ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಆಂಬುಲೆನ್ಸ್ 108 ಕಾಲ್ ಸೆಂಟರ್ ಸೇವೆಯ ತಾಂತ್ರಿಕ ಸಮಸ್ಯೆಯಿಂದ ಸರಿಯಾದ ಸಮಯಕ್ಕೆ ಸೇವೆ ಸಿಗದಿರದಿರುವ ಕಾರಣ, ಮಧುಗಿರಿ ತಾಲೂಕಿನ ಐಡಿಹಳ್ಳಿಯಲ್ಲಿ ಮಹಿಳೆಯೊಬ್ಬರು ಮೃತಪಟಿರುವ ಘಟನೆ ಕುರಿತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ವಾಗ್ದಾಳಿ ನಡೆಸಿದೆ.
ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಜಯ್ಯಮ್ಮ(65) ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಹಲವು ಬಾರಿ ಆಂಬುಲೆನ್ಸ್ 108 ಕ್ಕೆ ಕರೆ ಮಾಡಲಾಗಿದ್ದು, 108 ಕಾಲ್ ಸೆಂಟರ್ ಸೇವೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸೇವೆ ದೊರಕದ ಕಾರಣ ಮಹಿಳೆ ಮನೆಯಲ್ಲೇ ಸಾವನ್ನಪ್ಪಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, 108 ಆಂಬುಲೆನ್ಸ್ ಸಿಬ್ಬಂದಿಗೆ ವೇತನ ನೀಡದೆ ಸತಾಯಿಸಿದ್ದ ಸರ್ಕಾರ ಈಗ 108 ಕಾಲ್ ಸೆಂಟರ್ ಸೇವೆ ನಿರ್ವಹಿಸುವುದರಲ್ಲೂ ವಿಫಲವಾಗಿದೆ. ರಾಜಕೀಯ ಹೇಳಿಕೆ ಕೊಡಲು ಅತ್ಯತ್ಸಾಹದಿಂದ ಓಡೋಡಿ ಬರುವ ಸಚಿವ ಸುಧಾಕರ್ ಅವರಿಗೆ ತಮ್ಮ ಇಲಾಖೆಯ ಕೆಲಸಗಳನ್ನು ನಿರ್ವಹಿಸಲು ಮಾತ್ರ ಸಮಯವೂ ಇಲ್ಲ, ಆಸಕ್ತಿಯೂ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಘಟಕ ಕಿಡಿಕಾರಿದೆ.