ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಯನ್ನು ಮಹಾರಾಷ್ಟ್ರ ಪೊಲೀಸರು ಪತ್ತೆಹಚ್ಚಿರುವುದನ್ನು ಉಲ್ಲೇಖಿಸಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು “ಡ್ರಗ್ಸ್ ಸರ್ಕಾರ” ಎಂದು ಲೇವಡಿ ಮಾಡಿದರು.
ರಾಜ್ಯದ ಗೃಹ ಇಲಾಖೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆಯೇ ಎಂದು ಪ್ರಶ್ನಿಸಿದ ಅವರು, ಗುಪ್ತಚರ ಇಲಾಖೆ ಮತ್ತು ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಗೃಹ ಸಚಿವ ಜಿ. ಪರಮೇಶ್ವರ್ ಅವರು ಕೇವಲ ನೆಪಗಳನ್ನು ಹೇಳುತ್ತಾ ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, “ನಿಮಗೆ ಸಾಧ್ಯವಾಗದಿದ್ದರೆ ಪೀಠದಿಂದ ಇಳಿಯಿರಿ, ಸಮರ್ಥರಾದವರು ಆ ಜವಾಬ್ದಾರಿ ವಹಿಸಿಕೊಳ್ಳಲಿ” ಎಂದು ಆಗ್ರಹಿಸಿದರು.
ಡ್ರಗ್ಸ್ ಮಾಫಿಯಾಗೆ ಸರ್ಕಾರವೇ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಅವರು ಆರೋಪಿಸಿದರು. ಇದೇ ವೇಳೆ ಬಿಜೆಪಿಯು ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸುವ “ಗೊತ್ತಿಲ್ಲ ಗೃಹ ಸಚಿವ ನೀವಿನ್ನು ರಾಜೀನಾಮೆ ನೀಡಿ ಮನೆಗೆ ಹೋಗಿ” ಎಂಬ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ನಕ್ಸಲ್ ನಿರೋಧಕ ಪಡೆಯ ಕೆಲಸ ಈಗ ಮುಗಿದಿರುವುದರಿಂದ, ಅವರನ್ನು “ಡ್ರಗ್ಸ್ ನಿರೋಧಕ ಪಡೆ”ಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೈಫಲ್ಯಕ್ಕೆ ಮುಖ್ಯಮಂತ್ರಿಗಳು ಅಥವಾ ಗೃಹ ಸಚಿವರು ಯಾರು ರಾಜೀನಾಮೆ ನೀಡುತ್ತಾರೆ ಎಂಬದನ್ನು ಅವರೇ ನಿರ್ಧರಿಸಲಿ ಎಂದು ನಾರಾಯಣಸ್ವಾಮಿ ಸವಾಲು ಹಾಕಿದರು.
