Home ದೇಶ ಪ್ರಧಾನಿಯ ಭಾಷಣ ರದ್ದು; ಭದ್ರತಾ ನೆಪದಲ್ಲಿ ಸರ್ಕಾರದ ಕಟ್ಟುಕಥೆ: ಪ್ರತಿಪಕ್ಷಗಳ ಆರೋಪ

ಪ್ರಧಾನಿಯ ಭಾಷಣ ರದ್ದು; ಭದ್ರತಾ ನೆಪದಲ್ಲಿ ಸರ್ಕಾರದ ಕಟ್ಟುಕಥೆ: ಪ್ರತಿಪಕ್ಷಗಳ ಆರೋಪ

0

ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡಬೇಕಿದ್ದ ಮಹತ್ವದ ದಿನದಂದು, ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಗೆ ಹಾಜರಾಗದೆ ಉಳಿದಿರುವುದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿಗೆ ಯಾವುದೇ ನಿಜವಾದ ಭದ್ರತಾ ಬೆದರಿಕೆ ಇರಲಿಲ್ಲ, ಇದರೂ ಕೂಡ ಭದ್ರತಾ ನೆಪ ಮುಂದಿಟ್ಟು ಸರ್ಕಾರವೇ ಉದ್ದೇಶಪೂರ್ವಕವಾಗಿ ಪ್ರಧಾನಿಯ ಭಾಷಣವನ್ನು ರದ್ದುಗೊಳಿಸಿದೆ ಎಂದು ಪ್ರತಿಪಕ್ಷಗಳು ಗಂಭೀರ ಆರೋಪಗಳನ್ನು ಮಾಡಿವೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು “ವಿಶ್ವಾಸಾರ್ಹ ಭದ್ರತಾ ಮಾಹಿತಿ” ಆಧರಿಸಿ ಪ್ರಧಾನಿಗೆ ಸದನ ಪ್ರವೇಶಿಸದಂತೆ ಸಲಹೆ ನೀಡಲಾಗಿದೆ ಎಂದು ಹೇಳಿರುವುದನ್ನು ಪ್ರತಿಪಕ್ಷಗಳು ಪ್ರಶ್ನಿಸಿದ್ದು, ಈ ಮಾಹಿತಿ ಯಾರಿಂದ, ಯಾವ ರೀತಿಯಲ್ಲಿ, ಯಾವ ಮಟ್ಟದ ಬೆದರಿಕೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿವೆ.

ಪ್ರಧಾನಿ ಸಂಸತ್ತಿಗೆ ಬರದೇ ಉಳಿದಿರುವುದು ಸರ್ಕಾರದ ವೈಫಲ್ಯ ಹಾಗೂ ರಾಜಕೀಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸುವುದು ಪ್ರಧಾನಿಯ ಸಂವಿಧಾನಾತ್ಮಕ ಕರ್ತವ್ಯವಾಗಿದ್ದು, ಅದನ್ನು ತಪ್ಪಿಸಿಕೊಳ್ಳಲು ಭದ್ರತೆಯನ್ನು ನೆಪವಾಗಿ ಬಳಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರವೇ ಸದನದಲ್ಲಿ ಗೊಂದಲ ಸೃಷ್ಟಿಸಿ ನಂತರ ಅದನ್ನೇ ನೆಪವನ್ನಾಗಿ ಮಾಡಿಕೊಂಡು ಪ್ರಧಾನಿಯ ಉತ್ತರವನ್ನು ಮುಂದೂಡಿಸಿದೆ ಎಂಬ ಆರೋಪವೂ ಕೇಳಿಬಂದಿದೆ. ಸದನದೊಳಗಿನ ಅವ್ಯವಸ್ಥೆಗೆ ಸರ್ಕಾರ ಹಾಗೂ ಆಡಳಿತ ಪಕ್ಷವೇ ಹೊಣೆ ಎಂದು ಪ್ರತಿಪಕ್ಷಗಳು ಸ್ಪಷ್ಟಪಡಿಸಿವೆ.

ಇನ್ನು, ಲೋಕಸಭಾ ಸಚಿವಾಲಯದ ಮೂಲಗಳು ನೀಡಿರುವ ‘ಅವ್ಯವಸ್ಥೆ’ ಸಂಬಂಧಿತ ಆರೋಪಗಳನ್ನು ಪ್ರತಿಪಕ್ಷಗಳು ತಿರಸ್ಕರಿಸಿದ್ದು, ಆಡಳಿತ ಪಕ್ಷವು ವಿರೋಧ ಪಕ್ಷದ ಮೇಲೆ ತಪ್ಪು ಹೊರೆ ಹಾಕಿ, ನಿಜವಾದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಈ ರೀತಿಯ ಕಥನವನ್ನು ರೂಪಿಸಿದೆ ಎಂದು ಹೇಳಿದ್ದಾರೆ.

ಪ್ರಧಾನಿಯ ಆಸನದ ಕಡೆಗೆ ಸಂಸದರು ಧಾವಿಸಿದರು ಎಂಬ ಆರೋಪಗಳು ಸಂಪೂರ್ಣವಾಗಿ ಅತಿರೇಕವಾಗಿದ್ದು, ಸದನದ ಭದ್ರತೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.

You cannot copy content of this page

Exit mobile version