Home ಬೆಂಗಳೂರು  ಹೊಸ ಸ್ಟಾರ್ಟ್‌ಅಪ್‌ಗಳಿಗೆ ಸಾಥ್‌ ನೀಡಲು ಸರ್ಕಾರದ ಹೊಸ ಹೆಜ್ಜೆ – 25 ಲಕ್ಷದವರೆಗೆ ನೆರವು

 ಹೊಸ ಸ್ಟಾರ್ಟ್‌ಅಪ್‌ಗಳಿಗೆ ಸಾಥ್‌ ನೀಡಲು ಸರ್ಕಾರದ ಹೊಸ ಹೆಜ್ಜೆ – 25 ಲಕ್ಷದವರೆಗೆ ನೆರವು

0

ಬೆಂಗಳೂರು: ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ (Cabinet) ಸಭೆಯಲ್ಲಿ ಎಲಿವೇಟ್ ಸ್ಟಾರ್ಟ್‌ಅಪ್‌ ಪಾಲಿಸಿ 2025-2030ಗೆ Elevate Startup Policy 2025–2030ರ ಅಡಿಯಲ್ಲಿ ಸರ್ಕಾರ ಮೊದಲು ಯೋಜನೆಗೆ ‘ಜಾರಿಗೆ ತರಲು ಅನುಮೋದನೆ ನೀಡಲಾಗಿದೆ ಎಂದು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.

ಪ್ರತಿ ಸ್ಟಾರ್ಟ್‌ಅಪ್‌ಗೆ ₹25 ಲಕ್ಷದವರೆಗೆ ಹಣಕಾಸು ನೆರವು

ಮೂರು ವರ್ಷಗಳಲ್ಲಿ ಒಟ್ಟು ₹25 ಕೋಟಿ ವೆಚ್ಚದಲ್ಲಿ ಸುಮಾರು 100 ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರಿ ಇಲಾಖೆಗಳೊಂದಿಗೆ ಪ್ರಾಯೋಗಿಕ ಪರೀಕ್ಷೆ, ಮೌಲ್ಯಮಾಪನ ಹಾಗೂ ಯಶಸ್ವಿಯಾದ ಪರಿಹಾರಗಳ ಸರ್ಕಾರಿ ಖರೀದಿ ಮತ್ತು ವಿಸ್ತರಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ಸ್ಟಾರ್ಟ್‌ಅಪ್‌ಗೆ ಪೈಲಟ್‌ ಯೋಜನೆಗಾಗಿ ಗರಿಷ್ಠ ₹25 ಲಕ್ಷದವರೆಗೆ ಹಣಕಾಸು ನೆರವು ದೊರೆಯಲಿದೆ.

ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿ, “ಸರ್ಕಾರ ಕೇವಲ ಸ್ಟಾರ್ಟ್‌ಅಪ್‌ಗಳನ್ನು ಪ್ರೋತ್ಸಾಹಿಸುವುದಲ್ಲ. ಅವರ ಹೊಸ ಆಲೋಚನೆಗಳನ್ನು ಪರೀಕ್ಷಿಸಿ, ಯಶಸ್ವಿಯಾದರೆ ಸರ್ಕಾರವೇ ಮೊದಲ ಗ್ರಾಹಕನಾಗಿ ಅಳವಡಿಸಿಕೊಳ್ಳಲಿದೆ,” ಎಂದರು. ಸರ್ಕಾರಿ ಇಲಾಖೆಗಳು ತಮ್ಮ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಗುರುತಿಸಿ ಪರಿಹಾರಗಳನ್ನು ಆಹ್ವಾನಿಸಬಹುದು. ಸ್ಟಾರ್ಟ್‌ಅಪ್‌ಗಳೂ ತಮ್ಮ ನವೀನ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಸರ್ಕಾರಕ್ಕೆ ನೇರವಾಗಿ ಪ್ರಸ್ತಾಪಿಸಬಹುದು. ಆಯ್ಕೆಯಾದ ಪರಿಹಾರಗಳನ್ನು ಮೊದಲು ನೈಜ ಸರ್ಕಾರಿ ಪರಿಸರದಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಿ, ಫಲಿತಾಂಶದ ಆಧಾರದ ಮೇಲೆ ಖರೀದಿ ಮತ್ತು ಇತರ ಇಲಾಖೆಗಳಲ್ಲೂ ವಿಸ್ತರಣೆಗೆ ಪರಿಗಣಿಸಲಾಗುತ್ತದೆ.

ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ, ವಸ್ತುಗಳ ಅಂತರ್ಜಾಲ, ಅಂಕೀಯ ಸರಪಳಿ ತಂತ್ರಜ್ಞಾನ, ಡಿಜಿಟಲ್ ಆಡಳಿತ, ಕೃಷಿ, ಆರೋಗ್ಯ, ಶಿಕ್ಷಣ, ನಗರಾಡಳಿತ, ಮೂಲಸೌಕರ್ಯ ಮತ್ತು ವಿಪತ್ತು ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನವೀನ ಪರಿಹಾರಗಳಿಗೆ ಅವಕಾಶ ದೊರೆಯಲಿದೆ. ಯೋಜನೆಯನ್ನು ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (KITS) ಹಾಗೂ ಐಟಿ-ಬಿಟಿ ಇಲಾಖೆ ಅನುಷ್ಠಾನಗೊಳಿಸಲಿದ್ದು, ತಜ್ಞರು ಮತ್ತು ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಗಳು ಪರಿಹಾರಗಳ ಆಯ್ಕೆ, ತಾಂತ್ರಿಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ನಡೆಸಲಿವೆ.

ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರವೇ ಅವಕಾಶ ನೀಡಲಿದೆ

“ಸ್ಟಾರ್ಟ್‌ಅಪ್‌ಗಳಿಗೆ ಕೇವಲ ಅನುದಾನವಲ್ಲ, ಮಾರುಕಟ್ಟೆ ಮತ್ತು ನೈಜ ಅವಕಾಶವೂ ಬೇಕು. Government First ಮೂಲಕ ಸರ್ಕಾರವೇ ಆ ಅವಕಾಶವನ್ನು ನೀಡಲಿದೆ,” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕರ್ನಾಟಕವನ್ನು ನಾವೀನ್ಯತೆ ಆಧಾರಿತ ಸರ್ಕಾರಿ ಖರೀದಿಯಲ್ಲಿ ದೇಶದ ಪ್ರಮುಖ ಮಾದರಿಯನ್ನಾಗಿ ರೂಪಿಸುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದೂ ಐಟಿ ಬಿಟಿ ಸಚಿವರು ತಿಳಿಸಿದ್ದಾರೆ.

You cannot copy content of this page

Exit mobile version