ಭಾರತೀಯ ಕುಟುಂಬಗಳ ಬಳಿ ಇರುವ ಚಿನ್ನದ ಮೌಲ್ಯವು ದೇಶದ ಒಟ್ಟು ಜಿಡಿಪಿ (GDP) ಮೌಲ್ಯವನ್ನೇ ಮೀರಿಸಿದೆ ಎಂದು ಮೋರ್ಗನ್ ಸ್ಟಾನ್ಲಿ ವರದಿ ತಿಳಿಸಿದೆ. ಪ್ರಸ್ತುತ ಭಾರತೀಯರ ಬಳಿ ಸುಮಾರು 34,600 ಟನ್ ಚಿನ್ನವಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಇದರ ಒಟ್ಟು ಮೌಲ್ಯ 5 ಲಕ್ಷ ಕೋಟಿ ಡಾಲರ್‌ಗಿಂತಲೂ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.
ಇದಕ್ಕೆ ಹೋಲಿಸಿದರೆ ಭಾರತದ ಪ್ರಸ್ತುತ ಜಿಡಿಪಿ ಮೌಲ್ಯ ಸುಮಾರು 4.1 ಲಕ್ಷ ಕೋಟಿ ಡಾಲರ್‌ಗಳಷ್ಟಿದೆ. ಭಾರತೀಯರು ಚಿನ್ನವನ್ನು ಕೇವಲ ಆಭರಣವಾಗಿ ಮಾತ್ರವಲ್ಲದೆ, ಆಪತ್ಕಾಲದ ಉಳಿತಾಯ ಮತ್ತು ಭಾವನಾತ್ಮಕ ಆಸ್ತಿಯನ್ನಾಗಿ ನೋಡುತ್ತಿದ್ದಾರೆ. ದೇಶದ ಮನೆಗಳಲ್ಲಿರುವ ಒಟ್ಟು ಚಿನ್ನದ ಪೈಕಿ ಶೇ. 75ರಿಂದ 80ರಷ್ಟು ಭಾಗ ಆಭರಣಗಳ ರೂಪದಲ್ಲೇ ಇದೆ ಎಂಬುದು ವಿಶೇಷ.
ಆದರೆ ಈ ಬೃಹತ್ ಪ್ರಮಾಣದ ಚಿನ್ನದ ಸಂಪತ್ತು ಆಭರಣಗಳ ರೂಪದಲ್ಲಿ ಲಾಕರ್ ಅಥವಾ ಮನೆಯಲ್ಲಿ ಉಳಿದಿರುವುದು ದೇಶದ ಆರ್ಥಿಕ ವ್ಯವಸ್ಥೆಗೆ ನೇರವಾಗಿ ಬಳಕೆಯಾಗುತ್ತಿಲ್ಲ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಜಾಗೃತಿ ಮೂಡುತ್ತಿದ್ದು, ಭೌತಿಕ ಚಿನ್ನದ ಬದಲು ಗೋಲ್ಡ್ ಇಟಿಎಫ್, ಸಾವರಿನ್ ಗೋಲ್ಡ್ ಬಾಂಡ್ ಮತ್ತು ಡಿಜಿಟಲ್ ಗೋಲ್ಡ್ ಕಡೆಗೆ ಹೂಡಿಕೆದಾರರು ಮುಖ ಮಾಡುತ್ತಿದ್ದಾರೆ.
ಜಾಗತಿಕವಾಗಿ ಅನಿಶ್ಚಿತತೆ ನೆಲೆಸಿರುವ ಕಾರಣ ಆರ್‌ಬಿಐ ಸೇರಿದಂತೆ ವಿವಿಧ ದೇಶಗಳ ಕೇಂದ್ರ ಬ್ಯಾಂಕ್‌ಗಳು ಸಹ ತಮ್ಮ ಚಿನ್ನದ ನಿಧಿಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಡಾಲರ್ ಮೇಲಿನ ಅವಲಂಬನೆ ತಗ್ಗಿಸಲು ದೇಶಗಳು ಚಿನ್ನದ ಮೊರೆ ಹೋಗುತ್ತಿರುವುದು ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಇದೇ ಸಮಯದಲ್ಲಿ ಬೆಳ್ಳಿ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫ್ಯೂಚರ್ ಮಾರುಕಟ್ಟೆಯಲ್ಲಿ ಲಾಭ ಗಳಿಕೆಯ ಉದ್ದೇಶದಿಂದ ಬೆಳ್ಳಿ ಬೆಲೆ ಸೋಮವಾರ ಗಣನೀಯವಾಗಿ ಕುಸಿತ ಕಂಡಿದೆ. ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಕೆಜಿ ಬೆಳ್ಳಿ ಬೆಲೆ ಒಂದೇ ದಿನ ಸುಮಾರು 7,124 ರೂಪಾಯಿಗಳಷ್ಟು ಇಳಿಕೆಯಾಗಿದೆ.
ಆದರೆ ಸ್ಪಾಟ್ ಮಾರುಕಟ್ಟೆಯಲ್ಲಿ ಬೆಳ್ಳಿಯ ದರ ಏರಿಕೆ ಮುಂದುವರಿದಿದ್ದು, ದೆಹಲಿಯಲ್ಲಿ 2.40 ಲಕ್ಷ ರೂಪಾಯಿ ಮತ್ತು ಹೈದರಾಬಾದ್‌ನಲ್ಲಿ 2.60 ಲಕ್ಷ ರೂಪಾಯಿಗಳ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿದೆ. ಚಿನ್ನದ ಬೆಲೆಯೂ ಸಹ ದೆಹಲಿಯಲ್ಲಿ ಹತ್ತು ಗ್ರಾಂಗೆ 1,41,800 ರೂಪಾಯಿಗಳ ಆಸುಪಾಸಿನಲ್ಲಿ ಮುಂದುವರಿಯುತ್ತಿದೆ.
