Home ಬ್ರೇಕಿಂಗ್ ಸುದ್ದಿ ಹನೂರು: ಕುಡಿಯುವ ನೀರಿಗಾಗಿ ಆಹಾಕಾರ – ರೈತ ಸಂಘದಿಂದ ಬೃಹತ್ ಪ್ರತಿಭಟನೆ

ಹನೂರು: ಕುಡಿಯುವ ನೀರಿಗಾಗಿ ಆಹಾಕಾರ – ರೈತ ಸಂಘದಿಂದ ಬೃಹತ್ ಪ್ರತಿಭಟನೆ

0

ಹನೂರು: ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದ್ದು, ಜನ-ಜಾನುವಾರುಗಳಿಗೆ ನೀರು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹನೂರು ಘಟಕದಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಕೆಂಪೇಗೌಡ ವೃತ್ತದಿಂದ ಮೆರವಣಿಗೆ ಆರಂಭಿಸಿದ ರೈತರು, ತಮ್ಮ ಬೇಡಿಕೆಗಳ ಫಲಕ ಹಿಡಿದು ಘೋಷಣೆ ಕೂಗುತ್ತಾ ಮುಖ್ಯರಸ್ತೆ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ಪ್ರತಿಭಟನಾ ಸಭೆ ನಡೆಸಿದರು.

ಅಧಿಕಾರಿಗಳ ವಿರುದ್ಧ ಆಕ್ರೋಶ: ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, “ಬೇಸಿಗೆಯಲ್ಲಿ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಶಾಶ್ವತ ಪರಿಹಾರ ಕಲ್ಪಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಚೈತ್ರಾ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ತಹಶೀಲ್ದಾರ್, ಸಂಬಂಧಪಟ್ಟ ಇಲಾಖೆಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ವೇಳೆ ಚೆಸ್ಕಾಂ ಎಇಇ ರಂಗಸ್ವಾಮಿ, ನೀರಾವರಿ ಇಲಾಖೆಯ ರಮೇಶ್, ತಾ.ಪಂ ಇಓ ಶ್ರೀಧರ್ ಅವರು ಸ್ಥಳಕ್ಕೆ ಆಗಮಿಸಿ ರೈತರ ಅಹವಾಲು ಆಲಿಸಿದರು.

ಪ್ರಮುಖ ಬೇಡಿಕೆಗಳು:

  • 490 ಕೋಟಿ ವೆಚ್ಚದ ಉಡುತೊರೆ ಹಳ್ಳ ಜಲಾಶಯ ಯೋಜನೆಗೆ ಶೀಘ್ರ ಚಾಲನೆ
  • ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ
  • ಜಾನುವಾರುಗಳಿಗೆ ಮೇವು ಬ್ಯಾಂಕ್ ತೆರೆಯಬೇಕು, ಪಶು ವೈದ್ಯರ ನೇಮಕ
  • ವಿದ್ಯುತ್ ಕೊರತೆ ನಿವಾರಣೆ
  • ಸರ್ಕಾರಿ ಶಾಲೆಗಳ ಅಭಿವೃದ್ಧಿ
  • ರೈತರಿಗೆ ಸಾಗುವಳಿ ಚೀಟಿ ಹಾಗೂ ಪೋಡಿ

ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಬೋರಾಪುರ ಶಂಕರಪ್ಪ, ನೇತ್ರಾವತಿ, ರಮ್ಯಾ ರಾಮಣ್ಣ, ಭಾಸ್ಕರ, ಪಳನಿಸ್ವಾಮಿ, ಪೂಂಗುಡಿ, ಗೋಪಾಲ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

You cannot copy content of this page

Exit mobile version