಿದ್ದಾರೆ.

ಮೊ.9535205012

ಇದನ್ನೂ ಓದಿ-ಆ ಅಪಪ್ರಚಾರಗಳಿಗೆ ಆಘಾತಗೊಳ್ಳುವ ಮುನ್ನ..

Related Articles

ಇತ್ತೀಚಿನ ಸುದ್ದಿಗಳು