ಬೆಂಗಳೂರು : ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಹಾಗೂ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2026-27ನೇ ಸಾಲಿಗೆ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನಿಸಿದೆ. ಉದ್ಯೋಗಿನಿ, ಚೇತನ, ಧನಶ್ರೀ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹರು ಅಕ್ಟೋಬರ್ 31ರ ಸಂಜೆ 5.30ರೊಳಗೆ ಅರ್ಜಿ ಸಲ್ಲಿಸಬೇಕು.
ಉದ್ಯೋಗಿನಿ ಯೋಜನೆಯಡಿ ₹3 ಲಕ್ಷದವರೆಗೆ ಸಾಲ:
ಉದ್ಯೋಗಿನಿ ಯೋಜನೆಯಡಿ ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಲು ಬ್ಯಾಂಕ್‌ಗಳ ಮೂಲಕ ಕನಿಷ್ಠ ₹50,000ರಿಂದ ಗರಿಷ್ಠ ₹3 ಲಕ್ಷದವರೆಗೆ ಸಾಲ ಪಡೆಯಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಾರ್ಷಿಕ ಆದಾಯ ₹2 ಲಕ್ಷದೊಳಗಿದ್ದರೆ ಶೇ.75ರಷ್ಟು ಅಥವಾ ಗರಿಷ್ಠ ₹2 ಲಕ್ಷದವರೆಗೆ ಸಹಾಯಧನ ಸಿಗಲಿದೆ. ಇತರ ವರ್ಗದವರಿಗೆ ವಾರ್ಷಿಕ ಆದಾಯ ಮಿತಿ ₹1.50 ಲಕ್ಷವಾಗಿದ್ದು, ಶೇ.30ರಷ್ಟು ಅಥವಾ ಗರಿಷ್ಠ ₹90,000 ಸಹಾಯಧನ ನೀಡಲಾಗುತ್ತದೆ. ವಯೋಮಿತಿ: 21ರಿಂದ 55 ವರ್ಷ.
ಇತರೆ ಯೋಜನೆಗಳ ಪ್ರಯೋಜನ:
ಚೇತನ ಯೋಜನೆಯಡಿ ದಮನಿತ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ₹45,000 ಪ್ರೋತ್ಸಾಹಧನ ನೀಡಲಾಗುತ್ತದೆ. ಧನಶ್ರೀ ಯೋಜನೆಯಡಿ ಎಚ್‌ಐವಿ/ಏಡ್ಸ್ ಸೋಂಕಿತ ಅಥವಾ ಬಾಧಿತ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ₹45,000 ನೆರವು ದೊರೆಯಲಿದೆ.ಇದೇ ರೀತಿ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಯಡಿಯೂ ಆದಾಯೋತ್ಪನ್ನ ಚಟುವಟಿಕೆಗಳಿಗೆ ₹45,000 ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಯೋಜನೆಗಳಿಗೆ ಸಾಮಾನ್ಯವಾಗಿ 20ರಿಂದ 55 ವರ್ಷದೊಳಗಿನವರು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಆದ https://sevasindhu.karnataka.gov.in/Sevasindhu/Kannada ಮೂಲಕ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದು. ಚೇತನ ಮತ್ತು ಧನಶ್ರೀ ಯೋಜನೆಗಳಿಗೆ ಅಗತ್ಯ ದಾಖಲೆಗಳೊಂದಿಗೆ ಆಫ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸುವ ಅವಕಾಶವಿದೆ.ಅರ್ಜಿದಾರರ ಆಧಾರ್‌ಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಅಥವಾ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವನ್ನು ಸಂಪರ್ಕಿಸಬಹುದು.
